Sringeri Election result Twist; ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ! ಹಾಲಿ ಶಾಸಕ ರಾಜೇಗೌಡಗೆ ಆತಂಕ | Karnataka High Court Orders Recount Sringeri Election Postal Ballots Rajegowda Vs Jeevraj Sat

Sringeri Election result Twist; ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ! ಹಾಲಿ ಶಾಸಕ ರಾಜೇಗೌಡಗೆ ಆತಂಕ | Karnataka High Court Orders Recount Sringeri Election Postal Ballots Rajegowda Vs Jeevraj Sat



Sringeri Election result Twist; ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ! ಹಾಲಿ ಶಾಸಕ ರಾಜೇಗೌಡಗೆ ಆತಂಕ | Karnataka High Court Orders Recount Sringeri Election Postal Ballots Rajegowda Vs Jeevraj Sat

ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿದೆ. ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರ ಗೆಲುವನ್ನು ಪ್ರಶ್ನಿಸಿ ಬಿಜೆಪಿಯ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ತೀರ್ಪು ಬಂದಿದೆ. 1,811 ಅಂಚೆ ಮತ ಮರುಪರಿಶೀಲನೆ.

ಬೆಂಗಳೂರು/ಚಿಕ್ಕಮಗಳೂರು (ಏ.06): ಕಾಫಿನಾಡಿನ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ತಿರುವು ಲಭಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಗೆಲುವನ್ನು ಪ್ರಶ್ನಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಅಂಚೆ ಮತಗಳ (Postal Ballots) ಮರು ಎಣಿಕೆಗೆ ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?

ನ್ಯಾಯಮೂರ್ತಿ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಶೃಂಗೇರಿ ಕ್ಷೇತ್ರದ ಒಟ್ಟು 1,811 ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ. ವಿಶೇಷವೆಂದರೆ, ಚುನಾವಣೆಯ ಸಂದರ್ಭದಲ್ಲಿ ರಿಜೆಕ್ಟ್ ಆಗಿದ್ದ 279 ಅಂಚೆ ಮತಗಳ ಕವರ್‌ಗಳನ್ನು ಸಹ ಈಗ ಮರುಪರಿಶೀಲನೆಗೆ ಒಳಪಡಿಸಬೇಕಿದೆ. ಮುಂದಿನ ಎರಡು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಒಟ್ಟು ಮತಗಳನ್ನು ಎಣಿಕೆ ಮಾಡಿ ವಿಜೇತ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಆದರೆ, ನ್ಯಾಯಾಲಯವು ಪ್ರಸ್ತುತ ಶಾಸಕರ ಸ್ಥಾನವನ್ನು ಅಸಿಂಧುಗೊಳಿಸಿಲ್ಲ. ಕೇವಲ ಅಂಚೆ ಮತಗಳ ಎಣಿಕೆಯಲ್ಲಿನ ದೋಷಗಳನ್ನು ಸರಿಪಡಿಸಲು ಸೂಚಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜೇಗೌಡ ಅವರ ಪರ ವಕೀಲರು ಸಮಯ ಕೋರಿದ ಹಿನ್ನೆಲೆಯಲ್ಲಿ, ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಲಾಗಿದೆ.

ಜೀವರಾಜ್ ಅವರ ಹೋರಾಟಕ್ಕೆ ಸಿಕ್ಕ ಜಯ:

ಕಳೆದ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಸಂದರ್ಭದಲ್ಲಿ 279 ಅಂಚೆ ಮತಗಳನ್ನು ಚುನಾವಣಾಧಿಕಾರಿಗಳು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದ್ದರು. “ನಾನು ಗೆಲ್ಲುವ ಎಲ್ಲಾ ಸಾಧ್ಯತೆಗಳಿದ್ದರೂ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ” ಎಂದು ಆರೋಪಿಸಿ ಡಿ.ಎನ್. ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು.

ಫಲಿತಾಂಶದ ದಿನ ನಡೆದಿದ್ದೇನು? – ಜೀವರಾಜ್ ಹೇಳಿಕೆ:

ಕೋರ್ಟ್ ಆದೇಶದ ಬಳಿಕ ಮಾತನಾಡಿದ ಮಾಜಿ ಶಾಸಕ ಜೀವರಾಜ್, ‘ಎಣಿಕೆ ದಿನ ಮೊದಲು ನಾನು 40 ಮತಗಳಿಂದ ಗೆದ್ದಿದ್ದೇನೆ ಎಂದು ಹೇಳಲಾಗಿತ್ತು. ನಂತರ 151 ಮತಗಳ ಅಂತರ ಬಂತು. ಸಂಜೆ ಹೊತ್ತಿಗೆ ರಾಜೇಗೌಡರು 201 ಮತಗಳಿಂದ ಗೆದ್ದರು ಎಂದು ಘೋಷಿಸಲಾಯಿತು. ಈ ಗೊಂದಲವೇ ನನಗೆ ಅನುಮಾನ ಮೂಡಿಸಿತ್ತು. ಪ್ರೊಸೀಡಿಂಗ್ ಆಫೀಸರ್ ಸಹಿ ಹಾಕಿಲ್ಲ ಎಂಬ ಸಣ್ಣ ಕಾರಣಕ್ಕೆ 279 ಅಂಚೆ ಕವರ್‌ಗಳನ್ನು ಓಪನ್ ಮಾಡಿರಲಿಲ್ಲ. ಈಗ ಆ ಎಲ್ಲಾ 1,811 ಮತಗಳ ಮರು ಎಣಿಕೆಗೆ ಆದೇಶ ಬಂದಿರುವುದು ನನಗೆ ಆಶಾವಾದ ಮೂಡಿಸಿದೆ. ಮರು ಎಣಿಕೆಯಲ್ಲಿ ಪಾರದರ್ಶಕತೆ ಇದ್ದರೆ ನಾನು 40 ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

ಮುಂದಿನ ಹಾದಿಯೇನು?

ರಾಜೇಗೌಡರು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೂರು ಬಾರಿ ಈ ಪ್ರಕರಣವನ್ನು ವಜಾ ಮಾಡಿಸುವಂತೆ ಅವರು ಸುಪ್ರೀಂಕೋರ್ಟ್ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೀವರಾಜ್ ಟೀಕಿಸಿದ್ದಾರೆ. ಒಂದು ವೇಳೆ ಎರಡು ವಾರಗಳ ತಡೆಯಾಜ್ಞೆ ಮುಗಿದ ನಂತರ ಮರು ಎಣಿಕೆ ನಡೆದರೆ, ಶೃಂಗೇರಿ ಕ್ಷೇತ್ರದ ಫಲಿತಾಂಶ ಅದಲುಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಟ್ಟಾರೆಯಾಗಿ, ಈ ಕಾನೂನು ಸಮರವು ಶೃಂಗೇರಿ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಅಂಚೆ ಮತಗಳ ಎಣಿಕೆಯಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.



Source link

Leave a Reply

Your email address will not be published. Required fields are marked *