
ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಸುಮಾರು 2.83 ಕೋಟಿ ರೂ. ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಭೂ ವಿನ್ಯಾಸ ನಕ್ಷೆ ಅನುಮೋದನೆಯಲ್ಲೂ ವ್ಯಾಪಕ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ 2,83,34,944 ರು. ಹಣವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆ ಮಾಡದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಲೋಕಾಯುಕ್ತ ತನಿಖೆಯಿಂದ ಬಹಿರಂಗೊಂಡಿದೆ.
1994-95ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಸ್ಥಳೀಯ ಲೆಕ್ಕ ಪರಿಶೋಧನಾ ವರದಿಗಳ ಪ್ರಕಾರ ಗ್ರಾಮ ಪಂಚಾಯ್ತಿಗಳು ಜನರಿಂದ ಪಡೆದ ತೆರಿಗೆ ಹಣವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆ ಮಾಡದಿರುವುದು ಕಂಡುಬಂದಿದೆ. ಈ ಹಣವನ್ನು ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದಾಗಿ ಲೋಕಾಯುಕ್ತ ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.
ಕಿರಂಗೂರು ಮೋಹನ್‌ಕುಮಾರ್ ಅವರು ಕಿರಂಗೂರು ಗ್ರಾಪಂನಲ್ಲಿ 2 ಎಕರೆ 33 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸಿಕೊಂಡಿದ್ದು ಇದರಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಕಿರಂಗೂರು ಗ್ರಾಪಂನಿಂದ ಇ-ಸ್ವತ್ತುಗಳನ್ನು ಕೊಟ್ಟಿರುವುದಾಗಿ ಆರೋಪಿಸಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು.
ದೂರು ಅರ್ಜಿಯಲ್ಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಲೋಕಾಯುಕ್ತ ಪೊಲೀಸರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ತಾಪಂ ಕಾರ್ಯನಿರ್ವಹಣಾಧಿಕಾರಿ ಕಚೇರಿ, ಶ್ರೀರಂಗಪಟ್ಟಣ ತಾಲೂಕು ಕಚೇರಿ ಹಾಗೂ ಕಿರಂಗೂರು ಗ್ರಾಪಂ ಕಚೇರಿಯನ್ನು ಶೋಧನೆ ನಡೆಸಲು ವಾರೆಂಟ್ ಹೊರಡಿಸಿದ್ದರು.
ಶ್ರೀರಂಗಪಟ್ಟಣ ತಾಲೂಕು ಕಚೇರಿ ಶೋಧನೆ ಮಾಡಲು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪೊಲೀಸ್ ಉಪಾಧೀಕ್ಷಕ ಎಚ್.ಟಿ.ಸುನೀಲ್‌ಕುಮಾರ್ ನೇತೃತ್ವದ ತಂಡ ಹಾಗೂ ಕಿರಂಗೂರು ಗ್ರಾಪಂ ಕಚೇರಿ ಶೋಧನೆಗೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ರವಿಕುಮಾರ್, ಆರ್.ಜಿ.ಲೇಪಾಕ್ಷಮೂರ್ತಿ ನೇತೃತ್ವದ ಎರಡು ತಂಡಗಳನ್ನು ರಚಿಸಿಕೊಂಡು ಶೋಧನೆಗಳಿದಾಗ ಅಕ್ರಮಗಳ ಸರಮಾಲೆಗಳು ಬೆಳಕಿಗೆ ಬಂದವು.
ತಾಪಂ ಕಚೇರಿ, ತಾಲೂಕು ಕಚೇರಿಯಲ್ಲೂ ಅಕ್ರಮ
ಜಮೀನುಗಳ ವಿನ್ಯಾಸನಕ್ಷೆ ಅನುಮೋದನೆಗೆ ಅರ್ಜಿದಾರರು ಅರ್ಜಿಯನ್ನು ಪಂಚಾಯ್ತಿಗೆ ಸಲ್ಲಿಸಿರುವ ಬಗ್ಗೆ ಗ್ರಾಪಂನಿಂದ ತಾಲೂಕು ಪಂಚಾಯ್ತಿಗೆ ಅನುಮೋದನೆ ಸಂಬಂಧ ಪತ್ರ ವ್ಯವಹಾರ ನಡೆಸಿರುವ ದಾಖಲೆಗಳೇ ಇಲ್ಲ. ಕೇವಲ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿರುವ ಆದೇಶ ಪ್ರತಿ ಮಾತ್ರ ಕಂಡುಬಂದಿದೆ. ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವೇಣು ಅರ್ಜಿದಾರರು ಕೋರಿಕೆ ಸಲ್ಲಿಸದಿದ್ದರೂ ವಿನ್ಯಾಸನಕ್ಷೆಗೆ ಅನುಮೋದನೆ ನೀಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಮೊಗರಹಳ್ಳಿ, ಅಣಗನಹಳ್ಳಿ, ಗ್ರಾಮದ ಹಲವಾರು ಸರ್ವೇ ನಂಬರ್‌ಗಳಲ್ಲಿರುವ ಜಮೀನುಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿನ್ಯಾಸನಕ್ಷೆ ಅನುಮೋದನೆ ಮಾಡಿರುವುದು ಕಂಡುಬಂದಿದೆ.
2022ನೇ ಸಾಲಿನ ಭೂ ಪರಿವರ್ತಿತ ಜಮೀನಿನ ಅನುಮೋದಿತ ವಿನ್ಯಾಸ ನಕ್ಷೆಯ 42 ಕಡತಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಡಿರುವ ಅಂತಿಮ ವಿನ್ಯಾಸ ನಕ್ಷೆ ಅನುಮೋದನೆ ಆದೇಶವನ್ನು ಹೊರತುಪಡಿಸಿ ಯಾವುದೇ ದಾಖಲೆಗಳು ಕಚೇರಿಯಲ್ಲಿ ಕಂಡುಬಂದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ವಿಸ್ತೀರ್ಣದಲ್ಲಿ ರಸ್ತೆ, ಉದ್ಯಾನವನ, ಪಾರ್ಕಿಂಗ್‌ಗಳನ್ನು ವಿನ್ಯಾಸ ನಕ್ಷೆಯಲ್ಲಿ ಅನುಮೋದಿಸದೆ ಅನುಮೋದನೆ ನೀಡಲಾಗಿದೆ.
ಕಿರಂಗೂರು, ಜಕ್ಕನಹಳ್ಳಿ, ಹೊಸಹಳ್ಳಿ, ಬೆಳಗೊಳ, ಚಿಕ್ಕಅಂಕನಹಳ್ಳಿ, ಕೆ.ಆರ್.ಸಾಗರ, ನೆಲಮನೆ, ನೀಲನಕೊಪ್ಪಲು, ಅಗ್ರಹಾರ, ಕೆ.ಶೆಟ್ಟಹಳ್ಳಿ, ಕಡತನಾಳು, ಬ್ರಹ್ಮಪುರ, ದರಸಗುಪ್ಪೆ, ನಗುವಿನಹಳ್ಳಿ ಗ್ರಾಮದ ನೂರಾರು ಸರ್ವೆ ನಂಬರ್‌ಗಳಲ್ಲಿ ಪಾರ್ಕಿಂಗ್ ಜಾಗ, ಕಾಲುವೆ ಯಾವ ರೀತಿ ಇದೆ, ಬಫರ್‌ಜೋನ್ ಸೇರಿದಂತೆ ಹಲವಾರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ವಿನ್ಯಾಸನಕ್ಷೆ ಅನುಮೋದನೆ ನೀಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಏಕ ನಿವೇಶನಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ಬಹು ನಿವೇಶನಗಳ ನಕಾಶೆ ಲಗತ್ತಿಸಿದ್ದರೂ ಅನುಮೋದನೆ ನೀಡಿದೆ. ಹಲವೆಡೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿಲ್ಲವೆಂದು ತಿಳಿಸಲಾಗಿದೆ.
ಇದನ್ನೂ ಓದಿ: ‘ನನ್ನ ಫೋಟೋ ಇರುವ ಫ್ಲೆಕ್ಸ್ ಹಾಕಬೇಡಿ’ ; ಅಭಿಮಾನಿಗಳಿಗೆ ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಮನವಿ
ವಾಣಿಜ್ಯ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಬದಲಾವಣೆ
ಕಿರಂಗೂರು ಗ್ರಾಪಂ ವ್ಯಾಪ್ತಿಯ ಗ್ರಾಮದ ಸರ್ವೇ ನಂ1085/2, 1080/1, 1079/1, 1080/2ಈ ನಾಲ್ಕು ಸರ್ವೇ ನಂಬರ್‌ಗಳಲ್ಲಿ ಬಹು ನಿವೇಶನ ವಸತಿಯೇತರ ವಾಣಿಜ್ಯ ಉದ್ದೇಶಕ್ಕಾಗಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿದೆ. ಆದರೆ, ವಿನ್ಯಾಸ ನಕ್ಷೆಯು ವಾಣಿಜ್ಯ ಉದ್ದೇಶದ ನಕ್ಷೆಯ ಬದಲಾಗಿ ವಸತಿ ಉದ್ದೇಶದ ನಕ್ಷೆಯನ್ನು ತಾಪಂ ಇಒ ಆಗಿದ್ದ ವೇಣು ಅನುಮೋದನೆ ನೀಡಿದ್ದಾರೆ. ಅದರಂತೆ ಪಿಡಿಒ ಪಿ.ಎ.ಪ್ರಶಾಂತ್‌ಬಾಬು ಅವರು 56 ನಿವೇಶನಗಳ ಪೈಕಿ 10 ನಿವೇಶನಗಳನ್ನು ವಾಣಿಜ್ಯ ನಿವೇಶನಗಳೆಂದು ಇ-ಸ್ವತ್ತು ಖಾತೆ ಮಾಡಿ ಉಳಿದ 46 ನಿವೇಶನಗಳನ್ನು ವಸತಿ ಉದ್ದೇಶದ ನಿವೇಶನಗಳನ್ನಾಗಿ ಇ-ಸ್ವತ್ತು ಖಾತೆ ಮಾಡಿ ಕರ್ತವ್ಯಲೋಪವೆಸಗಿದ್ದಾರೆ. ಜಿಲ್ಲಾಧಿಕಾರಿಗಳೇ ವಾಣಿಜ್ಯ ಉದ್ದೇಶಕ್ಕೆ ಜಮೀನನ್ನು ಅನ್ಯಕ್ರಾಂತ ಮಾಡಿದ್ದರೂ ಅದನ್ನು ನಿವೇಶನ ಉದ್ದೇಶಕ್ಕೆ ಇ-ಸ್ವತ್ತು ಮಾಡಿರುವುದು ಕಂಡುಬಂದಿದೆ. ಮ್ಯುಟೇಷನ್ ವಹಿಗಳನ್ನು ವೈಟ್ನರ್‌ಗಳಿಂದ ತಿದ್ದಿ ಹೊಸದಾಗಿ ಬರೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಶಾಸಕರು ನಿರ್ಮಿಸುತ್ತಿರುವ ಬಡಾವಣೆಯಲ್ಲೂ ನ್ಯೂನತೆ
ಕಿರಂಗೂರು ಗ್ರಾಪಂ ವ್ಯಾಪ್ತಿಯ ಒಟ್ಟು 18 ಖಾಸಗಿ ಬಡಾವಣೆಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದಾಗ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದರಲ್ಲಿ ಸುಮತಿ ಕೋಂ. ರಮೇಶ್‌ಬಾಬು ಅವರು ಕಿರಂಗೂರು ಗ್ರಾಮದ ಸರ್ವೆ ನಂ. 402/2, 418/3, 418/4, 419/2, 419/3ರಲ್ಲಿ ಒಟ್ಟು 2.26 ಎಕರೆಯಲ್ಲಿ ನಿವೇಶನ ಅಭಿವೃದ್ಧಿಪಡಿಸುತ್ತಿದ್ದು, ಇದರಲ್ಲೂ ಸಾಕಷ್ಟು ನ್ಯೂನತೆಗಳು ಕಂಡುಬಂದಿರುವುದನ್ನು ಲೋಕಾಯುಕ್ತ ತನಿಖಾ ತಂಡ ಪತ್ತೆ ಹಚ್ಚಿದೆ.
ಅರ್ಜಿದಾರರು ನಿವೇಶನಗಳ ಬಿಡುಗಡೆ ಸಂಬಂಧ ಸಲ್ಲಿಸಬೇಕಾಗಿರುವ ನೋಟರೀಕೃತ ಪ್ರಮಾಣಪತ್ರ ಸಲ್ಲಿಸಿಲ್ಲ, ನಿವೇಶನ ಬಿಡುಗಡೆ ಸಂಬಂಧ ಸಭೆಯ ನಡಾವಳಿಗಳು ಇರುವುದಿಲ್ಲ, ನಿವೇಶನ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಬೇಕಾಗಿರುವ ನಿರಾಕ್ಷೇಪಣಾ ಪತ್ರಗಳು ಕಡತದಲ್ಲಿ ಲಭ್ಯವಿರುವುದಿಲ್ಲ. ಸಾರ್ವಜನಿಕ ಉಪಯುಕ್ತತೆಯ ಜಾಗವಾದ ಉದ್ಯಾನವನ, ನಾಗರೀಕ ಸೌಲಭ್ಯ, ರಸ್ತೆ ವಿಸ್ತರಣೆ ಜಾಗವನ್ನು ಹಸ್ತಾಂತರಿಸಿಕೊಂಡಿರುವ ಬಗ್ಗೆ ಪರಿತ್ಯಜನ ಪತ್ರ ಇರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: 1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ