
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಲಿಯೋ XIV ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಏಸು ಕ್ರಿಸ್ತನಂತೆ ಬಿಂಬಿಸುವ AI-ರಚಿತ ಚಿತ್ರವನ್ನು ಹಂಚಿಕೊಂಡಿರುವ ಅವರು, ಪೋಪ್ ಅವರ ವಿದೇಶಾಂಗ ನೀತಿ ಮತ್ತು ಅಪರಾಧಗಳ ಬಗೆಗಿನ ಮೃದು ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ.
ವಾಷಿಂಗ್ಟನ್ ಡಿಸಿ (ಏ.13): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಥೋಲಿಕ್ ಚರ್ಚ್ ಮತ್ತು ವ್ಯಾಟಿಕನ್ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಪೋಪ್ ಲಿಯೋ XIV ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ ಬೆನ್ನಲ್ಲೇ, ಟ್ರಂಪ್ ತಮ್ಮನ್ನು ತಾವು ಏಸು ಕ್ರಿಸ್ತ ಎಂದು ಬಿಂಬಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ರಚಿತ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಬೈಬಲ್‌ನಲ್ಲಿ ಉಲ್ಲೇಖವಾಗಿರುವ ಯೇಸು ಕ್ರಿಸ್ತನು ‘ಲಾಜರಸ್’ ಎಂಬ ವ್ಯಕ್ತಿಯನ್ನು ಸಾವಿನಿಂದ ಎಬ್ಬಿಸಿದ ಪವಾಡದ ದೃಶ್ಯವನ್ನು ಈ ಚಿತ್ರವು ಹೋಲುತ್ತದೆ. ಉದ್ದನೆಯ ಗೌನ್ ಧರಿಸಿರುವ ಟ್ರಂಪ್, ಅಸ್ವಸ್ಥನೊಬ್ಬನ ಮೇಲೆ ಕೈ ಇಟ್ಟು ಪವಾಡ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು ಮತ್ತು ದೇವದೂತರಂತಹ ಆಕೃತಿಗಳನ್ನು ಸೇರಿಸಲಾಗಿದ್ದು, ಇದನ್ನು ರಾಷ್ಟ್ರಭಕ್ತಿ ಮತ್ತು ದೈವತ್ವದ ಮಿಶ್ರಣವಾಗಿ ಸೃಷ್ಟಿಸಲಾಗಿದೆ.
ಪೋಪ್ ಲಿಯೋ ವಿರುದ್ಧ ಹರಿಹಾಯ್ದ ಟ್ರಂಪ್
ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಟ್ರಂಪ್, ಪೋಪ್ ಲಿಯೋ ವಿರುದ್ಧ ಹರಿಹಾಯ್ದಿದ್ದಾರೆ. “ನಾನು ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗದಿದ್ದರೆ, ಪೋಪ್ ಫ್ರಾನ್ಸಿಸ್ ನಂತರ ಲಿಯೋ ಪೋಪ್ ಹುದ್ದೆಗೆ ಏರುತ್ತಲೇ ಇರಲಿಲ್ಲ. ಇವರು ಯಾರಿಗೂ ಗೊತ್ತಿಲ್ಲದ ವ್ಯಕ್ತಿಯಾಗಿದ್ದರು, ಕೇವಲ ನನ್ನನ್ನು ನಿಭಾಯಿಸಲು ಇವರು ಅಮೆರಿಕನ್ ಎಂಬ ಕಾರಣಕ್ಕೆ ಚರ್ಚ್ ಇವರನ್ನು ಆಯ್ಕೆ ಮಾಡಿತು” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಪೋಪ್ ಲಿಯೋ ಅಪರಾಧಗಳ ವಿಷಯದಲ್ಲಿ ಮೃದು ಧೋರಣೆ ಹೊಂದಿದ್ದಾರೆ ಮತ್ತು ವಿದೇಶಾಂಗ ನೀತಿಯಲ್ಲಿ ಭಯಾನಕವಾಗಿದ್ದಾರೆ ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ಮತ್ತು ವೆನೆಜುವೆಲಾ ಮೇಲೆ ಅಮೆರಿಕದ ದಾಳಿಯನ್ನು ಪೋಪ್ ವಿರೋಧಿಸುತ್ತಿರುವುದಕ್ಕೆ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲಿಯೋ ಅವರು ಎಡಪಂಥೀಯರ ಜೊತೆ ಸೇರಿ ರಾಜಕಾರಣ ಮಾಡುತ್ತಿದ್ದಾರೆ. ಅವರು ಒಬ್ಬ ಧರ್ಮಗುರುವಿನಂತೆ ಇರಬೇಕೇ ಹೊರತು ರಾಜಕಾರಣಿಯಂತೆ ಅಲ್ಲ. ಇವರ ವರ್ತನೆ ಚರ್ಚಿಗೆ ಹಾನಿ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
ಸಂಘರ್ಷದ ಮೂಲವೇನು?
ಇತ್ತೀಚೆಗೆ ಪೋಪ್ ಲಿಯೋ XIV ಅವರು ಇರಾನ್ ಸೇರಿದಂತೆ ಜಾಗತಿಕ ಸಂಘರ್ಷಗಳ ವಿಷಯದಲ್ಲಿ ವಾಷಿಂಗ್ಟನ್‌ನ ಆಕ್ರಮಣಕಾರಿ ಧೋರಣೆಯನ್ನು ಟೀಕಿಸಿದ್ದರು. ಶಾಂತಿ ಮತ್ತು ಮಾತುಕತೆಗೆ ಕರೆ ನೀಡಿದ್ದರು. ಇದು ಟ್ರಂಪ್ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಆಂಡ್ರೀಸ್ ಬೇಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನನಗೆ ಪೋಪ್ ಲಿಯೋ ಇಷ್ಟವಿಲ್ಲ. ಅವರಿಗೆ ಅಪರಾಧಗಳೆಂದರೆ ಇಷ್ಟವಿರಬಹುದು, ಆದರೆ ನಮಗೆ ಅಪರಾಧ ಅಥವಾ ಪರಮಾಣು ಅಸ್ತ್ರಗಳನ್ನು ಒಪ್ಪುವ ಪೋಪ್ ಬೇಡ” ಎಂದು ನೇರವಾಗಿ ಹೇಳಿದ್ದಾರೆ.
ಪೋಪ್ ಲಿಯೋ XIV ಅವರು ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದಾರೆ. ಇವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಅಮೆರಿಕದ ಮಿಲಿಟರಿ ಹಸ್ತಕ್ಷೇಪ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಟ್ರಂಪ್ ಅವರ ಈ ವೈಯಕ್ತಿಕ ದಾಳಿ ಮತ್ತು ತಮ್ಮನ್ನು ಯೇಸುವಿನಂತೆ ಬಿಂಬಿಸಿಕೊಂಡಿರುವ ಚಿತ್ರವು ಅಮೆರಿಕದ ಕ್ಯಾಥೋಲಿಕ್ ಸಮುದಾಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.