ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San

ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San



ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್‌ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San

ದೆಹಲಿ ಕನ್ನಡ ಸಂಘದ ಚುನಾವಣೆಯು ಗೂಬೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದರಿಂದ ವಿವಾದಕ್ಕೆ ಕಾರಣವಾಗಿದೆ. ಗೂಬೆ ಶುಭವೋ ಅಶುಭವೋ ಎಂಬ ಚರ್ಚೆಯ ನಡುವೆ, ದುಬಾರಿ ಉಡುಗೊರೆಗಳು ಮತ್ತು ಹಣ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

ಡೆಲ್ಲಿ ಮಂಜು, ಏಷ್ಯಾನೆಟ್‌ ಸುವರ್ಣನ್ಯೂಸ್‌ ದೆಹಲಿ ಪ್ರತಿನಿಧಿ

ನವದೆಹಲಿ (ಏ.8): ಗೂಬೆಯಾಟವಯ್ಯ.. ಇದು ಗೂಬೆಯಾಟವಯ್ಯ..! ಇದು ಸಾಂಗ್ ಆಗಿದ್ರೆ ಪರವಾಗಿಲ್ಲ ಆದ್ರೆ ಈ ಗೂಬೆ ದೆಹಲಿಯ ಕನ್ನಡ ಸಂಘದಲ್ಲಿ ಜಟಾಪಟಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣ ಇಷ್ಟೆ ದೆಹಲಿ ಕನ್ನಡ ಸಂಘಕ್ಕೆ ಚುನಾವಣೆ. ಗೂಬೆ ಶುಭ ಸಂಕೇತವಾ? ಅಥವಾ ಅಶುಭವಾ?..ಎನ್ನುವ ಚರ್ಚೆ ಒಂದು ಕಡೆಯಾದ್ರೆ ಸಿಂಗಲ್ ಗೂಬೆಯ ಲೋಹದ ವಿಗ್ರಹ ಊಡುಗೊರೆ ಕೊಟ್ಟಿದ್ದು ಅಥವಾ ಇಸ್ಕೊಂಡಿದ್ದು ಸರಿಯಾ ಅನ್ನೋದು‌ ಮತ್ತೊಂದು ಕಡೆ ಚರ್ಚೆ. ಇಷ್ಟಕ್ಕೂ ಮೀರಿದ ವಿಷಯ ಅಂದ್ರೆ ಮತ ಕೇಳಲು ಬರಲಿರುವ “ಗೂಬೆ ಕೊಡುವ ತಂಡದವರು’ ಮನೆ ಬಾಗಿಲು ತಟ್ಟಿದ ಕೂಡಲೇ ಆ ಮನೆಯಾಕೆ ಗೂಗಲ್ ಮೊರೆ ಹೋಗುತ್ತಿದ್ದಾರಂತೆ.

ಗೂಬೆಯ ವಿಗ್ರಹ ಗಿಫ್ಟ್ ಪಡೆದ್ರೆ ಶುಭವಾ ಅಥವಾ ಅಶುಭವಾ? ಅಂಥ ಗೂಗಲ್ ಮದರ್ ಗೆ ಕೇಳುತ್ತಿದ್ದಾರೆ.. ಮದರ್ ಉತ್ತರ, ಗೂಬೆ ಲಕ್ಷ್ಮಿ ವಾಹನ‌ ಅಂದ ಕೂಡಲೇ ಖುಷಿಯಿಂದ ಮನೆ ಒಡತಿಯು ಎಲೆಕ್ಷನ್ ಗಿಫ್ಟ್ ಇಸ್ಕೊಂಡು ಇಟ್ಟುಕೊಳ್ಳುತ್ತಿದ್ದಾರೆಂತೆ..

ಒಂಟಿ ಗೂಬೆ ವಿಗ್ರಹ ಅಶುಭ…!

ಗೂಗಲ್ ಮದರ್ ನಾನಾ ಉತ್ತರಗಳು ಕೊಟ್ಟು ವಾಸ್ತುಶಾಸ್ತ್ರದಲ್ಲಿ ಗೂಬೆಯ ಮಹತ್ವ ತಿಳಿಸುತ್ತದೆ. ಆದ್ರೆ ಅಲ್ಲಿಯವರಗೆ ಮನೆ ಒಡತಿಯರು ಪೂರ್ತಿ ಓದುವುದೇ ಇಲ್ಲ. ಲಕ್ಷ್ಮಿ ದೇವಿಯ ವಾಹನ ಆಗಿರುವ ಗೂಬೆಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಸ್ಥಾನವಿದ್ದು, ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಶುಭ ಫಲಗಳು ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೀವೂ ನಿಮ್ಮ ಮನೆಯಲ್ಲಿ ಗೂಬೆಯ ಪ್ರತಿಮೆ ಅಥವಾ ಫೋಟೋ ಇಟ್ಟುಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದರೆ ‘ಮಹಾಲಕ್ಷ್ಮಿಯೊಂದಿಗೆ ಇರುವ ಗೂಬೆಯ’ ಚಿತ್ರವನ್ನು ಇಟ್ಟುಕೊಳ್ಳಬಹುದು. ಆದರೆ ಎಂದಿಗೂ ಒಂಟಿ ಗೂಬೆಯ ಚಿತ್ರ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಲ್ಲ.

ಇದನ್ನು ಕೇಳಿದ ದೆಹಲಿ ಮತದಾರ ನಾರಿಮಣಿಯರು ಇದೀಗ ಸಿಂಗಲ್ ಗೂಬೆ ಗಿಫ್ಟ್ ಕೊಟ್ಟಿದ್ದಾರೆ. ಇದರ ಪಕ್ಕ ಅಧಿದೇವತೆ ಲಕ್ಷ್ಮಿ ಮಾತೆ ಕಾಣುತ್ತಿಲ್ಲ. ಯಾರಿಗೆ ಬೇಕು ಈ ಗೂಬೆ ಗಿಫ್ಟ್ ಅಂಥ ಲಟಿಕೆ ಮುರಿಯುತ್ತಿದ್ದಾರೆ.

ರಂಗೇರುತ್ತಿರುವ ಕಣ

ದೆಹಲಿ, ನೊಯ್ಡಾ, ಗುರುಗ್ರಾಮ ಈ ಭಾಗದಲ್ಲಿ ನಮ್ಮ‌ ಕನ್ನಡಿಗರು ಹೆಚ್ಚು ವಾಸಿಸುತ್ತಿದ್ದಾರೆ. ಅಕ್ಷರ, ವಿದ್ಯೆ ಮುಂದಿಟ್ಟುಕೊಂಡು ಉದ್ಯೋಗ ಪಡೆದು ಬಂದವರು, ಖಾಸಗಿ ಉದ್ಯೋಗ ಹಿಡಿದವರು, ಪೊಲೀಸ್, ವಾಯು ಮತ್ತು ಭೂಸೇನೆಯಲ್ಲಿ ಉದ್ಯೋಗ ಪಡೆದವರು ತಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆ ಹೆಸರಲ್ಲಿ ಇಂಥವರನ್ನೆಲ್ಲ ಒಟ್ಟುಗೂಡಿಸುವುದು ಪ್ರಾತಿನಿಧಿಕ ಸಂಸ್ಥೆ ದೆಹಲಿ ಕನ್ನಡ ಸಂಘ. ಕನ್ನಡಿಗರ ಸಂಖ್ಯೆ 10 ಸಾವಿರ ಮಂದಿ ಇರಬಹುದು. ಆದರೆ, ಸದಸ್ಯತ್ವ ಪಡೆದವರು ಕೇವಲ 2300 ಅನ್ನೋದು ಬೇರೆ ಮಾತು. ಇನ್ನು ಕೆಲವು ಅಭ್ಯರ್ಥಿಗಳು ಸೀರೆ ಹಂಚುವುದು, ಮನೆಯಲ್ಲಿ ಐದಾರು ಓಟ್ ಇದ್ರೆ ಒಂದು ಮತಕ್ಕೆ ಎರಡು, ಮೂರು ಸಾವಿರ ರೂಪಾಯಿ‌ ಕೊಡುತ್ತಿದ್ದಾರಂತೆ..

ಈ ಕನ್ನಡ ಸಂಘಕ್ಕೆ ಈಗ ಚುನಾವಣೆ ನಡೆಯಲಿದೆ. ಈ ಚುನಾವಣೆ ಯಾವುದೇ ಇತರೆ ಚುನಾವಣೆಗಿಂತ ಕಡಿಮೆ ಇಲ್ಲ. ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಷ್ಟು ಕಾಸ್ಟ್ಲಿಯಾಗಿದೆ. ರಾಜಕೀಯವೂ ಕಡಿಮೆ ಇಲ್ಲ. ಶೇ 98 ರಷ್ಟು ಕನ್ನಡ ಸಾಕ್ಷರತೆ ಇದ್ದವರು ಇದ್ರೂ ಕೂಡ ಜಾತಿಯ ದಾಳ, ಪ್ರಾದೇಶಿಕ ದಾಳ ಉರುಳಿಸುತ್ತಾರೆ. ಇದರಾಚೆಗೆ ಕುಂಕುಮ ಕೊಟ್ಟು ಸೀರೆ ಹಂಚುವುದು, ಪಾತ್ರೆ ಹಂಚುವುದು, ಎಣ್ಣೆ ಕಾಮನ್ ಅಂದ್ರೂ ಈ ಭಾರಿ ಅಭ್ಯರ್ಥಿಯೊಬ್ಬರು ಪಂಚಲೋಹದ ಗೂಬೆ ಮತ್ತು ಹಸುಕರು ಗಿಫ್ಟ್ ಕೊಟ್ಟಿದ್ದಾರೆ. ಇದರ ಬೆಲೆ ಎರಡು ಸಾವಿರವಂತೆ.. ಮೊದಲ ಸುತ್ತು ಪ್ರಚಾರದಲ್ಲೇ 13 ಲಕ್ಷದ ಗಿಫ್ಟ್ ಈಗಾಗಲೇ ಹೆಮ್ಮೆಯ ಕನ್ನಡಿಗರ ಮನೆ ತಲುಪಿಯಾಗಿದೆಯಂತೆ…

ಇಷ್ಟು ದೊಡ್ಡಮಟ್ಟದ ಗಿಫ್ಟ್ ಹಂಚುವವರು ಸಂಘದ ಹೆಸರಲ್ಲಿ ಇನ್ನೆಷ್ಟು ದುಡ್ಡು ಮಾಡಿರಬಹುದು ಅಥವಾ ಮಾಡಬಹುದು ಎನ್ನುವುದು ಮತದಾರರ ಗೊಣಗು.

ಆದ್ರೆ ಗೂಬೆ ಗಿಫ್ಟ್ ಬೇಡ. ಎರಡು ಸಾವಿರಕ್ಕೆ ನಮ್ಮ ಮತ ಮಾರಿಕೊಳ್ಳುವುದಿಲ್ಲ ಎಂದು ಹೇಳುವ ದಮ್ಮು, ತಾಕತ್ತು.. ತೋರುತ್ತಿರುವ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ ಇದ್ದಂತೆ ಇದೆ. ಇಷ್ಟೆಲ್ಲಾ ಆದ ಮೇಲೆ ಕನ್ನಡ…ಕನ್ನಡಿಗರ ಸೇವೆ ಅಂಥ ನಾಮಫಲಕ ಹಿಡಿದುಕೊಂಡು ಹೋಗುತ್ತಿರುವುದು ನಾಚಿಕೆಯ ಯಾವ ಸ್ವರೂಪ ಅಂಥ ಗೊತ್ತಾಗದೆ ಮತದಾರರು ಗೊಂದಲದಲ್ಲಿದ್ದಾರೆ. ಗೆಲುವು ಯಾರದ್ದೇ ಆಗಲಿ ಮತ ದುಡ್ಡಿಗೆ ಕೊಂಡುಕೊಳ್ಳುವ ಕೊಳಕು ಮನಸ್ಥಿತಿಯಿಂದ ಅಭ್ಯರ್ಥಿಗಳು ಹಾಗೂ ಮಾರಾಟದ ವಸ್ತು ಆಗಿರುವ ಮತದಾರರು ಹೊರಬರಬೇಕಿದೆ. ಅನಕ್ಷರಸ್ಥರಿಂದ ದೇಶ ಹಾಳಾಗುತ್ತಿಲ್ಲ ಬದಲಿಗೆ ಅಕ್ಷರಸ್ಥರಿಂದ ಮತ ಮಾರಾಟವಾಗುತ್ತಿರುವುದು ಯಾವುದರ ಸಂಕೇತ ಎನ್ನುವುದು ಬಿಡಿಸಿ ಹೇಳಬೇಕಿಲ್ಲ.



Source link

Leave a Reply

Your email address will not be published. Required fields are marked *