
ದಾಬಸ್‌ಪೇಟೆ ಬಳಿ ನಡೆದ ರಸ್ತೆ ಗಲಾಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ರ ಅಶುತೋಷ್ ಹೆಗಡೆಯನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು (ಏ.12): ರಸ್ತೆ ಗಲಾಟೆ ಪ್ರಕರಣದಲ್ಲಿ ಪಾತ್ರವಿಲ್ಲದಿದ್ದರೂ ಆರೋಪಿಯಾಗಿರುವ ಪುತ್ರ ಅಶುತೋಷ್ ಹೆಗಡೆ ಪಾಸ್‌ಪೋರ್ಟ್ ಜಪ್ತಿಯಿಂದ ಆತನ ವ್ಯಾಸಾಂಗಕ್ಕೆ ಅಡ್ಡಿಯಾಗಿದ್ದು, ಆತನನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ತುಮಕೂರಿನ ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅನಂತಕುಮಾರ್ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಏಕಸದಸ್ಯ ಪೀಠ ನಡೆಸಿತು.
ಪುತ್ರನ ಪಾತ್ರ ಇಲ್ಲ:
ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್, ತನ್ನ ಅಜ್ಜಿಯನ್ನು ಕಾಣಲು ತಂದೆ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯ ರಾಜ್ಯದ ಕಾರು ಅವರ ಕಾರು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್ ಮತ್ತು ಅವರ ಪುತ್ರ ಅಶುತೋಷ್ ಪಾತ್ರ ಇಲ್ಲ ಎಂದು ಅನಂತಕುಮಾರ್ ಹೆಗಡೆ ಪರ ವಕೀಲರು ವಾದಿಸಿದರು.
ಕಾರಿನ ಹಿಂಬದಿ ಸೀಟಲ್ಲಿ ಅಶುತೋಷ್ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದಿಲ್ಲ. ಅವರ ಕಾರಿನ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ, ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿ ಅಶುತೋಷ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆರೋಪ ಪಟ್ಟಿಯಲ್ಲೂ ತಂದೆ-ಮಕ್ಕಳ ಪಾತ್ರದ ಬಗ್ಗೆ ಉಲ್ಲೇಖವಿಲ್ಲ. ಅಶುತೋಷ್ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಲಿ ಪ್ರಕರಣ ಅವರ ಪಾಸ್‌ಪೋರ್ಟ್ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ವಿಚಾರಣೆಯನ್ನು ಏ.16ಕ್ಕೆ ಮುಂದೂಡಿತು.
ಕೆಲ ತಿಂಗಳ ಹಿಂದೆ ದಾಬಸ್‌ಪೇಟೆ ಬಳಿ ರಸ್ತೆಯಲ್ಲಿ ಕಾರು ಓವರ್‌ಟೇಕ್ ಮಾಡುವ ವಿಚಾರವಾಗಿ ಅನಂತಕುಮಾರ್ ಹೆಗಡೆ ಮತ್ತು ಅವರ ಗನ್‌ಮ್ಯಾನ್‌ಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸೈಫ್ ಖಾನ್ ಎಂಬುವರು ದಾಬಸ್‌ಪೇಟೆ ಠಾಣೆಗೆ ದೂರು ನೀಡಿದ್ದರು.