IPL 2026: ಇದು ಆರ್‌ಸಿಬಿ ಬ್ಯಾಟಿಂಗ್ ತಾಕತ್ತು; ಪವರ್‌ಪ್ಲೇ ಆಘಾತದ ನಡುವೆಯೂ 200ರ ಗಡಿ ದಾಟಿದ ಬೆಂಗಳೂರು! | Ipl 2026 Rcb Vs Rr Innings Report Rajat Patidar Half Century Score 201 San

IPL 2026: ಇದು ಆರ್‌ಸಿಬಿ ಬ್ಯಾಟಿಂಗ್ ತಾಕತ್ತು; ಪವರ್‌ಪ್ಲೇ ಆಘಾತದ ನಡುವೆಯೂ 200ರ ಗಡಿ ದಾಟಿದ ಬೆಂಗಳೂರು! | Ipl 2026 Rcb Vs Rr Innings Report Rajat Patidar Half Century Score 201 San



IPL 2026: ಇದು ಆರ್‌ಸಿಬಿ ಬ್ಯಾಟಿಂಗ್ ತಾಕತ್ತು; ಪವರ್‌ಪ್ಲೇ ಆಘಾತದ ನಡುವೆಯೂ 200ರ ಗಡಿ ದಾಟಿದ ಬೆಂಗಳೂರು! | Ipl 2026 Rcb Vs Rr Innings Report Rajat Patidar Half Century Score 201 San

ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ, ಆರಂಭಿಕ ಬ್ಯಾಟಿಂಗ್ ಕುಸಿತ ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕ, ಹಾಗೂ ಶೆಫರ್ಡ್ ಮತ್ತು ವೆಂಕಟೇಶ್ ಅಯ್ಯರ್ ಆಟದಿಂದ ಉತ್ತಮ ಮೊತ್ತ ಪೇರಿಸಿತು.

ಗುವಾಹಟಿ (ಏ.10): ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧದ ಐಪಿಎಲ್‌ (IPL) ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟಿಂಗ್ ಕುಸಿತದ ನಡುವೆಯೂ ಚೇತರಿಸಿಕೊಂಡು ಸವಾಲಿನ ಮೊತ್ತ ಪೇರಿಸಿದೆ. ಬರ್ಸಾಪರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯ ಆರ್‌ಸಿಬಿ (Royal Challengers Bengaluru) 8 ವಿಕೆಟ್‌ ನಷ್ಟಕ್ಕೆ 201 ರನ್‌ ಬಾರಿಸಲು ಯಶಸ್ವಿಯಾತು. ನಾಯಕ ರಜತ್‌ ಪಾಟಿದಾರ್‌, ರೊಮಾರಿಯೋ ಶೆಫರ್ಡ್‌ ಹಾಗೂ ಕೊನೆಯಲ್ಲಿ ವೆಂಕಟೇಶ್‌ ಅಯ್ಯರ್‌ ಆರ್‌ಸಿಬಿಯ ಬ್ಯಾಟಿಂಗ್‌ಗೆ ಬೆನ್ನೆಲುಬಾದರು.

ಪವರ್‌ಪ್ಲೇನಲ್ಲೇ ಆಘಾತ

ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಆರ್‌ಸಿಬಿಗೆ ಆರಂಭದಲ್ಲೇ ‘ಜೋಫ್ರಾ ಆರ್ಚರ್’ ಆಘಾತ ನೀಡಿದರು. ಪಂದ್ಯದ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ವಿಕೆಟ್ ಒಪ್ಪಿಸಿ ಶೂನ್ಯಕ್ಕೆ ಔಟಾದರು. ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಆಟಗಾರ ಎಂಬ ಅನಪೇಕ್ಷಿತ ದಾಖಲೆಗೆ ಸಾಲ್ಟ್ ಪಾತ್ರರಾದರು. ವಿರಾಟ್ ಕೊಹ್ಲಿ (32 ರನ್, 16 ಎಸೆತ, 7 ಬೌಂಡರಿ) ಬಿರುಸಿನ ಆರಂಭ ನೀಡಿದರೂ ರವಿ ಬಿಷ್ಣೋಯಿ ಅವರಿಗೆ ವಿಕೆಟ್ ಒಪ್ಪಿಸಿದರು. ದೇವದತ್ ಪಡಿಕ್ಕಲ್ (14) ಕೂಡ ಆರ್ಚರ್ ಬಲೆಗೆ ಬಿದ್ದರು. ಪವರ್‌ಪ್ಲೇ ಮುಕ್ತಾಯಕ್ಕೆ ಆರ್‌ಸಿಬಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.

ಕುಸಿತ ಕಂಡ ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ (1) ಮತ್ತು ಜಿತೇಶ್ ಶರ್ಮಾ (5) ಬೇಗನೆ ನಿರ್ಗಮಿಸಿದ್ದರಿಂದ 9 ಓವರ್‌ಗಳ ಒಳಗೆ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬ್ರಿಜೇಶ್ ಶರ್ಮಾ ತಮ್ಮ ಮೊದಲ ಓವರ್‌ನಲ್ಲೇ ಜಿತೇಶ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ಶಾಕ್ ನೀಡಿದರು. ಅಬ್ಬರಿಸುವ ಸೂಚನೆ ನೀಡಿದ್ದ ಟಿಮ್ ಡೇವಿಡ್ (13) ಕೂಡ ಬ್ರಿಜೇಶ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದರು.

ಪಾಟಿದಾರ್ ಹೋರಾಟ ಮತ್ತು ಶೆಫರ್ಡ್ ಮಿಂಚು

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನಾಯಕನ ಜವಾಬ್ದಾರಿ ಮೆರೆದ ರಜತ್ ಪಾಟಿದಾರ್ 40 ಎಸೆತಗಳಲ್ಲಿ 63 ರನ್ (4 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದರ ನಡುವೆ ರೊಮಾರಿಯೋ ಶೆಫರ್ಡ್ ಕೇವಲ 11 ಎಸೆತಗಳಲ್ಲಿ 22 ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ರನ್ ವೇಗ ಹೆಚ್ಚಿಸಿದರು. ಕೊನೆಯಲ್ಲಿ ವೆಂಕಟೇಶ್ ಅಯ್ಯರ್ (29 ರನ್,‌ 15 ಎಸೆತ, 1 ಬೌಂಡರಿ, 2 ಸಿಕ್ಸರ್‌) ಉಳಿದ ಓವರ್‌ಗಳಲ್ಲಿ ಗರಿಷ್ಠ ರನ್ ಕಲೆಹಾಕುವ ಪ್ರಯತ್ನದಲ್ಲಿದ್ದಾರೆ. ರಾಜಸ್ಥಾನ ಪರ ಜೋಫ್ರಾ ಆರ್ಚರ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದು ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಒಂದು ಗಂಟೆ ವಿಳಂಬವಾಗಿ ಪಂದ್ಯ ಆರಂಭವಾದರೂ, ಓವರ್‌ಗಳನ್ನು ಕಡಿತಗೊಳಿಸದಿರುವುದು ಅಭಿಮಾನಿಗಳಲ್ಲಿ ಹರ್ಷ ತಂದಿದೆ.



Source link

Leave a Reply

Your email address will not be published. Required fields are marked *