
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್‌ಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ. ಈ ದಾಳಿಗೆ ತಮ್ಮ ನೆಲವನ್ನು ಬಳಸಲು ಅನುಮತಿ ನೀಡಿದ 5 ಅರಬ್ ರಾಷ್ಟ್ರಗಳಿಂದ ಪರಿಹಾರ ನೀಡಬೇಕೆಂದು ವಿಶ್ವಸಂಸ್ಥೆಗೆ ಪತ್ರ ಬರೆದು ಒತ್ತಾಯಿಸಿದೆ.
ಟೆಹ್ರಾನ್ (ಏ.15): ಫೆ.28ರಿಂದ ಅಮೆರಿಕ ಮತ್ತು ಇಸ್ರೇಲ್ , ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯಿಂದ ಇದುವರೆಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಇರಾನ್ ಸರ್ಕಾರದ ವಕ್ತಾರ ಫಾತಿಮೆಹ್ ಮೊಹಜೆರಾನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಉಭಯ ದೇಶಗಳು ನಮ್ಮ ಕೈಗಾರಿಕೆಗಳು, ಸೇನಾ ನೆಲೆಗಳು, ಮೂಲಸೌಕರ್ಯಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಆದರೆ ಅದರೆ ಅಂತಿಮ ಅಂಕಿ ಅಂಶಗಳಲ್ಲ. ಪೂರ್ಣ ಅಧ್ಯಯನದ ಬಳಿಕ ಈ ಮೊತ್ತ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಪರಿಹಾರ ಕೋರಿಕೆ:
ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಆರಂಭಿಸಿದ ಯುದ್ಧದಲ್ಲಿ ನೆರವಾಗಿದ್ದಕ್ಕೆ 5 ಅರಬ್ ರಾಷ್ಟ್ರಗಳಿಂದ ಪರಿಹಾರಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಗೆ ಇರಾನ್ ಪತ್ರ ಬರೆದಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫೇರ್ಸ್ ಅಲ್ರೋವೈ ಅವರಿಗೆ ಬರೆದ ಪತ್ರದಲ್ಲಿ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವನಿ, ‘ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಲು 5 ದೇಶಗಳು ತಮ್ಮ ನೆಲವನ್ನು ಒದಗಿಸಿವೆ. ಹೀಗಾಗಿ ಇರಾನ್‌ಗೆ ಆಗಿರುವ ಆಸ್ತಿ ಮತ್ತು ನೈತಿಕ ನಷ್ಟವನ್ನು ಬಹರೈನ್, ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಜೋರ್ಡಾನ್ ದೇಶಗಳು ತುಂಬಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.