
ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ದಾವಣಗೆರೆ (ಏ.06): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ದಿನವಿಡೀ ಸರಣಿ ಸಭೆಗಳು, ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರೊಂದಿಗೆ ನಡೆಸಿದ ಚರ್ಚೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರತಿ ಬೂತ್ನಲ್ಲಿ ನಮ್ಮ ಅಭ್ಯರ್ಥಿ ಪರವಾಗಿ ಪರಿಸ್ಥಿತಿ, ವಾತಾವರಣ ಹೇಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ನಮ್ಮ ಬೂತಿನ ಪ್ರಮುಖರ ಆತ್ಮವಿಶ್ವಾಸ ನೋಡಿದರೆ, ಅತಿ ಹೆಚ್ಚು ಲೀಡ್ ಪಡೆಯುವ ಮಾತನಾಡುತ್ತಿದ್ದಾರೆ. ಇದೆಲ್ಲಾ ನೋಡಿದಾಗ ದಾವಣಗೆರೆ ದಕ್ಷಿಣದಲ್ಲಿ ಐತಿಹಾಸಿಕ ಗೆಲುವು ಬಿಜೆಪಿ ಅಭ್ಯರ್ಥಿಯದ್ದಾಗಲಿದೆ. ಅಲ್ಪಸಂಖ್ಯಾತರು, ಹಿಂದೂಗಳು ಸೇರಿ ಮತದಾರರು ಕಾಂಗ್ರೆಸ್ಸಿನ ವಿರುದ್ಧ ಆಕ್ರೋಶಿತರಾಗಿದ್ದಾರೆ. ಯಾರಿಗೂ ಕಾಂಗ್ರೆಸ್ ಪರ ಮತಯಾಚನೆ ಮಾಡುವ ಧೈರ್ಯ ಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮತ್ತಷ್ಟು ಹುರುಪು
ಕೇಂದ್ರ ಸಚಿವರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಾವಣಗೆರೆಗೆ ಬಂದು, ಬೆಂಬಲ ನೀಡಿರುವುದು ಮತ್ತಷ್ಟು ಹುರುಪು ತಂದಿದೆ. ನಮ್ಮ ಮಿತ್ರ ಪಕ್ಷ ಜೆಡಿಎಸ್ ಮುಖಂಡರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರೂ ಪ್ರಚಾರದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳಾದಿಯಾಗಿ ಇಡೀ ಸಚಿವ ಸಂಪುಟವೇ ವಿಧಾನಸೌಧದ ಮೂರನೇ ಮಹಡಿಯನ್ನು ಮರೆತು, ಉಭಯ ಕ್ಷೇತ್ರಗಳಲ್ಲಿ ಬಂದು ಕೂತಿದ್ದಾರೆಂದರೆ ಅದೆಷ್ಟರಮಟ್ಟಿಗೆ ಹತಾಶರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಉಪ ಚುನಾವಣೆ ಹಿನ್ನೆಲೆ ಕೆಲವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಹತಾಶೆ ಏನೆಂಬುದು ಸ್ಪಷ್ಟಗೊಂಡಿದೆ. ಡಾ.ಪರಮೇಶ್ವರ್ ಆದಿಯಾಗಿ ಜಗತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವಿಕತೆಯನ್ನು ಮರೆತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕುಟುಕಿದರು. ಮಾಜಿ ಸಚಿವ ಆರಗ ಜ್ಞಾನೇಂದ್ರ, ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪಿ.ಸಿ. ಶ್ರೀನಿವಾಸ ಭಟ್, ಬಿ.ಎಸ್. ಜಗದೀಶ, ಆರ್.ಎಲ್. ಶಿವಪ್ರಕಾಶ, ಧನಂಜಯ ಕಡ್ಲೇಬಾಳು, ಅಣಜಿ ಅಣ್ಣೇಶ, ಮುಕುಂದ, ಎಚ್.ಪಿ.ವಿಶ್ವಾಸ, ಡಿ.ಎಸ್.ಶಿವಶಂಕರ ಇತರರು ಇದ್ದರು.