Headlines

ಬೇರೆ ಕ್ಷೇತ್ರದೊಂದಿಗೆ ಬಾಗಲಕೋಟೆ ಹೋಲಿಕೆ ಮಾಡುವುದು ತಪ್ಪು: ಸಚಿವ ಸತೀಶ್ ಜಾರಕಿಹೊಳಿ | Bagalkot Bypoll Congress Satish Jarkiholi Umesh Meti Win Gvd

ಬೇರೆ ಕ್ಷೇತ್ರದೊಂದಿಗೆ ಬಾಗಲಕೋಟೆ ಹೋಲಿಕೆ ಮಾಡುವುದು ತಪ್ಪು: ಸಚಿವ ಸತೀಶ್ ಜಾರಕಿಹೊಳಿ | Bagalkot Bypoll Congress Satish Jarkiholi Umesh Meti Win Gvd



ಬೇರೆ ಕ್ಷೇತ್ರದೊಂದಿಗೆ ಬಾಗಲಕೋಟೆ ಹೋಲಿಕೆ ಮಾಡುವುದು ತಪ್ಪು: ಸಚಿವ ಸತೀಶ್ ಜಾರಕಿಹೊಳಿ | Bagalkot Bypoll Congress Satish Jarkiholi Umesh Meti Win Gvd

ಈ ಉಪಚುನಾವಣೆ ನಮಗೆ ಒಂದು ರೀತಿಯಲ್ಲಿ ಪ್ರತಿಷ್ಠೆಯ ವಿಷಯ. ಪಕ್ಷ ಸಂಘಟನೆ, ಕಾರ್ಯಕರ್ತರ ಬಲ ಹಾಗೂ ನಾಯಕತ್ವದ ಸಾಮರ್ಥ್ಯ ತೋರಿಸುವ ವೇದಿಕೆ ಇದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ (ಏ.12): ಬಾಗಲಕೋಟೆ ಕ್ಷೇತ್ರವನ್ನು ಬೇರೆ ಕ್ಷೇತ್ರಗಳೊಂದಿಗೆ ಹೋಲಿಕೆ ಮಾಡುವುದು ತಪ್ಪು. ಶಿಗ್ಗಾಂವಿಯಲ್ಲಿ ಗೆದ್ದಂತೆ ಇಲ್ಲಿ ಗೆಲ್ಲುತ್ತೇವೆ ಎನ್ನುವುದು ಸರಿಯಾದ ವಿಶ್ಲೇಷಣೆಯಲ್ಲ. ನಾವು ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿನ ಸ್ಥಳೀಯ ಸಮಸ್ಯೆಗಳು ಸ್ಪಷ್ಟವಾಗಿ ಗೊತ್ತಾಗಿವೆ. ಮಾಜಿ ಸಚಿವ ಎಚ್.ವೈ.ಮೇಟಿ ಅವರ ಸ್ಥಾನವನ್ನು ಮರಳಿ ಪಡೆಯುವುದು ಕಾಂಗ್ರೆಸ್‌ಗೆ ಕೇವಲ ರಾಜಕೀಯ ಪ್ರಶ್ನೆಯಲ್ಲ. ಬದಲಿಗೆ ಪಕ್ಷದ ಪ್ರಾಬಲ್ಯ ಮರುಸ್ಥಾಪಿಸುವ ಅವಕಾಶ. ಈ ಉಪಚುನಾವಣೆ ನಮಗೆ ಒಂದು ರೀತಿಯಲ್ಲಿ ಪ್ರತಿಷ್ಠೆಯ ವಿಷಯ.

ಪಕ್ಷ ಸಂಘಟನೆ, ಕಾರ್ಯಕರ್ತರ ಬಲ ಹಾಗೂ ನಾಯಕತ್ವದ ಸಾಮರ್ಥ್ಯ ತೋರಿಸುವ ವೇದಿಕೆ ಇದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ಚುನಾವಣಾ ತಂತ್ರದ ಬಗ್ಗೆ ಮಾತನಾಡಿದ ಅವರು, ದೊಡ್ಡಮಟ್ಟದ ಸಭೆಗಳು ಅಥವಾ ಲಕ್ಷಾಂತರ ಜನರನ್ನು ಸೇರಿಸುವುದರಿಂದ ಗೆಲುವು ಖಚಿತವಾಗುವುದಿಲ್ಲ. ನಾವು ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಮನೆಮನೆಗೆ ತಲುಪುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಮತದಾರರೊಂದಿಗೆ ನೇರ ಸಂಪರ್ಕ ಬೆಳೆಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ಗೆ ಮಹತ್ವದ್ದಾಗಿದ್ದು, ಎರಡಲ್ಲೂ ಗೆಲುವು ಅನಿವಾರ್ಯವಾಗಿತ್ತು.

ಈ ಎರಡು ಕ್ಷೇತ್ರಗಳಲ್ಲಿ ಒಂದನ್ನಾದರೂ ಕಳೆದುಕೊಂಡಿದ್ದರೆ ಬಿಜೆಪಿ ಮುಂದಿನ ಎರಡು ವರ್ಷಗಳ ಕಾಲ ರಾಜಕೀಯವಾಗಿ ಒತ್ತಡ ತರುವ ಪ್ರಯತ್ನ ಮಾಡುತ್ತಿತ್ತು. ಅದನ್ನು ತಡೆಯಲು ನಾವು ಗಂಭೀರ ಪ್ರಯತ್ನ ನಡೆಸಿದ್ದೇವೆ ಎಂದು ಹೇಳಿದರು. ದಾವಣಗೆರೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಉಂಟಾದ ಅಸಮಾಧಾನದ ಬಗ್ಗೆ ಮಾಹಿತಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಯನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೋಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಮೂಲ ಬಲ ಅಹಿಂದ ವರ್ಗಗಳೇ ಆಗಿದ್ದು, ಈ ವರ್ಗಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದರಿಂದ ಪಕ್ಷದ ನೆಲೆ ಬಲವಾಗುತ್ತದೆ. ಬಾಗಲಕೋಟೆಯಲ್ಲೂ ಅಹಿಂದ ಮತದಾರರು ಒಗ್ಗಟ್ಟಿನಿಂದ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸಮಯೋಚಿತ ವಿಷಯವಾಗಿದ್ದು, ಬದಲಾವಣೆ ಅನಿವಾರ್ಯವೂ ಆಗಬಹುದು. ಆದರೆ, ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿಗೆ ಧಕ್ಕೆ

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಜಲ್ ಜೀವನ ಮಿಷನ್ ಹಾಗೂ ನರೇಗಾ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನು ಸಂಪೂರ್ಣ ಬಿಡುಗಡೆ ಮಾಡದಿರುವುದರಿಂದ ಗ್ರಾಮೀಣ ಅಭಿವೃದ್ಧಿಗೆ ಧಕ್ಕೆಯಾಗುತ್ತಿದೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ಅರ್ಧಭಾಗ ಮಾತ್ರ ಬಿಡುಗಡೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಇದರ ಪರಿಣಾಮ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದರು.

ಇನ್ನು, ರಮೇಶ ಕತ್ತಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು, ಕೆಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಅಲೆ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ. ಆದರೆ, ಮತದಾರರು ಇಂತಹ ಪ್ರಚಾರಕ್ಕೆ ಮಣಿಯುವುದಿಲ್ಲ. ಚುನಾವಣೆ ಜನರ ನಡುವೆ ನಡೆಯುತ್ತದೆ, ಮೊಬೈಲ್ ಸ್ಕ್ರೀನ್ ಮೇಲೆ ಅಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿನಯ ನಾವಲಗಟ್ಟಿ, ಸೈಯ್ಯದ ಮನ್ಸೂರ ಮತ್ತಿತರರು ಉಪಸ್ಥಿತರಿದ್ದರು.



Source link

Leave a Reply

Your email address will not be published. Required fields are marked *