
ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ಇಟ್ಟಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಇಂತಹ ದುರುದ್ದೇಶಪೂರಿತ ಪ್ರಯತ್ನಗಳಿಂದ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ (ಏ.13): ಅರುಣಾಚಲ ಪ್ರದೇಶದ ಕೆಲ ಪ್ರದೇಶಗಳ ಹೆಸರು ಬದಲಿಸುವ ಕೆಲಸವನ್ನು ಚೀನಾ ಮುಂದುವರೆಸಿದ್ದು, ಇದೀಗ 27 ಸ್ಥಳ, ಬೆಟ್ಟ, ನದಿಗಳಿಗೆ ಹೊಸ ಹೆಸರು ನಾಮಮಕರಣ ಮಾಡಿದೆ. ಇದಕ್ಕೆ ಭಾರತದ ಕಡೆಯಿಂದ ತೀಕ್ಷ್ಣ ಎಚ್ಚರಿಕೆ ರವಾನೆಯಾಗಿದೆ. ಅರುಣಾಚಲ ಪ್ರದೇಶ ಭಾರತದ ಭಾಗವಾಗಿದ್ದು, ಹೆಸರು ಬದಲಿಸುವ ಮೂಲಕ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲು ಯತ್ನಿಸಿದರೆ ಈ ವಾಸ್ತವ ಬದಲಾಗದು. ಭಾರತದ ಭೂಪ್ರದೇಶದ ಭಾಗವಾಗಿರುವ ಸ್ಥಳಗಳಿಗೆ ಕಾಲ್ಪನಿಕ ಹೆಸರುಗಳನ್ನು ನೀಡುವ ಚೀನಾದ ಯಾವುದೇ ದುರುದ್ದೇಶಪೂರಿತ ಪ್ರಯತ್ನಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆ.
ಭಾರತದ ತಿರುಗೇಟು
ಸುಳ್ಳು ಹಕ್ಕುಗಳನ್ನು ಪ್ರತಿಪಾದಿಸುವುದು ಮತ್ತು ಆಧಾರರಹಿತ ಕಥನಗಳನ್ನು ಹೆಣೆಯುವುದರಿಂದ, ಅರುಣಾಚಲ ಪ್ರದೇಶ ಸೇರಿದಂತೆ ಇನ್ನಿತರ ಸ್ಥಳಗಳು ಭಾರತದ ಅವಿಭಾಜ್ಯ ಭಾಗ ಎಂಬ ಸತ್ಯ ಬದಲಾಗುವುದಿಲ್ಲ. ಚೀನಾದ ಈ ಕ್ರಮಗಳು ಭಾರತ-ಚೀನಾ ಸಂಬಂಧಗಳನ್ನು ಸ್ಥಿರಗೊಳಿಸುವ ಮತ್ತು ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ‘ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಯ ಕೆಲಸ ನಡೆಯುತ್ತಿರುವ ಹೊತ್ತಿನಲ್ಲೇ ಅದರ ಮೇಲೆ ಋಣಾತ್ಮಕ ಪರಿಣಾಮ ಬೀರುವಂತಹ ಕೆಲಸವನ್ನು ಚೀನಾ ಮಾಡಬಾರದು’ ಎಂದೂ ಅವರು ಬುದ್ದಿವಾದ ಹೇಳಿದ್ದಾರೆ.