
ಇರಾನ್‌ನಲ್ಲಿ ಕಣ್ಮರೆಯಾದ ಪೈಲಟ್ ರಕ್ಷಣೆಗಾಗಿ ಅಮೆರಿಕ ನಡೆಸಿದ ಬೃಹತ್ ಕಾರ್ಯಾಚರಣೆಯು ಕೇವಲ ನಾಟಕವಿರಬಹುದು ಎಂದು ಶಂಕಿಸಲಾಗಿದೆ. ಕಾರ್ಯಾಚರಣೆಯ ಸ್ಥಳ ಮತ್ತು ಅದರ ಪ್ರಮಾಣವನ್ನು ಗಮನಿಸಿದರೆ, ಇದು ಇಸ್ಫಹಾನ್ ಪರಮಾಣು ಘಟಕದಿಂದ ಯುರೇನಿಯಂ ಕದಿಯುವ ವಿಫಲ ಯತ್ನವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಅನುಮಾನ ಬಂದಿದ್ದು ಏಕೆ?
- ಅಮೆರಿಕದ ವಿಮಾನ ಪತನಗೊಂಡ ಸ್ಥಳವೇ ಬೇರೆ, ಶನಿವಾರ ಅಮೆರಿಕ ನಡೆಸಿದ ಕಾರ್ಯಾಚರಣೆ ಸ್ಥಳವೇ ಬೇರೆ
- ಜೊತೆಗೆ ಶನಿವಾರ ಒಬ್ಬ ಯೋಧನ ರಕ್ಷಣೆಗೆ ಅಮೆರಿಕ 10ಕ್ಕೂ ಹೆಚ್ಚು ವಿಮಾನಗಳನ್ನು ತರುವ ಅವಶ್ಯಕತೆ ಇರಲಿಲ್ಲ
- ಅಮೆರಿಕ ಕಾರ್ಯಾಚರಣೆ ನಡೆಸಿದ ಸ್ಥಳ ಇರಾನ್ ಪರಮಾಣು ಘಟಕ ಇರುವ ಇಸ್ಫಹಾನ್‌ಗೆ ಸಮೀಪದಲ್ಲೇ ಇದೆ
- ಹೀಗಾಗಿ ಅಣು ಘಟಕ, ಬಂಕರ್ ಮೇಲೆ ದಾಳಿ ನಡೆಸಿ ಯುರೇನಿಯಂ ಸಂಗ್ರಹ ಉದ್ದೇಶ ಅಮೆರಿಕ್ಕಕ್ಕೆ ಇತ್ತೆಂಬ ಶಂಕೆ
- ಆದರೆ ಪ್ಲ್ಯಾನ್ ವಿಫಲ ಬಳಿಕ ತನ್ನ ಯೋಜನೆ ಬಹಿರಂಗವಾಗಬಾರದೆಂದು ತನ್ನದೇ ವಿಮಾನಕ್ಕೆ ಬೆಂಕಿ ಹಚ್ಚಿದ ಗುಮಾನಿ
ವಾಷಿಂಗ್ಟನ್: 3 ದಿನಗಳ ಹಿಂದೆ ಅಮೆರಿಕದ ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧವಿಮಾನವನ್ನು ಇರಾನ್ ಹೊಡೆದುರುಳಿಸಿದ ಬಳಿಕ ಕಣ್ಮರೆಯಾಗಿದ್ದ ತನ್ನ ವಾಯುಪಡೆ ಯೋಧನನ್ನು ಮೈನವಿರೇಳಿಸುವ ರೋಚಕ ಕಾರ್ಯಾಚರಣೆ ನಡೆಸಿ ಅಮೆರಿಕ ಸುರಕ್ಷಿತವಾಗಿ ವಾಪಸ್ ಕರೆತಂದಿತ್ತು. ಇದಕ್ಕೆ ನೂರಾರು ಯೋಧರನ್ನು ಬಳಸಿದ್ದಲ್ಲದೆ, ಮರಳಲ್ಲಿ ಹೂತುಹೋದ ತನ್ನ 2 ಸಿ-130 ವಿಮಾನಗಳಿಗೆ ತಾನೇ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿತ್ತು. ಅಮೆರಿಕದ ಈ ಸಾಹಸಕ್ಕೆ ವಿಶ್ವವೇ ನಿಬ್ಬೆರಗಾಗಿತ್ತು. ಆದರೆ ವಿಮಾನ ಪತನ ಮತ್ತು ಪೈಲಟ್ ಕಣ್ಮರೆಯೆಂಬುದು ಕೇವಲ ಕಥೆ ಮಾತ್ರ. ನಿಜವಾಗಿ ಇದು ಇರಾನ್ ಸಂಗ್ರಹದಲ್ಲಿರುವ ಯುರೇನಿಯಂ ಅನ್ನು ಕದಿಯುವ ಗುಪ್ತ ಕಾರ್ಯಾಚರಣೆಯಾಗಿದ್ದಿರಬಹುದೆಂಬ ವಿಶ್ಲೇಷಣೆಯೊಂದು ಕೇಳಿಬಂದಿದೆ.
ಅಮೆರಿಕ ವಾಯುಪಡೆ ಯೋಧ (ಶಸ್ತ್ರಾಸ್ತ್ರ ಅಧಿಕಾರಿ), ಇರಾನ್‌ನ ಕೊಹ್ಕಿಲೌಯೆಹ್ ಮತ್ತು ಬಾಯೆರ್-ಅಹ್ಮದ್ ಪ್ರಾಂತ್ಯದ ಗುಡ್ಡಗಾಡು ಪ್ರದೇಶದಲ್ಲಿ ಕಾಣೆಯಾಗಿದ್ದರು. ಇರಾನ್‌ನ ಅತಿ ಸಮೃದ್ಧಗೊಳಿಸಿದ ಶೇ.60ರಷ್ಟು ಯುರೇನಿಯಂ (ಅಂದಾಜು 440–970 ಪೌಂಡ್) ಸಂಗ್ರಹವು ಇಸ್ಫಹಾನ್ ಪ್ರದೇಶದಲ್ಲಿದೆ. ಆತ ‘ಕಾಣೆಯಾದ’ ಸ್ಥಳವೂ ಅದೇ ಇಸ್ಫಹಾನ್ ಪ್ರದೇಶ. ಇದೇ ಕಾರಣಕ್ಕೆ ಅಮೆರಿಕ ಅಲ್ಲಿಗೆ ತೆರಳಿ ಯುರೇನಿಯಂ ಅನ್ನು ವಶಕ್ಕೆ ಪಡೆಯಲು ಗುಪ್ತ ಸಂಚು ರೂಪಿಸಿತ್ತು. ಆದರೆ ಕಾರ್ಯಾಚರಣೆ ವಿಫಲವಾದಾಗ, ಸಾಕ್ಷ್ಯಗಳನ್ನು ನಾಶಪಡಿಸಲು ಅಮೆರಿಕ ತನ್ನದೇ ಎರಡು ಸಿ-130 ವಿಮಾನಗಳನ್ನು ಸ್ಫೋಟಗೊಳಿಸಿತು ಎನ್ನಲಾಗುತ್ತಿದೆ.
ಒಬ್ಬ ಸಿಬ್ಬಂದಿಯನ್ನು ರಕ್ಷಿಸಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳು ಮತ್ತು ನೂರಾರು ಸೈನಿಕರನ್ನು ಬಳಸುವುದು ಸಾಮಾನ್ಯವಲ್ಲ ಎಂಬ ವಾದ ಕೇಳಿಬರುತ್ತಿದೆ.
ಇರಾನ್‌ಗೂ ಶಂಕೆ:
ಇನ್ನು, ಅಮೆರಿಕದ ಕಾರ್ಯಾಚರಣೆ ತಮ್ಮ ಯುರೇನಿಯಂ ಸಂಗ್ರಹವನ್ನು ಕದಿಯಲು ನಡೆಸಿದ ಯತ್ನವಿರಬಹುದು ಎಂದು ಇರಾನ್ ಸಂಶಯಿಸಿದೆ.
ವಿದೇಶಾಂಗ ಸಚಿವಾಲಯದ ಮುಖ್ಯ ವಕ್ತಾರ ಎಸ್ಮಾಯೀಲ್ ಬಖಾಯಿ ಮಾತನಾಡಿ, ‘ಈ ಆಪರೇಷನ್, ಸಂಸ್ಕರಣೆಗೊಂಡ ಯುರೇನಿಯಂ ಕದಿಯುವ ಉದ್ದೇಶದಿಂದ ನಡೆಸಿದ ಮೋಸದ ಕಾರ್ಯಾಚರಣೆಯಾಗಿರಬಹುದು ಎಂಬ ಸಾಧ್ಯತೆಯನ್ನು ಪೂರ್ಣವಾಗಿ ಕಡೆಗಣಿಸುವಂತಿಲ್ಲ. ಅಮೆರಿಕ ಪೈಲಟ್ ಕೊಹ್ಕಿಲೌಯೆಹ್ ಮತ್ತು ಬಾಯೆರ್-ಅಹ್ಮದ್ ಪ್ರಾಂತ್ಯದಲ್ಲಿ ಅಡಗಿದ್ದಾನೆ ಎಂದು ಹೇಳಿತು. ಆದರೆ ಅಮೆರಿಕದ ಪಡೆಗಳು ಇಳಿದ ಸ್ಥಳವು ಮಧ್ಯ ಇರಾನ್‌ನ ಇಸ್ಫಹಾನ್ ಪ್ರದೇಶದಲ್ಲಿದೆ. ಈ 2 ಸ್ಥಳಗಳ ನಡುವೆ ಬಹಳ ದೂರವಿದೆ. ಇದು ಅನೇಕ ಪ್ರಶ್ನೆಗಳು ಮತ್ತು ಅನುಮಾನಗಳನ್ನು ಉಂಟುಮಾಡುತ್ತಿದೆ’ ಎಂದಿದ್ದಾರೆ.