
ಧಾರವಾಡದಲ್ಲಿ ನಡೆದ ಯುವ ಕಾಂಗ್ರೆಸ್ ನಾಯಕ ಫೈರೋಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಸಂಚುಕೋರರು ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ. ಪಠಾಣ್ ಅವರ ಆತ್ಮೀಯರೇ ಈ ಕೃತ್ಯ ಎಸಗಿದ್ದು, ಇತ್ತೀಚಿನ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.
ಫೈರೋಜ್ ಪಠಾಣ್ ಹಂತಕರು 24 ಗಂಟೆಯೊಳಗೆ ಅಂದರ್!
ಧಾರವಾಡ: ನಿನ್ನೆ ಧಾರವಾಡದಲ್ಲಿ ನಡೆದ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪೊಲೀಸರು 8 ಜನ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಐವರು ಕೊಲೆ ಆರೋಪಿಗಳು ಹಾಗೂ ಸಂಚು ರೂಪಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೊರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ. 9 ಜನರ ಗ್ಯಾಂಗ್‌ನಿಂದ ಈ ಕೊಲೆ ನಡೆದಿದ್ದು, ಘಟನೆಯ ಬಳಿಕ ಕಾರ್ಯಾಚಚರಣೆಗೆ ಇಳಿದ ಧಾರವಾಡ ಪೊಲೀಸರು ತಡರಾತ್ರಿಯೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಎ 1 ಆರೋಪಿ ಮೊಹ್ಮದ್ ಷಾ, ಕೈಪ್, ಗೌಸ್, ಸಮೀರ್, ಸದ್ದಾಂ ಎಂದು ಗುರುತಿಸಲಾಗಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯ ಬಳಿಕ ಆರೋಪಿಗಳು ಧಾರವಾಡ-ಬೆಳಗಾವಿ ಗಡಿ ಭಾಗದಲ್ಲಿ ಪೈರೋಜ್ ಮೊಬೈಲ್ ಫೋನ್ ಬಿಸಾಕಿ ಹೋಗಿದ್ದರು. ತನಿಖೆಗಿಳಿದ ಪೊಲೀಸರು ಮೊಬೈಲ್ ಲೋಕೆಷನ್ ಹುಡುಕಿದಾಗ ಗಡಿಭಾಗದಲ್ಲಿ ಮೊಬೈಲ್ ಪತ್ತೆಯಾಗಿದೆ. ನಂತರ ಆರೋಪಿಗಳಿಗೆ ಮೂರು ತಂಡ ರಚಿಸಿದ ಹು-ಧಾ ಕಮಿಷನರ್ ಎನ್. ಶಶಿಕುಮಾರ್ ತಡರಾತ್ರಿ ಐವರನ್ನು ಬಂಧಿಸಿದ್ದಾರೆ. ಉಪ್ಪಿನ ಬೆಟಗೇರಿಯ ಸಂಬಂಧಿಕರ ಮನೆಯಲ್ಲಿದ್ದಾಗ ಆರೋಪಿಗಳ ಬಂಧನವಾಗಿದೆ. ಪ್ರಕರಣದ ಎಒನ್ ಆರೋಪಿ ಮಹಮ್ಮದ್ ಶಾ ಸಂಬಂಧಿಕರ ಮನೆಯಲ್ಲಿ ಆರೋಪಿಗಳು ಅಡಗಿದ್ದರು.
ಇದನ್ನೂ ಓದಿ: ಮಂಗಳೂರು: ಪ್ರೀತಿಸಿದ ಹುಡುಗಿಯಿಂದ ಅವಮಾನ: ಸಾವಿಗೆ ಶರಣಾದ ಯುವಕ: ಯುವತಿ, ಆಕೆ ತಾಯಿ ವಿರುದ್ಧ FIR
ಧಾರವಾಡದಲ್ಲಿರುವ ಪಠಾಣ್ ಅವರ ಮನೆಯಲ್ಲಿ ಸಂಜೆ 6:30 ರ ಸುಮಾರಿಗೆ ಈ ಘಟನೆ ನಡೆದಿತ್ತು. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಕೊಲೆಯಾದ ಫೈರೋಜ್ ಪಠಾಣ್ ಅವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ನಡೆಯುವುದಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಕಾಣುವಂತೆ ಪಠಾಣ್ ವರಾಂಡಾದಲ್ಲಿ ಕುಳಿತಿದ್ದಾಗ ನೀಲಿ ಬಿಳಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಅವರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಅವರ ಪಕ್ಕದಲ್ಲಿ ಬಂದು ಕುಳಿತಿದ್ದಾರೆ ಅಷ್ಟರಲ್ಲೇ ಇತರ ಇಬ್ಬರು ಬಂದು ಪಠಾಣ್ ಮನೆ ಗೇಟ್ ಹೊರಗೆ ನಿಂತಿದ್ದಾರೆ. ಇತ್ತ ಪಠಾಣ್ ಅವರು ಯಾರೋಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದು, ಅವರನ್ನು ಫಾಲೋ ಮಾಡಿದ ಆರೋಪಿ ಪಠಾಣ್ ಅವರ ಹೊಟ್ಟೆಗೆ ಇರಿದಿದ್ದಾನೆ. ನಂತರ ಜೊತೆಗಿದ್ದವರು ಸೇರಿಕೊಂಡು ಪಠಾಣ್ ಗೆ ಇರಿದಿದ್ದು, ಘಟನೆ ನಡೆದ 40 ಸೆಕೆಂಡ್‌ನಲ್ಲಿ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕದ ಛಾಯೆ
ಪೊಲೀಸರ ಪ್ರಕಾರ ಕೊಲೆ ಮಾಡಿದವರು ಪಠಾಣ್ ಅವರ ಆತ್ಮೀಯರೇ ಆಗಿದ್ದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪಠಾಣ್ ಮತ್ತು ಆರೋಪಿಗಳು ಇಬ್ಬರೂ ನಿಕಟ ಸಂಬಂಧ ಹೊಂದಿದ್ದರು ಮತ್ತು ಒಂದೇ ರಾಜಕೀಯ ಪಕ್ಷದ ಭಾಗವಾಗಿದ್ದರು ಎಂದು ಹೇಳಿದ್ದಾರೆ. ಆದರೆ ಇತ್ತಿಚೆಗೆ ಅವರ ಮಧ್ಯೆ ಭಿನ್ನಾಭಿಪ್ರಾಯ ಬೆಳೆದಿದ್ದು, ಇದೇ ಕೊಲೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಪಠಾಣ್ ಅವರ ಮದುವೆ ಏಪ್ರಿಲ್ 24ರಂದು ನಿಗದಿಯಾಗಿತ್ತು. ಆದರೆ ಮದುವೆಗೆ ಕೆಲವೇ ವಾರಗಳಿರುವಾಗ ಅವರ ಒಂದು ಕಾಲದ ಆತ್ಮೀಯರೇ ಅವರನ್ನು ದಾರುಣವಾಗಿ ಕೊಲೆ ಮಾಡಿದ್ದು, ಮದುವೆಗೆ ಸಜ್ಜುಗೊಳ್ಳಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಕೊಲೆಗೆ ಏನು ಕಾರಣ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು