
ಜಾರ್ಖಂಡ್‌ನಲ್ಲಿ 9 ತಿಂಗಳಿನಿಂದ ನಾಪತ್ತೆಯಾಗಿದ್ದ ಯುವತಿಯ ಪ್ರಕರಣವನ್ನು ಹೈಕೋರ್ಟ್ ಎಚ್ಚರಿಸಿದ 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಪ್ರಿಯಕರನಿಂದಲೇ ಹತ್ಯೆಯಾಗಿದ್ದ ಯುವತಿಯ ಅಸ್ಥಿಪಂಜರ ಪತ್ತೆಯಾಗಿದೆ.
ರಾಂಚಿ (ಏ.13): ನಾಪತ್ತೆಯಾಗಿದ್ದ ಯುವತಿಯ ಪ್ರಕರಣವನ್ನು ಭೇದಿಸುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಪಿಂಡ್ರಾಜೋರಾ ಪೊಲೀಸ್ ಠಾಣೆಯ ಒಟ್ಟು 28 ಪೊಲೀಸ್ ಸಿಬ್ಬಂದಿಯನ್ನು ಸಾಮೂಹಿಕವಾಗಿ ಅಮಾನತುಗೊಳಿಸಲಾಗಿದೆ. 9 ತಿಂಗಳಿನಿಂದ ಹುಡುಕಲಾಗದ ಪ್ರಕರಣವನ್ನು ಹೈಕೋರ್ಟ್ ಎಚ್ಚರಿಕೆ ನೀಡಿದ ಕೇವಲ 24 ಗಂಟೆಯೊಳಗೆ ಪೊಲೀಸರು ಭೇದಿಸಿದ್ದಾರೆ. 20025ರ ಜುಲೈ 24ರಂದು ರೇಖಾ ದೇವಿ ಎಂಬುವವರು ತಮ್ಮ 18 ವರ್ಷದ ಮಗಳು ಪುಷ್ಪಾ ಮಹತೋ ನಾಪತ್ತೆಯಾಗಿದ್ದಾಳೆ ಎಂದು ಪಿಂಡ್ರಾಜೋರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಒಂಬತ್ತು ತಿಂಗಳ ಕಾಲ ಯಾವುದೇ ಪ್ರಗತಿ ತೋರದೆ ಕಾಲಹರಣ ಮಾಡಿದ್ದರು. ಇದರಿಂದ ಕಂಗಾಲಾದ ಕುಟುಂಬ ನ್ಯಾಯಕ್ಕಾಗಿ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ಮಧ್ಯಪ್ರವೇಶ ಮತ್ತು ಪೊಲೀಸರ ‘ಒಂದು ದಿನದ’ ಕಾರ್ಯಾಚರಣೆ
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸರ ಉದಾಸೀನತೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಡಿಜಿಪಿಯಿಂದ ಹಿಡಿದು ಜಿಲ್ಲಾ ಎಸ್ಪಿವರೆಗೆ ಎಲ್ಲಾ ಉನ್ನತ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಹೈಕೋರ್ಟ್ ಗಡುವು ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಒಂದೇ ದಿನದಲ್ಲಿ ಯುವತಿಯ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದಲ್ಲದೆ, ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪೊಲೀಸರ ಕರಾಳ ಮುಖ ಬಯಲು ಮಾಡಿದ ಎಸ್ಪಿ
ಶನಿವಾರ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬೊಕಾರೊ ಎಸ್ಪಿ ದೈನಂದಿನ ತನಿಖೆಯಲ್ಲಾದ ಭೀಕರ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಆರೋಪಿಗಳಿಂದ ಹಣ ಪಡೆದಿದ್ದ ಪೊಲೀಸರು, ಅವರ ಜೊತೆ ಪಾರ್ಟಿ ಮಾಡಿದ್ದರು. ಸಂತ್ರಸ್ತೆಯ ಪರವಾಗಿ ಕೆಲಸ ಮಾಡುವ ಬದಲು, ಪೊಲೀಸರು ಆರೋಪಿಗೆ ಅನುಕೂಲ ಮಾಡಿಕೊಡಲು ಯತ್ನಿಸಿದ್ದರು. ತನಿಖೆಯ ವಿವರಗಳನ್ನು ಸೋರಿಕೆ ಮಾಡುವ ಮೂಲಕ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಇಡೀ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಹತ್ಯೆಯ ಹಿಂದಿನ ಭೀಕರ ರಹಸ್ಯ
ವಿಶೇಷ ತನಿಖಾ ತಂಡ (SIT) ತಾಂತ್ರಿಕ ದಾಖಲೆಗಳು ಮತ್ತು ಮೊಬೈಲ್ ಕರೆಗಳ (CDR) ಆಧಾರದ ಮೇಲೆ ದಿನೇಶ್ ಕುಮಾರ್ ಮಹತೋ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಯಿತು. ಕಳೆದ 3 ವರ್ಷಗಳಿಂದ ಪುಷ್ಪಾ ಮತ್ತು ದಿನೇಶ್ ಪ್ರೀತಿಸುತ್ತಿದ್ದರು. ಪುಷ್ಪಾ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರಿಂದ ಅವಳನ್ನು ತೊಲಗಿಸಲು ದಿನೇಶ್ ಸಂಚು ರೂಪಿಸಿದ್ದ.
2025ರ ಜುಲೈ 21ರಂದು ಪುಷ್ಪಾ ಕಾಲೇಜು ಪ್ರವೇಶಕ್ಕಾಗಿ ಚಾಸ್ ಕಾಲೇಜಿಗೆ ಹೋಗಿದ್ದಳು. ಅಲ್ಲಿಗೆ ಬಂದ ದಿನೇಶ್, ಮಾತನಾಡುವ ನೆಪದಲ್ಲಿ ಅವಳನ್ನು ಕಾಲೇಜಿನ ಹಿಂಭಾಗದ 1.5 ಕಿ.ಮೀ ದೂರದ ಪೊದೆಗಳಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಸಾಯಿಸಿದ್ದ. ನಂತರ ಶವವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.
ಈಗ 9 ತಿಂಗಳ ನಂತರ ಆಕೆಯ ದೇಹ ಸಂಪೂರ್ಣವಾಗಿ ಕೊಳೆತು ಕೇವಲ ಅಸ್ಥಿಪಂಜರವಷ್ಟೇ ಸಿಕ್ಕಿದೆ. ಹೈಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಈ ಪ್ರಕರಣ ಎಂದಿಗೂ ಬೆಳಕಿಗೆ ಬರುತ್ತಿರಲಿಲ್ಲ.