
ಜನವರಿ, ಏಪ್ರಿಲ್ 13: ಅಮೆರಿಕ ಮತ್ತು ಇರಾನ್ ನಡುವೆ ರಾಜಿ ಸಂಧಾನಕ್ಕಾಗಿ ನಡೆದ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ನಿರೀಕ್ಷೆಯಂತೆ ತೈಲ ಬೆಲೆಗಳು (ಕಚ್ಚಾ ತೈಲ ಬೆಲೆಗಳು) ಜಿಗಿತ ಕಂಡಿವೆ. ಕಚ್ಚಾ ತೈಲ ಬೆಲೆಗಳು ಮತ್ತೆ 100 ಡಾಲರ್ ಗಡಿ ದಾಟಿವೆ. ತೈಲ ಬೆಲೆ ಸೋಮವಾರ ಶೇ. 11ರಷ್ಟು ಹೆಚ್ಚಾಗಿ ಬ್ಯಾರಲ್ಗೆ 105 ಡಾಲರ್ ಆಸುಪಾಸಿನಷ್ಟಿದೆ. ಡಬ್ಲ್ಯುಟಿಐ ಫ್ಯೂಚರ್ಸ್ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 104.25 ಡಾಲರ್ಗೆ ಏರಿದೆ. ಬ್ರೆಂಟ್ ಕ್ರ್ಯೂಡ್ನಲ್ಲಿ 101 ಡಾಲರ್ ಬೆಲೆ ಇದೆ.
ತೈಲ ಬೆಲೆ ಸಖತ್ ಏರಲು ಇರಾನ್ ಅಮೆರಿಕ ಶಾಂತಿ ಮಾತುಕತೆ (ಯುಎಸ್ ಇರಾನ್ ಶಾಂತಿ ಮಾತುಕತೆ) ಮುರಿದುಬಿದ್ದದ್ದು ಮಾತ್ರವೇ ಕಾರಣವಲ್ಲ, ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಲು ಅಮೆರಿಕ ಮುಂದಾಗಿರುವುದು ಮತ್ತೊಂದು ಕಾರಣ.
ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನಗಳು ರಫ್ತು ಸುಂಕದಲ್ಲಿ ಭರ್ಜರಿಯಾಗಿ; ಡೀಸಲ್ಗೆ 55.5 ರೂ, ಎಟಿಎಫ್ಗೆ 42 ರೂ ಸುಂಕ
ವರದಿಗಳ ಪ್ರಕಾರ ಎರಡು ಪ್ರಮುಖ ಕಾರಣಗಳಿಗೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸಂಧಾನ ಮುರಿದುಬಿದ್ದಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಂಧಾನ ಮಾತುಕತೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಅಭಿಪ್ರಾಯಭೇದ ಎದ್ದುಕಂಡಿತ್ತು. ಇರಾನ್ ದೇಶವು ತನ್ನ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯನ್ನು ನಿಲ್ಲಿಸಬೇಕು. ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಭಂಗ ಮಾಡಕೂಡದು. ಅಮೆರಿಕದ ಈ ಎರಡು ಬೇಡಿಕೆಗಳನ್ನು ಇರಾನ್ ತಿರಸ್ಕರಿಸಿತು. ಹೀಗಾಗಿ, ಶಾಂತಿ ಮಾತುಕತೆ ಕೊನೆಯ ಕ್ಷಣದಲ್ಲಿ ಮುರಿದುಬಿತ್ತು.
ಅಮೆರಿಕ ಮತ್ತು ಇಸ್ರೇಲ್ ದೇಶಗಳು ತನ್ನ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ತಡೆದಿದೆ. ಶೇ. 20ರಷ್ಟು ತೈಲಗಳು ಈ ಜಲಮಾರ್ಗದ ಮೂಲಕ ಹಡಗುಗಳಲ್ಲಿ ಸಾಗಿ ಹೋಗುತ್ತವೆ. ಹೆಚ್ಚಿನ ಏಷ್ಯನ್ ದೇಶಗಳು ಈ ತೈಲದ ಮೇಲೆ ಅವಲಂಬಿತವಾಗಿವೆ. ಈಗ ಈ ಜಲಸಂಧಿಯಲ್ಲಿ ಹಡಗುಗಳಿಗೆ ಸುಂಕ ಹೇರುವ ವ್ಯವಸ್ಥೆ ಇರಾನ್ ಮಾಡಿದೆ. ಇದನ್ನು ತಪ್ಪಿಸಲು ಅಮೆರಿಕ ಈಗ ತನ್ನ ನೌಕಾಪಡೆಯನ್ನು ಹಾರ್ಮುಜ್ಗೆ ಕಳುಹಿಸುತ್ತಿದೆ. ಈ ಜಲಸಂಧಿಯಿಂದ ಯಾವುದೇ ಹಡಗು ಸಾಗಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.
ಇದನ್ನೂ ಓದಿ: ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡಾಂಟ್ ಕೇರ್: ಡೊನಾಲ್ಡ್ ಟ್ರಂಪ್
ಈ ಬೆಳವಣಿಗೆಯ ಬೆನ್ನಲ್ಲೇ ತೈಲ ಬೆಲೆಗಳು ಏರತೊಡಗಿವೆ. ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಪೆಟ್ರೋಲ್, ಡೀಸಲ್, ಗ್ಯಾಸ್ ಬಿಕ್ಕಟ್ಟು ಮತ್ತೆ ದೊಡ್ಡದಾಗಲಿದೆ. ಭಾರತ ಈ ಪರಿಸ್ಥಿತಿಗೆ ಈಗಲೇ ಸಜ್ಜಾಗುತ್ತಿದೆ. ಕೆಲ ಪೆಟ್ರೋಲಿಯಂ ಉತ್ಪನ್ನಗಳಿಗೆ ರಫ್ತು ಸುಂಕ ಭಾರೀ ಪ್ರಮಾಣದಲ್ಲಿ ಏರಿಸಿದೆ. ರಷ್ಯಾದಿಂದ ತೈಲ ಪೂರೈಕೆ ಹೆಚ್ಚಿಸಿದೆ. ತೈಲ ಮತ್ತು ಎಲ್ಎನ್ಜಿ ಪೂರೈಕೆಯನ್ನು ಅನೇಕ ದೇಶಗಳಿಂದ ಪಡೆಯಲಾಗುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ