ಗಂಡಸರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿದ KSRTC ಕಂಡಕ್ಟರ್; ಎಡವಟ್ಟೋ? ಹಣ ಮಾಡುವ ದಂಧೆಯೋ? | Chamarajanagar Ksrtc Conductor Cheats Male Passenger By Giving Shakti Yojana Ticket Rav

ಗಂಡಸರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿದ KSRTC ಕಂಡಕ್ಟರ್; ಎಡವಟ್ಟೋ? ಹಣ ಮಾಡುವ ದಂಧೆಯೋ? | Chamarajanagar Ksrtc Conductor Cheats Male Passenger By Giving Shakti Yojana Ticket Rav



ಗಂಡಸರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿದ KSRTC ಕಂಡಕ್ಟರ್; ಎಡವಟ್ಟೋ? ಹಣ ಮಾಡುವ ದಂಧೆಯೋ? | Chamarajanagar Ksrtc Conductor Cheats Male Passenger By Giving Shakti Yojana Ticket Rav

ಚಾಮರಾಜನಗರದಲ್ಲಿ ಕೆಎಸ್ಆರ್ ಟಿಸಿ ಕಂಡಕ್ಟರ್ ಒಬ್ಬರು ಪುರುಷ ಪ್ರಯಾಣಿಕರಿಂದ ಹಣ ಪಡೆದು, ಮಹಿಳೆಯರಿಗೆ ಮೀಸಲಾದ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿರುವ ಘಟನೆ ನಡೆದಿದೆ. ಈ ರೀತಿಯ ಅಕ್ರಮ ರಾಜ್ಯದ ಇತರೆಡೆಗೂ ವ್ಯಾಪಿಸಿದ್ದು, ಕಂಡಕ್ಟರ್‌ಗಳು ಹಣ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪ.

ಚಾಮರಾಜನಗರ (ಏಪ್ರಿಲ್ 9): ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಲು ಜಾರಿಗೆ ಬಂದ ಶಕ್ತಿ ಯೋಜನೆ ಈಗ ಪುರುಷರಿಗೂ ವಿಸ್ತರಣೆಯಾಗಿದೆಯೇ ಎಂಬ ಅನುಮಾನ ಮೂಡುವಂತಹ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ. ಕೆಎಸ್ಆರ್ ಟಿಸಿ ಕಂಡಕ್ಟರ್ ಒಬ್ಬರು ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಟಿಕೆಟ್ ನೀಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಿಂದ ಮಾದಾಪುರ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಂದ 10 ರೂಪಾಯಿ ಹಣ ಪಡೆದ ಕಂಡಕ್ಟರ್, ಅವರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡಿದ್ದಾರೆ. ನಿಗದಿತ ಸ್ಟಾಪ್ ಇಲ್ಲ ಎಂದು ಸಬೂಬು ಹೇಳಿ ಈ ರೀತಿ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ದಂಧೆ

ಈ ಅಕ್ರಮ ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿಯೂ ಇಂತಹ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳಿವೆ. ಸಮೀಪದ ನಿಲ್ದಾಣಗಳಿಗೆ ಇಳಿಯುವವರು, ಹಳ್ಳಿಗಳಿಂದ ಬಂದ ಮುಗ್ಧರು ಅಥವಾ ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ಕಂಡಕ್ಟರ್ ಗಳು ಅವರಿಗೆ ಉಚಿತ ಟಿಕೆಟ್ ನೀಡಿ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ.

ದಿನನಿತ್ಯ ಶಕ್ತಿ ಯೋಜನೆಯ ಟಿಕೆಟ್ ಗಳನ್ನು ಗಂಡಸರಿಗೆ ಕೊಡುವ ಮೂಲಕ ಕಂಡಕ್ಟರ್‌ಗಳು ಸಾವಿರಾರು ರೂಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಕಂಡಕ್ಟರ್ ಗಳು ವಿಕಾರವಾಗಿ ನಕ್ಕು ಏನೋ ಒಂದು ಸುಳ್ಳು ಕಾರಣ ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದಿರುವ ಈ ವಂಚನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಗರಣದ ವಿರುದ್ಧ ಕೂಡಲೇ ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ (ಡಿಸಿ) ದೂರು ನೀಡಲು ಪ್ರಯಾಣಿಕ ನಿರ್ಧರಿಸಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *