Headlines

ಮಧುಗಿರಿ ತಾ.ಪಂ.ನಲ್ಲಿ ₹4.27 ಕೋಟಿ ಲೂಟಿ: ಕಾಂಗ್ರೆಸ್ ಮುಖಂಡ, ಎಸ್‌ಡಿಎ ಸೇರಿ 6 ಜನರ ವಿರುದ್ಧ FIR ದಾಖಲು! | Madhugiri Taluk Panchayat Rs 4 Crore Scam Sda Soumya Congress Leader Fir Sat

ಮಧುಗಿರಿ ತಾ.ಪಂ.ನಲ್ಲಿ ₹4.27 ಕೋಟಿ ಲೂಟಿ: ಕಾಂಗ್ರೆಸ್ ಮುಖಂಡ, ಎಸ್‌ಡಿಎ ಸೇರಿ 6 ಜನರ ವಿರುದ್ಧ FIR ದಾಖಲು! | Madhugiri Taluk Panchayat Rs 4 Crore Scam Sda Soumya Congress Leader Fir Sat



ಮಧುಗಿರಿ ತಾ.ಪಂ.ನಲ್ಲಿ ₹4.27 ಕೋಟಿ ಲೂಟಿ: ಕಾಂಗ್ರೆಸ್ ಮುಖಂಡ, ಎಸ್‌ಡಿಎ ಸೇರಿ 6 ಜನರ ವಿರುದ್ಧ FIR ದಾಖಲು! | Madhugiri Taluk Panchayat Rs 4 Crore Scam Sda Soumya Congress Leader Fir Sat

ತುಮಕೂರಿನ ಮಧುಗಿರಿ ತಾಲ್ಲೂಕು ಪಂಚಾಯ್ತಿಯಲ್ಲಿ ‘ಗಳಿಕೆ ರಜೆ ನಗದೀಕರಣ’ ಹಣವನ್ನು ದುರ್ಬಳಕೆ ಮಾಡಿಕೊಂಡ 4.27 ಕೋಟಿ ರೂ. ಹಗರಣ ಬೆಳಕಿಗೆ ಬಂದಿದೆ. ಈ ಸಂಬಂಧ, ತಾಲ್ಲೂಕು ಪಂಚಾಯ್ತಿಯ ದ್ವಿತೀಯ ದರ್ಜೆ ಸಹಾಯಕಿ ಮತ್ತು ಕಾಂಗ್ರೆಸ್ ಮುಖಂಡ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತುಮಕೂರು (ಏ.11): ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯ್ತಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಅಕ್ರಮವಾಗಿ ಲೂಟಿ ಮಾಡಿರುವ ಬೃಹತ್ ಹಗರಣವೊಂದು ಬಯಲಿಗೆ ಬಂದಿದೆ. ಸುಮಾರು 4.27 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ತಾಲ್ಲೂಕು ಪಂಚಾಯ್ತಿಯ ದ್ವಿತೀಯ ದರ್ಜೆ ಸಹಾಯಕಿ (SDA) ಹಾಗೂ ಕಾಂಗ್ರೆಸ್ ಜಿಲ್ಲಾ ಮುಖಂಡ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಏನಿದು 4 ಕೋಟಿ ಹಗರಣ?

ಮಧುಗಿರಿ ತಾಲ್ಲೂಕು ಪಂಚಾಯ್ತಿಯಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೌಮ್ಯ ಎಂಬುವವರು ಈ ಹಗರಣದ ಪ್ರಮುಖ ಸೂತ್ರಧಾರಿ ಎನ್ನಲಾಗಿದೆ. ಸರ್ಕಾರಿ ನೌಕರರು ಸ್ವಯಂ ನಿವೃತ್ತಿ ಪಡೆದಾಗ ಅಥವಾ ಸೇವೆಯಲ್ಲಿದ್ದಾಗ ಮರಣ ಹೊಂದಿದ ಸಂದರ್ಭದಲ್ಲಿ ಅವರ ‘ಗಳಿಕೆ ರಜೆ ನಗದೀಕರಣ’ (Earned Leave Encashment) ಸೌಲಭ್ಯವನ್ನು ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ಎಸಗಲಾಗಿದೆ. ಅರ್ಹ ಫಲಾನುಭವಿಗಳಿಗೆ ಹೋಗಬೇಕಿದ್ದ ಹಣವನ್ನು ಸೌಮ್ಯ ಅವರು ತಮಗೆ ಬೇಕಾದವರ ಮತ್ತು ತಮ್ಮ ಸಂಬಂಧಿಕರ ವಿವಿಧ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಮುಖಂಡನೂ ಶಾಮೀಲು!

ಈ ಹಗರಣದಲ್ಲಿ ಕೇವಲ ಕಚೇರಿ ಸಿಬ್ಬಂದಿ ಮಾತ್ರವಲ್ಲದೆ ರಾಜಕೀಯ ಪ್ರಭಾವವಿರುವ ವ್ಯಕ್ತಿಗಳೂ ಕೈಜೋಡಿಸಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಮೇಶ್, ಶಿವಲೀಲಾ, ಸುಮಾ, ಮೀನಾಕ್ಷಿ ಹಾಗೂ ಕಚೇರಿ ಸಿಬ್ಬಂದಿ ಪ್ರವೀಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರಿ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸುವ ಮೂಲಕ ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಇಒ ನೀಡಿದ ದೂರಿನ ಮೇರೆಗೆ ಕ್ರಮ:

ಮಧುಗಿರಿ ತಾಲ್ಲೂಕು ಪಂಚಾಯ್ತಿಯ ಇಒ (Executive Officer) ಲಕ್ಷ್ಮಣ ಬಿ.ಎಸ್. ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಆರು ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಅಕ್ರಮವಾಗಿ ವರ್ಗಾವಣೆಯಾದ ಮೊತ್ತವು ಬರೋಬ್ಬರಿ 4,27,00,000 (ನಾಲ್ಕು ಕೋಟಿ ಇಪ್ಪತ್ತೇಳು ಲಕ್ಷ) ರೂಪಾಯಿಗಳಾಗಿದೆ ಎಂದು ತಿಳಿದುಬಂದಿದೆ.

ಅಮಾನತು ಬೆನ್ನಲ್ಲೇ FIR ಕಂಟಕ:

ಈ ಹಗರಣದ ವಾಸನೆ ಬಡಿಯುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಇಲಾಖಾ ತನಿಖೆಯ ವೇಳೆ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವಿಜಾ ಬಿ.ವಿ. ಅವರು ಎಸ್‌ಡಿಎ ಸೌಮ್ಯರನ್ನು ಈ ಹಿಂದೆಯೇ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದರು. ಅಮಾನತು ಆದೇಶದ ಬೆನ್ನಲ್ಲೇ ಈಗ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಜೈಲು ಭೀತಿ ಎದುರಾಗಿದೆ.

ಈ ಪ್ರಕರಣವು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಣಕಾಸು ನಿರ್ವಹಣೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಸದ್ಯ ಮಧುಗಿರಿ ಪೊಲೀಸರು ತನಿಖೆ ಮುಂದುವರಿಸಿದ್ದು, ಅಕ್ರಮ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಹಾಗೂ ಹಗರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *