
ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.12): ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಸರ್ಕಾರ ಬಂದು ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಈ ಹಿಂದೆ ಹಲವು ಶಾಸಕರು ಸಚಿವ ಸ್ಥಾನಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು.
ಅದಕ್ಕೆ ನಾನು ಕೂಡ ಸಹಿ ಹಾಕಿದ್ದೆ. ಈಗ ಅಧಿವೇಶನ ನಡೆಯುವಾಗಲೂ ಸಿಎಂ ಅವರನ್ನು ಹಿರಿಯ ಶಾಸಕರು ಭೇಟಿಯಾಗಿದ್ದರು. ಅವರಿಗೂ ಸಹ ಮನವಿ ಮಾಡಿದ್ದರು, ನಾವು ಹೈಕಮಾಂಡ್ ಬಳಿಗೆ ಹೋಗುತ್ತೇವೆ ಅಂದಿದ್ರು. ಆದರೆ ಹೋಗಿದ್ದಾರೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ಪುನರ್ ರಚನೆ ಆಗಬೇಕು, ನಮಗೂ ಮಂತ್ರಿ ಸ್ಥಾನ ಸಿಗಬೇಕು ಎನ್ನುವುದು ಎಲ್ಲಾ ಸರ್ಕಾರದಲ್ಲೂ ಇರುತ್ತದೆ. ನಮ್ಮಲ್ಲಿ ಡೆಮೊಕ್ರಾಟಿಕ್ ಆಗಿ ನಡೆದುಕೊಳ್ಳುತ್ತೇವೆ. ಕೇಳುವುದು ತಪ್ಪು ಅಂತನೂ ಹೇಳುವುದಕ್ಕೆ ಆಗಲ್ಲ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಕೇಳಿದ್ದರು. ಸಂಪುಟ ಪುನರ್ ರಚನೆ ಹೈಕಮಾಂಡ್ ಮತ್ತು ಸಿಎಂ, ಡಿಸಿಎಂ ಅವರಿಗೆ ಬಿಟ್ಟಂತಹ ವಿಚಾರ. ಪುನರ್ ರಚನೆ ಆದರೆ ನಮ್ಮ ಜಿಲ್ಲೆಗೂ ಸಚಿವ ಸ್ಥಾನ ನೀಡಬೇಕು ಎಂದು ಕೇಳುತ್ತೇನೆ. ಕೊಡಬೇಕು ಅಥವಾ ಬಿಡಬೇಕು ಎನ್ನುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಸರ್ಕಾರ ಪುನರ್ ರಚನೆ ಆಗಬೇಕು ಎನ್ನುವುದು ಸಾಮಾನ್ಯ. ಕೆಲವರನ್ನು ಕೈಬಿಟ್ಟು ಕೆಲವರಿಗೆ ಅವಕಾಶ ನೀಡಲು ಪುನರ್ ರಚನೆ ಆಗಬೇಕಾಗುತ್ತದೆ. ಕೆಲವು ಜಿಲ್ಲೆಗಳು, ಕೆಲವು ವರ್ಗಗಳಿಗೆ ಸಚಿವ ಸ್ಥಾನ ಕೊಟ್ಟಿಲ್ಲ.
ಸಾಮಾಜಿಕ ನ್ಯಾಯ ಸರಿಪಡಿಸಲು ಪುನರ್ ರಚನೆ ಮಾಡಬೇಕಾಗುತ್ತದೆ. ಇದೆಲ್ಲವನ್ನೂ ಯೋಚಿಸಿ ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆ ಆಗಬಹುದು. ನನಗೂ ಆ ನಿರೀಕ್ಷೆ ಇದೆ ಎಂದು ಶಾಸಕ ಎ ಎಸ್ ಪೊನ್ನಣ್ಣ ಹೇಳಿದ್ದಾರೆ. ಇನ್ನು ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮುಸ್ಲಿಂ ಮುಖಂಡರು ಕೆಲಸ ಮಾಡಿದ್ದರೆ ಹೈಕಮಾಂಡ್ ಅಂತಹವರ ವಿರುದ್ಧ ಕ್ರಮ ಕೈಗೊಳಲಿದೆ ಎಂದು ಹೇಳಿದ್ದಾರೆ.
ಪಕ್ಷದ ವರಿಷ್ಠರೇ ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಸುರ್ಜೇವಾಲ ಅವರೆಲ್ಲಾ ವೀಕ್ಷಕರಾಗಿ ಇದ್ದು ಕೆಲಸ ಮಾಡಿದ್ದಾರೆ. ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರೆ ಅದು ವೀಕ್ಷಕರ ಗಮನಕ್ಕೆ ಹೋಗಿರುತ್ತದೆ. ಈಗ ಪಕ್ಷದಿಂದ ಖಂಡಿತ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಹೈಕಮಾಂಡಿಗೆ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷ ತೆಗೆದುಕೊಳ್ಳುವ ಶಿಸ್ತು ಕ್ರಮಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯುದ್ಧ ಯಾರಿಗೂ ಒಳ್ಳೆಯದಲ್ಲ
ಇನ್ನು ಅಮೆರಿಕ, ಇರಾನ್ ನಡುವಿನ ಸಂಧಾನ ಸಭೆ ವಿಫಲವಾಗಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಂಧಾನ ಮಾತುಕತೆ ವಿಫಲ ಆಗಿರುವುದು ಇಡೀ ವಿಶ್ವಕ್ಕೆ ಅತ್ಯಂತ ಆಘಾತಕಾರಿ ಬೆಳವಣಿಗೆ. ಯುದ್ಧ ಯಾರಿಗೂ ಒಳ್ಳೆಯದಲ್ಲ, ಈಗಾಗಲೇ ಒಂದು ಮತ್ತು ಎರಡನೇ ಮಹಾಯುದ್ಧಗಳು ನಡೆದಿವೆ. ಅದರಿಂದ ಜಗತ್ತಿಗೆ, ಮಾನವ ಕುಲಕ್ಕೆ ಅಪಾರ ನಷ್ಟ ಆಗಿದ್ದು, ಯುದ್ಧ ಯಾವುದಕ್ಕೂ ಪರಿಹಾರ ಅಲ್ಲ. ಯುದ್ಧ ನಿಲ್ಲಬೇಕು ಎನ್ನುವುದು ನಮ್ಮ ಆಶಯ. ಕೆಲವು ದೇಶಗಳು ಹೆಚ್ಚು ಪ್ರಭಾವ ಬೀರಬೇಕು, ಆರ್ಥಿಕ ಸ್ಥಿತಿ ಮೇಲೆ ನಮ್ಮ ಹಿಡಿತ ಇರಬೇಕು ಅಂತ ತಪ್ಪು ತೀರ್ಮಾನಗಳನ್ನು ಮಾಡುತ್ತವೆ.
ಇಸ್ರೇಲ್ ಮತ್ತು ಅಮೆರಿಕ ಮಾಡಿರುವುದನ್ನು ಯಾರು ಒಪ್ಪುವಂತಹದ್ದಲ್ಲ. ವಿದೇಶಾಂಗ ನೀತಿ ರೂಪಿಸಿದಾಗ ಯಾವುದೇ ಅತಿಕ್ರಮಣಗಳನ್ನು ಒಪ್ಪಲು ಸಾಧ್ಯವಿಲ್ಲ. 1947 ನೇ ಇಸವಿಯಲ್ಲಿ ಭಾರತ ಧೂಳಿನಿಂದ ಕೂಡಿದ್ದ ದೇಶವಾಗಿತ್ತು, ಆಗ ಎತ್ತಿಗಾಡಿಗಳು ಓಡುತ್ತಿದ್ದವು. 1952 ರಲ್ಲಿ ನೆಹರು ಚುನಾವಣೆಯಲ್ಲಿ ಗೆದ್ದರು. ನಂತರ ರಷ್ಯಾ ಹಾಗೂ ಅಮೆರಿಕ ಜೊತೆಗೆ ಹೋಗಲ್ಲ ಅಂತ ನಾನ್ ಅಲೈನ್ಮೆಂಟ್ ಮಾಡಿದರು. ಆ ಆಲೋಚನೆಯನ್ನು ಈ ಸರ್ಕಾರ ಕೂಡ ಮುಂದುವರಿಸುವುದು ದೇಶಕ್ಕೆ ಶೋಭೆ ತರುತ್ತದೆ ಎಂದು ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.