ಏಕಾಏಕಿ ಉಕ್ಕಿದ ಗಂಗಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ ನಾಯಿ; ‘ಹೀರೋ’ನಂತೆ ಬಂದು ಕಾಪಾಡಿದ ರಾಫ್ಟಿಂಗ್ ಟೀಮ್‌ | Heartwarming Incident Rishikesh Ganga River Dog Rescue Rafting Team Bravery Viral Video Sat

ಏಕಾಏಕಿ ಉಕ್ಕಿದ ಗಂಗಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ ನಾಯಿ; ‘ಹೀರೋ’ನಂತೆ ಬಂದು ಕಾಪಾಡಿದ ರಾಫ್ಟಿಂಗ್ ಟೀಮ್‌ | Heartwarming Incident Rishikesh Ganga River Dog Rescue Rafting Team Bravery Viral Video Sat



ಏಕಾಏಕಿ ಉಕ್ಕಿದ ಗಂಗಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ ನಾಯಿ; ‘ಹೀರೋ’ನಂತೆ ಬಂದು ಕಾಪಾಡಿದ ರಾಫ್ಟಿಂಗ್ ಟೀಮ್‌ | Heartwarming Incident Rishikesh Ganga River Dog Rescue Rafting Team Bravery Viral Video Sat

ಉತ್ತರಾಖಂಡದಲ್ಲಿ, ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಗಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ನಾಯಿಯೊಂದನ್ನು ಸ್ಥಳೀಯ ರಾಫ್ಟಿಂಗ್ ತಂಡವು ಸಾಹಸಮಯವಾಗಿ ರಕ್ಷಿಸಿದೆ. ಈ ಧೈರ್ಯದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಂಡದ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಕೃತಿಯ ವಿಕೋಪಕ್ಕೆ ಸಿಲುಕಿದಾಗ ಮನುಷ್ಯರಿರಲಿ ಅಥವಾ ಪ್ರಾಣಿಗಳಿರಲಿ, ಬದುಕುಳಿಯುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ. ಆದರೆ, ಮಾನವೀಯತೆ ಮತ್ತು ಧೈರ್ಯ ಒಂದಾದಾಗ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ಉತ್ತರಾಖಂಡದ ಋಷಿಕೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗಂಗಾ ನದಿಯ ರೌದ್ರಾವತಾರದ ನಡುವೆ ಸಿಲುಕಿದ್ದ ಅಸಹಾಯಕ ನಾಯಿಯೊಂದನ್ನು ಸ್ಥಳೀಯ ರಾಫ್ಟಿಂಗ್ ತಂಡವೊಂದು ರಕ್ಷಿಸಿದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ನಡುಗಡ್ಡೆಯಲ್ಲಿ ಸಿಲುಕಿದ್ದ ಜೀವ:

ಋಷಿಕೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಷ್ಮಣ ಜೂಲಾ ಬಳಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿತ್ತು. ಈ ವೇಳೆ ನದಿಯ ಮಧ್ಯದಲ್ಲಿದ್ದ ಸಣ್ಣ ನಡುಗಡ್ಡೆಯಂತಹ ಬಂಡೆಯ ಮೇಲೆ ನಾಯಿಯೊಂದು ಸಿಲುಕಿಕೊಂಡಿತ್ತು. ನದಿಯ ಎರಡೂ ಬದಿಗಳಲ್ಲಿ ಸುಮಾರು ನೂರು ಅಡಿ ಆಳವಿದ್ದು, ನೀರು ಅತ್ಯಂತ ರಭಸವಾಗಿ ಹರಿಯುತ್ತಿತ್ತು. ಬಂಡೆಯ ಮೇಲೆ ನಿಂತಿದ್ದ ನಾಯಿ ಎತ್ತಲೂ ಹೋಗಲಾಗದೆ, ಕೆಳಗೆ ಇಳಿದರೆ ನೀರಿನ ಪಾಲಾಗುವ ಭೀತಿಯಲ್ಲಿ ನಡುಗುತ್ತಿತ್ತು. ದಡದಲ್ಲಿದ್ದ ಜನರು ಅಸಹಾಯಕವಾಗಿ ಈ ದೃಶ್ಯವನ್ನು ನೋಡುತ್ತಿದ್ದರಾದರೂ, ಅಷ್ಟು ರಭಸವಾಗಿ ಹರಿಯುವ ನೀರಿನಲ್ಲಿ ಇಳಿಯುವ ಧೈರ್ಯ ಯಾರಿಗೂ ಇರಲಿಲ್ಲ.

ರಾಫ್ಟಿಂಗ್ ತಂಡದ ಸಾಹಸಮಯ ಎಂಟ್ರಿ:

ಆದರೆ, ಅಲ್ಲಿಗೆ ಆಗಮಿಸಿದ ಪ್ರವಾಸಿ ರಾಫ್ಟಿಂಗ್ ಗೈಡ್‌ಗಳ ತಂಡವೊಂದು ನಾಯಿಯನ್ನು ರಕ್ಷಿಸಲು ನಿರ್ಧರಿಸಿತು. ಇದು ಸಾಮಾನ್ಯ ರಕ್ಷಣಾ ಕಾರ್ಯಾಚರಣೆಯಾಗಿರಲಿಲ್ಲ. ನೀರಿನ ಸೆಳೆತ ಎಷ್ಟಿತ್ತೆಂದರೆ ಸಣ್ಣ ತಪ್ಪು ಮಾಡಿದರೂ ರಾಫ್ಟಿಂಗ್ ದೋಣಿ ಪಲ್ಟಿಯಾಗಿ ರಕ್ಷಕರಿಗೂ ಅಪಾಯವಾಗುವ ಸಾಧ್ಯತೆಯಿತ್ತು. ಆದರೂ ಧೈರ್ಯಗುಂದದ ತಂಡವು ತಮ್ಮ ಗಾಳಿ ತುಂಬಿದ ದೋಣಿಯನ್ನು (Inflatable Raft) ಅತ್ಯಂತ ಜಾಗರೂಕತೆಯಿಂದ ಬಂಡೆಯ ಬಳಿ ತೆಗೆದುಕೊಂಡು ಹೋದರು.

ದೋಣಿ ಬಂಡೆಯ ಹತ್ತಿರ ತಲುಪುತ್ತಿದ್ದಂತೆ, ತಂಡದ ಸದಸ್ಯರೊಬ್ಬರು ಹಗ್ಗದ ಸಹಾಯದಿಂದ ದೋಣಿಯನ್ನು ಭದ್ರವಾಗಿ ಹಿಡಿದುಕೊಂಡರು. ಮತ್ತೊಬ್ಬ ಸದಸ್ಯ ಧೈರ್ಯವಾಗಿ ಬಂಡೆಯ ಮೇಲೆ ಇಳಿದು, ಭಯದಲ್ಲಿದ್ದ ನಾಯಿಯನ್ನು ಸಮಾಧಾನಪಡಿಸಿದರು. ನಂತರ ನಾಯಿಯನ್ನು ಎತ್ತಿಕೊಂಡು ಸುರಕ್ಷಿತವಾಗಿ ದೋಣಿಗೆ ಹತ್ತಿಸಿಕೊಳ್ಳಲಾಯಿತು. ಕೊನೆಗೆ ಯಾವುದೇ ಅಪಾಯವಿಲ್ಲದೆ ನಾಯಿಯನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಲಾಯಿತು.

ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ:

ಈ ಇಡೀ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ‘ಸೇವ್ ಎ ಸ್ಟ್ರೇ ನೋಯ್ಡಾ’ (@saveastray.noida) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಫ್ಟಿಂಗ್ ತಂಡದ ಪ್ರಾಣಿ ಪ್ರೀತಿ ಮತ್ತು ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ಇದೇ ನಿಜವಾದ ಹೀರೋಯಿಸಂ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್‌ನ ಅಡಿಯಲ್ಲಿ ಪ್ರಾಣಿ ಪ್ರಿಯರು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ಪ್ರಾಣಿಗಳು ನಮ್ಮ ಭಾಷೆಯನ್ನು ಮಾತನಾಡದಿದ್ದರೂ ಅವುಗಳ ಮುಗ್ಧತೆ ನಮಗೆ ಅರ್ಥವಾಗಬೇಕು. ಬೀದಿ ನಾಯಿಗಳನ್ನು ಕೇವಲ ‘ಬೀದಿ ನಾಯಿ’ ಎಂದು ಕಡೆಗಣಿಸದೆ, ಅವುಗಳನ್ನು ದತ್ತು ಪಡೆಯುವ ಮೂಲಕ ಅವುಗಳಿಗೆ ಉತ್ತಮ ಜೀವನ ನೀಡಿ. ಕೇವಲ ಬ್ರ್ಯಾಂಡೆಡ್ ಅಥವಾ ನಿರ್ದಿಷ್ಟ ತಳಿಯ ನಾಯಿಗಳ ಮೇಲೆ ಮಾತ್ರ ಪ್ರೀತಿ ತೋರಿಸಬೇಡಿ’ ಎಂದು ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *