PM Modi Adichunchanagiri visit ಆದಿಚುಂಚನಗಿರಿಗೆ ಇಂದು ಮೋದಿ: ಭೈರವೈಕ್ಯ ಮಂದಿರ ಲೋಕಾರ್ಪಣೆ | Pm Modi In Adichunchanagiri Today Inauguration Sri Guru Bhyravykya Mandir Special Prayer Kalabhairaveshwar Rav

PM Modi Adichunchanagiri visit ಆದಿಚುಂಚನಗಿರಿಗೆ ಇಂದು ಮೋದಿ: ಭೈರವೈಕ್ಯ ಮಂದಿರ ಲೋಕಾರ್ಪಣೆ | Pm Modi In Adichunchanagiri Today Inauguration Sri Guru Bhyravykya Mandir Special Prayer Kalabhairaveshwar Rav



PM Modi Adichunchanagiri visit ಆದಿಚುಂಚನಗಿರಿಗೆ ಇಂದು ಮೋದಿ: ಭೈರವೈಕ್ಯ ಮಂದಿರ ಲೋಕಾರ್ಪಣೆ | Pm Modi In Adichunchanagiri Today Inauguration Sri Guru Bhyravykya Mandir Special Prayer Kalabhairaveshwar Rav

ಪ್ರಧಾನಿ ನರೇಂದ್ರ ಮೋದಿಯವರು ಆದಿಚುಂಚನಗಿರಿಯಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ದ್ರಾವಿಡ-ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾದ ಈ ಭವ್ಯ ಮಂದಿರದ ಉದ್ಘಾಟನಾ ಕಾರ್ಯಕ್ರಮ ಮತ್ತು ಅದರ ನಿರ್ಮಾಣದ ವಿಶೇಷತೆಗಳನ್ನು ಈ ಲೇಖನ ವಿವರಿಸುತ್ತದೆ.

ನಾಗಮಂಗಲ (ಮಂಡ್ಯ) (ಏ.15) ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಗೆ ಸಕಲ ರೀತಿಯಲ್ಲೂ ಶ್ರೀಕ್ಷೇತ್ರ ಸಜ್ಜಾಗಿದೆ. ಬುಧವಾರ ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ರೀಕ್ಷೇತ್ರದ ಡಾ। ಬಾಲಗಂಗಾಧರನಾಥ ಶ್ರೀಗಳ ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಆಗಲಿದೆ.

1500 ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿರುವ ನಾಥ ಪರಂಪರೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆಗಿರುವ ಆದಿಚುಂಚನಗಿರಿ ಮಠಕ್ಕೆ ದೇಶದ ಪ್ರಧಾನಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ನಮೋ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಶ್ರೀಮಠ ಹಾಗೂ ಜಿಲ್ಲಾಡಳಿತ ಸಜ್ಜಾಗಿ ನಿಂತಿದೆ.

ಬೆಳಗ್ಗೆ 11ಕ್ಕೆ ಶ್ರೀಕ್ಷೇತ್ರಕ್ಕೆ ಮೋದಿ:

ಬುಧವಾರ ಬೆಳಗ್ಗೆ 7.15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ಸೇನಾ ಹೆಲಿಕಾಪ್ಟರ್‌ನಲ್ಲಿ ಬರಲಿರುವ ಪ್ರಧಾನಿ ಮೋದಿ ಅವರು 10.55ಕ್ಕೆ ಆದಿಚುಂಚನಗಿರಿ ಕ್ಷೇತ್ರದ ತಪೋವನದ ಆವರಣದಲ್ಲಿನ ಹೆಲಿಪ್ಯಾಡ್‌ಗೆ ಬಂದಿಳಿಯುವರು. ನಂತರ 1.5 ಕಿ.ಮೀ. ದೂರದವರೆಗೆ ವಿಶೇಷ ರಕ್ಷಣಾ ತಂಡದ (ಎಸ್‌ಪಿಜಿ) ಬಿಗಿ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬಂದು ಶ್ರೀಕ್ಷೇತ್ರದ ಕಾಲಭೈರವೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು 11.30ಕ್ಕೆ ಉದ್ಘಾಟಿಸಲಿದ್ದಾರೆ.

ಮಂದಿರ ಉದ್ಘಾಟನೆ ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಪಾದುಕೆಗೆ ನಮಸ್ಕರಿಸಿ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರ ಹಾಗೂ ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ ನಂತರ ಕ್ಷೇತ್ರದ ಅಧಿದೇವತೆ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಳ್ಳುವರು. ಬಳಿಕ ಶ್ರೀಕ್ಷೇತ್ರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಜೊತೆ ಸಿದ್ಧತೆ ಪರಿಶೀಲನೆ ನಡೆಸಿದರು.

ಮಂದಿರದ ವಿಶೇಷತೆ

ಡಾ। ಬಾಲಗಂಗಾಧರನಾಥ ಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಒಡಿಶಾದ ಸೂರ್ಯದೇಗುಲದ ಮಾದರಿ ನಿರ್ಮಿಸಲಾಗಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವಾಗಿದೆ. ಶ್ರೀಕ್ಷೇತ್ರದಲ್ಲಿ ಭೈರವೈಕ್ಯ ಶ್ರೀಗಳ ಆತ್ಮಜ್ಯೋತಿ ಸದಾ ಕಾಲ ಬೆಳಗುವಂತೆ ₹80 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ.

2013ರ ಜ.13ರಂದು ಚುಂಚಶ್ರೀಗಳು ಭೌತಿಕ ದೇಹ ತ್ಯಜಿಸಿದ್ದರು. ಅಂತ್ಯ ಸಂಸ್ಕಾರವನ್ನು ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಉತ್ತರ ಭಾಗದಲ್ಲಿ ಅದಾಗಲೇ ನಿರ್ಮಿತವಾಗಿದ್ದ ಮಂಗಳ ಮಂಟಪದಲ್ಲಿ ನೆರವೇರಿಸಲಾಗಿತ್ತು. 2016ರ ಮೇ 9ರಂದು ಶ್ರೀ ಗುರು ಭೈರವೈಕ್ಯ ಮಂದಿರದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಸುಮಾರು 250ಕ್ಕೂ ಹೆಚ್ಚು ಮಂದಿ ನುರಿತ ಶಿಲ್ಪಿಗಳು 10 ವರ್ಷ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಎರಡು ಅಂತಸ್ತುಳ್ಳ ಗುರುಭೈರವೈಕ್ಯ ಮಂದಿರವನ್ನು ಸಂಪೂರ್ಣವಾಗಿ ಕೆಂಪು ಗ್ರಾನೈಟ್ ಶಿಲೆ, ವಿವಿಧ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾಗಿದೆ.

ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣ ಶರೀರದ ಮಾದರಿಯಲ್ಲಿ ಮಂದಿರ ನಿರ್ಮಾಣವಾಗಿದೆ. ಗುರುಮಂದಿರವು ಉತ್ತರ ದಕ್ಷಿಣಕ್ಕೆ 175 ಚದರ ಅಡಿ, ಪೂರ್ವ ಪಶ್ಚಿಮಕ್ಕೆ 150 ಚದರ ಅಡಿ ಇದ್ದು 26,250 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಮಂದಿರದ ನೆಲಮಹಡಿಯಲ್ಲಿ ಭೈರವೈಕ್ಯಶ್ರೀಗಳ ಸನ್ನಿಧಿ, ಮಂದಿರದ ಒಳಭಾಗ ಚಿನ್ನ ಮತ್ತು ಬೆಳ್ಳಿಯ ಕವಚದ ಹೊದಿಕೆಯನ್ನು ಹೊಂದಿದೆ. ಶ್ರೀಸನ್ನಿಧಿಯ ಸುತ್ತಲೂ ಪ್ರದಕ್ಷಿಣಾ ಸ್ಥಳವಿದೆ. ನೆಲಮಹಡಿಯ ಮೇಲಿನ ಅಂತಸ್ತು ಡಾ। ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರವಿದೆ. 26 ಕಂಬಗಳಿರುವ ಮಂದಿರ ದ್ರಾವಿಡ ಮತ್ತು ಹೊಯ್ಸಳ ಶೈಲಿಯ ಶಿಲ್ಪಕಲೆ ಹೊಂದಿದೆ.



Source link

Leave a Reply

Your email address will not be published. Required fields are marked *