
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿಗಾಗಿ ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮಗ ನಿಖಿಲ್ ಜನರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದಾನೆ ಎಂದ ಅವರು, ಸಿದ್ದರಾಮಯ್ಯ ರಾಜಕೀಯ ತೊರೆಯಲು ಮುಂದಾಗಿದ್ದ ಹಳೆಯ ಘಟನೆಯನ್ನು ನೆನಪಿಸಿಕೊಂಡರು.
ಮೈಸೂರು (ಏ.11): ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ಕರೆತರುತ್ತಿಲ್ಲ. ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗ ಯತೀಂದ್ರ ಅವರನ್ನು ನೇಮಿಸಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಿಸಿಕೊಂಡಿದ್ದಾರೆ. ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತಂದಿಲ್ಲ. ಜನರ ಅಪೇಕ್ಷೆಯಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾನೆ. 1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಮೇತ ನಾವೆಲ್ಲಾ ಸೋತಿದ್ದೆವು. ಆಗ ಸಿದ್ದರಾಮಯ್ಯ, ಮಹದೇವಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಬಂದಿದ್ದರು. ಸಿದ್ದರಾಮಯ್ಯ ‘ನಂಗೆ ರಾಜಕೀಯ ಸಾಕು’ ಅಂತಾ ಕಣ್ಣೀರು ಹಾಕಿದ್ದರು. ಅವತ್ತು ಅವರ ಕಣ್ಣೀರಿಗೆ ಬಕೆಟ್ ಇಟ್ಟಿದ್ದರೆ ತುಂಬುತ್ತಿತ್ತು. ಈ ಘಟನೆಗೆ ನಾನೇ ಸಾಕ್ಷಿ ಎಂದರು.
ದೇವೇಗೌಡರು ಸಿದ್ದರಾಮಯ್ಯಗೆ ಸಮಾಧಾನ ಮಾಡಿ ಧೈರ್ಯ ಹೇಳಿ ಬೇರೆ ಬೇರೆ ವ್ಯವಸ್ಥೆ ಮಾಡಿಕೊಟ್ಟರು. ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆ. 2006ರಲ್ಲಿ ಸಿದ್ದರಾಮಯ್ಯ ಅಹಿಂದ ಹೆಸರಲ್ಲಿ ನಮ್ಮ ಪಕ್ಷಕ್ಕೆ ಚೂರಿ ಹಾಕಿದರು. ಸಿದ್ದರಾಮಯ್ಯ ನಮ್ಮ ಪಕ್ಷ ಬಿಟ್ಟಾಗ ಅವರ ಜೊತೆ ಹೋದವರು ಕೇವಲ 8 ಜನ ಮಾತ್ರ. ಇದೆಲ್ಲಾ ಸಿದ್ದರಾಮಯ್ಯಗೆ ನೆನಪಿಲ್ವಾ? ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಬಿಟ್ಟು ಹೊರಗಡೆ ಬಂದು ಐದ್ಹತ್ತು ಕಡೆ ಅಭ್ಯರ್ಥಿಗಳ ಗೆಲ್ಲಿಸಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯೋದು ಸಿದ್ದರಾಮಯ್ಯನವರೆ. ಅವರನ್ನು ಕಂಡರೆ ಅಸೂಯೆ, ಹೊಟ್ಟೆ ಕಿಚ್ಚು ಇರೋದು ನಮಗಲ್ಲ. ಕಾಂಗ್ರೆಸ್‌ನಲ್ಲೆ ಕೆಲವರಿಗೆ ಅವರನ್ನು ಕಂಡರ ಹೊಟ್ಟೆ ಕಿಚ್ಚು ಇದೆ. ರಾಜ್ಯ ಸರ್ಕಾರ ನನ್ನನ್ನು ವಿಶ್ವಾಸಕ್ಕೆ ತೆಗೆದು ಕೊಂಡರೆ ರಾಜ್ಯಕ್ಕೆ ಹೆಚ್ಚಿನ ಕಾರ್ಖಾನೆ ತರುತ್ತೇನೆ ಎಂದರು.
ಡಿಸಿಎಂಗೂ ತಿವಿದ ಎಚ್‌ಡಿಕೆ
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುವುದಿಲ್ಲ. ಅವರ ಸ್ವಭಾವ ನಂಗೆ ಗೊತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಒಬ್ಬರು ಹೆಚ್ಚಾಗಿ ದೇವರ ಮೊರೆ ಹೋಗುತ್ತಿದ್ದಾರೆ. ದೇವರಿಗೆ ಪ್ರಾರ್ಥನೆಯು ಮನಸ್ಸು ಪೂರ್ವಕವಾಗಿ ಇರಬೇಕೆ ಹೊರತು, ಸ್ವಾರ್ಥಕ್ಕೆ ದೇವರನ್ನು ಬೇಡಿದರೆ ದೇವರು ಫಲ ಕೊಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ದೇವರ ಕೃಪೆ ಇದ್ದರೆ ಮತ್ತೊಮ್ಮೆ ಸಿಎಂ
ಹಿಂದೆ ನಾನು ಸಿಎಂ ಆಗಿದ್ದು ದೇವರ ಕೃಪೆಯಿಂದ. ಒಮ್ಮೆಯೂ ನನಗೆ ಬಹುಮತ ಬಂದಿಲ್ಲ. ಆದರೂ ಎರಡು ಬಾರಿ ಸಿಎಂ ಆದೆ. ಮುಂದೆಯೂ ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ. ಸಿಎಂ ಆಗುವುದು ನನ್ನ ಕೈಯಲ್ಲಿ ಇಲ್ಲ. ಸಿಎಂ ಆಗಲು ಭಗವಂತನ ಕೃಪೆ ಬೇಕು. ಯಾವ ಜ್ಯೋತಿಷಿಯೂ ಸಿಎಂ ಆಗುತ್ತೀರಿ ಎಂದು ಹೇಳಿರಲಿಲ್ಲ. ಆದರೂ ಆದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.