ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ | A Woman Spy Who Helped India Defeat Pakistan In 1971 Suc

ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ | A Woman Spy Who Helped India Defeat Pakistan In 1971 Suc



ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ | A Woman Spy Who Helped India Defeat Pakistan In 1971 Suc

1970ರ ದಶಕದಲ್ಲಿ, ಸೆಹ್ಮತ್ ಖಾನ್ ಎಂಬ ಭಾರತೀಯ ಯುವತಿ ದೇಶಕ್ಕಾಗಿ ತನ್ನೆಲ್ಲಾ ಕನಸುಗಳನ್ನು ತ್ಯಜಿಸಿ ಪಾಕಿಸ್ತಾನಿ ಸೇನಾಧಿಕಾರಿಯನ್ನು ವಿವಾಹವಾದರು. ಶತ್ರುದೇಶದಲ್ಲಿ ಪತ್ನಿಯಾಗಿ ನಟಿಸುತ್ತಾ, ಭಾರತಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ರವಾನಿಸಿದ , 1971ರ ಇಂಡೋ-ಪಾಕ್​ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಿಳಾ ಗೂಢಚಾರಿಯ ರೋಚಕ ಕಥೆಯಿದು. ಇವರ ಜೀವನಗಾಥೆಯೇ ‘ರಾಝಿ’ ಸಿನಿಮಾಗೆ ಸ್ಪೂರ್ತಿಯಾಗಿದೆ.

ದುರಂಧರ್ 1 ಮತ್ತು 2 ಚಿತ್ರ ನೋಡಿದವರಿಗೆ ಭಾರತದ ಗೂಢಾಚಾರರು ಅರ್ಥಾತ್​ ಸ್ಪೈ (Spy) ರಾ ಏಜೆಂಟ್ಸ್​ (RAW Agents) ಯಾವ ರೀತಿಯಲ್ಲಿ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದರು. ಅವರಿಂದ ಹೇಗೆ ಭಾರತ ಬಚಾವ್​ ಆಯಿತು. ಯಾವ ರೀತಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟುಕೊಂಡು ಈ ಏಜೆಂಟ್​ಗಳು ಕೆಲಸ ಮಾಡುತ್ತಾರೆ, ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಪಾಕಿಸ್ತಾನದಂಥ ಪಾಪಿಯ ನೆಲೆಯಲ್ಲಿ ಅವರಿಗೆ ಆದ ಘನಘೋರ ಶಿಕ್ಷೆ, ಯಾರೂ ಊಹಿಸಲು ಸಾಧ್ಯವಿಲ್ಲದ ಕಠೋರ ಚಿತ್ರಹಿಂಸೆ ನೀಡುತ್ತಾರೆ ಎನ್ನುವುದು ತಿಳಿದಿದೆ. ಇದರ ಹೊರತಾಗಿಯೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಹಲವರು. ಹಾಗೆಂದು ರಾ ಏಜೆಂಟ್ಸ್​ ಎಂದ ಮಾತ್ರಕ್ಕೆ ಅವರು ಪುರುಷರೇ ಎಂದೇನಲ್ಲ. ಕೆಲವು ಸ್ತ್ರೀಯರು ಕೂಡ ದೇಶಕ್ಕಾಗಿ ಇದೇ ರೀತಿ ಹೋರಾಟ ನಡೆಸಿದ್ದಾರೆ.

ಸೆಹ್ಮತ್ ಖಾನ್‌ ರೋಚಕ ಸ್ಟೋರಿ

ಅವರಲ್ಲಿ ಒಬ್ಬರು ಸೆಹ್ಮತ್ ಖಾನ್‌. ಈಕೆಯ ಕಥೆಯೇ ಮೈ ನವಿರೇಳುವಂಥದ್ದಾಗಿದೆ. 1970ರ ದಶಕದ ಸ್ಟೋರಿ ಇದು. 1971ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಗೆಲುವಿನ ಹಿಂದೆ ಇವರದ್ದೇ ಕೈ ಇದೆ. ಅವರ ತಂದೆ ಕಾಶ್ಮೀರಿ ಮುಸ್ಲಿಂ ಮತ್ತು ಅವರ ತಾಯಿ ಪಂಜಾಬಿ ಹಿಂದೂ. ಭಾರತವು ಧರ್ಮ ಅಥವಾ ವೈಯಕ್ತಿಕ ಗುರುತಿಗಿಂತ ಮೊದಲು ಎಂದು ಅವರು ಕಲಿತು ಬೆಳೆದರು. ಈ ನಂಬಿಕೆಯು ನಂತರದ ಜೀವನದಲ್ಲಿ ಅವರ ಆಯ್ಕೆಗಳನ್ನು ರೂಪಿಸಿತು. ಪಾಕಿಸ್ತಾನಿ ಅಧಿಕಾರಿಯ ಪತ್ನಿಯ ವೇಷ ಧರಿಸಿ ಪಾಕಿಸ್ತಾನಕ್ಕೆ ಹೋಗಿ ಭಾರತಕ್ಕೆ ಸಹಾಯ ಮಾಡಿದ್ದ ಇವರ ಕಥೆ ರೋಚಕವಾಗಿದೆ. ಸೆಹ್ಮತ್ ದೆಹಲಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಆಕೆಯ ಜೀವನ ಶಾಶ್ವತವಾಗಿ ಬದಲಾಯಿತು. ಕ್ಯಾನ್ಸರ್ ನಿಂದ ಸಾಯುತ್ತಿದ್ದ ಆಕೆಯ ತಂದೆ ಭಾರತೀಯ ಗುಪ್ತಚರ ಇಲಾಖೆಯೊಂದಿಗಿನ ತಮ್ಮ ರಹಸ್ಯ ಸಂಪರ್ಕಗಳನ್ನು ಬಹಿರಂಗಪಡಿಸಿದರು. ಅಲ್ಲಿಯವರೆಗೆ ಅವರೊಬ್ಬ ಏಜೆಂಟ್​ ಎನ್ನುವುದು ಯಾರಿಗೂ ತಿಳಿದಿಲಿಲ್ಲ. ಅವರು ಸೆಹ್ಮತ್ ಗೆ ಅಪಾಯದ ಬಗ್ಗೆ ತಿಳಿಸಿದರು. ಕೊನೆಗೆ ಆಯ್ಕೆಯನ್ನು ಅವಳಿಗೇ ಬಿಟ್ಟರು.

ಪ್ರೀತಿಯನ್ನೂ ತ್ಯಜಿಸಿ ಪಾಕಿಯನ್ನು ಮದ್ವೆಯಾದ್ರು

ಆದರೆ ದೇಶಪ್ರೇಮ ಎನ್ನುವುದು ರಕ್ತದಲ್ಲಿಯೇ ಇತ್ತ. ಅದಕ್ಕಾಗಿ ಅವರು ದೇಶ ಸೇವೆ ಮಾಡಲು ಮುನ್ನುಗ್ಗಿದರು. ತಮ್ಮ ಶಿಕ್ಷಣ, ಕನಸುಗಳನ್ನು ಬಿಟ್ಟರು. ಅವರು ಆಗ ಒಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ದೇಶಕ್ಕಾಗಿ ಪ್ರೇಮವನ್ನೂ ತ್ಯಾಗ ಮಾಡಿ, ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಯ ಮಗ ಇಕ್ಬಾಲ್ ಸೈಯದ್ ಅವರನ್ನು ಅವರು ವಿವಾಹವಾದರು. ಈ ಮದುವೆಯು ಆಕೆಗೆ ಪ್ರಮುಖ ಮಿಲಿಟರಿ ಮಾಹಿತಿಗೆ ಪ್ರವೇಶವನ್ನು ನೀಡಿತು. ಇದು ನಕಲಿ ಪಾತ್ರವಾಗಿರಲಿಲ್ಲ, ಇದು ನಿಜವಾದ ವಿವಾಹವಾಗಿತ್ತು. ಆದರೆ ಸ್ವಲ್ಪವೇ ಅನುಮಾನ ಬಂದರೂ ಆಕೆಯ ಮೃತ್ಯು ಮಾತ್ರ ಯಾರೂ ಊಹಿಸುವ ರೀತಿಯಲ್ಲಿ ಇರಲಿಲ್ಲ.

ಸಾಕ್ಷಿ ಕಳುಹಿಸುತ್ತಿದ್ದ ಸೆಹ್ಮತ್​

ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಗ, ಸೆಹ್ಮತ್ ರಹಸ್ಯವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಾ ಪತ್ನಿ ಮತ್ತು ಸೊಸೆಯಾಗಿ ತನ್ನ ಪಾತ್ರವನ್ನು ಸಮತೋಲನಗೊಳಿಸಿಕೊಂಡರು. ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಯಾಹ್ಯಾ ಖಾನ್ ಅವರ ಮೊಮ್ಮಕ್ಕಳಿಗೂ ಅವರು ಪಾಠಗಳನ್ನು ಹೇಳುತ್ತಿದ್ದರು, ಇದು ಅವರನ್ನು ಪ್ರಬಲ ವಲಯಗಳಿಗೆ ಹತ್ತಿರವಾಗಿಸಿತು. ಅವರು ಭಾರತಕ್ಕೆ ಕಳುಹಿಸಿದ ಪ್ರತಿಯೊಂದು ಸಂದೇಶವೂ ನಿಖರವಾಗಿ ಸಾಬೀತಾಯಿತು. ಆಕೆಯನ್ನು ಮತ್ತು ಕುಟುಂಬವನ್ನು ರಕ್ಷಿಸಲು ಎಲ್ಲವೂ ರಹಸ್ಯವಾಗಿಡಲಾಗಿತ್ತು. ಸಾವಿನ ಭೀತಿ ಕ್ಷಣ ಕ್ಷಣಕ್ಕೆ ಇದ್ದರೂ, ಭಾರತದ ಪರವಾಗಿ ಆಕೆ ಎಲ್ಲವನ್ನೂ ಮಾಡಿದರು. ಅವರು ಹೋದ ಕೆಲಸ ಯಶಸ್ವಿಯಾಗಿತ್ತು. ಮಿಷನ್​ ಮುಗಿದ ಬಳಿಕ ಭಾರತಕ್ಕೆ ವಾಪಸಾದರು. ಅವರು ಪಾಕಿಸ್ತಾನದಿಂದ ಹಿಂದಿರುಗಿದ ನಂತರ ಜನಿಸಿದ ಮತ್ತು ಭಾರತೀಯ ಸೇನಾ ಅಧಿಕಾರಿಯಿಂದ ದತ್ತು ಪಡೆದ ಅವರ ಮಗ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಿನಿಮಾ ಆದ ಸ್ಟೋರಿ

2018 ರಲ್ಲಿ ಬಿಡುಗಡೆಯಾದ ರಾಝಿ ಚಲನಚಿತ್ರವು ಲೇಖಕ ಹರಿಂದರ್ ಸಿಕ್ಕಾ ಅವರ “ಕಾಲಿಂಗ್ ಸೆಹ್ಮತ್” ಕಾದಂಬರಿಯನ್ನು ಆಧರಿಸಿದೆ. ಹರಿಂದರ್ ಸಿಕ್ಕಾ ಅವರ ಪ್ರಕಾರ, ಇದು ಒಬ್ಬ ಮಹಿಳಾ ಗೂಢಚಾರರ ಕಥೆ, ಕಾಲ್ಪನಿಕವಲ್ಲ, ನಿಜವಾದ ಪಾತ್ರ. ಹರಿಂದರ್ ಸಿಕ್ಕಾ ಸ್ವತಃ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು ಮತ್ತು ಕಾರ್ಗಿಲ್ ಬಗ್ಗೆ ಸಂಶೋಧನೆ ನಡೆಸುವಾಗ ಸೆಹ್ಮತ್ ಖಾನ್ ಅವರ ಮಗನನ್ನು ಭೇಟಿಯಾದರು. ಮಹಿಳಾ ಗೂಢಚಾರರಾದ ಸೆಹ್ಮತ್ ಖಾನ್ ಅವರ ನಿಜವಾದ ಗುರುತನ್ನು ಪುಸ್ತಕದಲ್ಲಿ ಮರೆಮಾಡಲಾಗಿದೆ. ಈ ಸಿನಿಮಾದಲ್ಲಿ ಸೆಹ್ಮತ್​ ಅವರ ಪಾತ್ರವನ್ನು ಆಲಿಯಾ ಭಟ್​ ನಿರ್ವಹಿಸಿದ್ದಾರೆ.



Source link

Leave a Reply

Your email address will not be published. Required fields are marked *