
ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್ 18ರಿಂದ ಪ್ರಾರಂಭಗೊಂಡು ಏಪ್ರಿಲ್ 30ಕ್ಕೆ ಪೂರ್ಣಗೊಳ್ಳಲಿದೆ.
‘ಕಾಂತಾರ’ ಚಿತ್ರದ ಅತ್ಯಂತ ಜನಪ್ರಿಯ ‘ವರಾಹ ರೂಪಂ ದೈವ ವರಿಷ್ಟಂ’ ಹಾಡು ಬರೆದಿದ್ದ ಶಶಿರಾಜ್ ಕಾವೂರು ಅವರು ಇದೀಗ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ವಾದಿರಾಜ ವಾಲಗ ಮಂಡಳಿ’ (ವಿವಿಎಂ) ಎಂಬ ಹೆಸರಿನ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾವನ್ನು ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನಿರ್ಮಿಸುತ್ತಿದ್ದಾರೆ.
ಅಪ್ಪಟ ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್ 18ರಿಂದ ಪ್ರಾರಂಭಗೊಂಡು ಏಪ್ರಿಲ್ 30ಕ್ಕೆ ಪೂರ್ಣಗೊಳ್ಳಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ಮೇ-ಜೂನ್‌ನಲ್ಲಿ ನಡೆಯಲಿದ್ದು ಆಗಸ್ಟ್ ತಿಂಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
‘ಚಿತ್ರದ ಕಥೆಯ ಒಂದು ಎಳೆಯನ್ನು ಕೇಳಿಯೇ ಕಥೆಯನ್ನು ಓಕೆ ಅಂದಿರುವ ನಿರ್ಮಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಚಿತ್ರದ ಶೂಟಿಂಗ್‌ಗೆ ಎಲ್ಲೂ ಅಡೆತಡೆಯಾಗದಂತೆ ನಿರ್ಮಾಣದ ವಿಷಯದಲ್ಲಿ ಎಲ್ಲೂ ರಾಜಿಯಾಗದಂತೆ ನೋಡಿಕೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಸಹ ನಿರ್ಮಾಪಕರಾಗಿ ಜಯಪ್ರಕಾಶ್ ತುಂಬೆ ಇದ್ದಾರೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಿರಾಜ್ ರಾವ್ ಕಾವೂರು.
ಪ್ರಮುಖ ಪಾತ್ರದಲ್ಲಿ ನವೀನ್ ಡಿ. ಪಡೀಲ್
ಕರಾವಳಿಯ ಆಯ್ದ ಕಲಾವಿದರ ಸಮ್ಮಿಲನ ಈ ಚಿತ್ರದಲ್ಲಿದೆ. ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮ ದಾಸ್, ಪುಷ್ಪರಾಜ್ ಬೊಳ್ಳೂರು ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಹಾಗೂ ವೇನ್ಯ ರೈ ಮತ್ತು ತನ್ವಿ ರಾವ್ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಕುಟುಂಬ ಸಮೇತ ನೋಡುವ ಸಿನಿಮಾ ಕರ್ನಾಟಕದ ಜನತೆಗೆ ವಿಭಿನ್ನವಾದ, ಸಂಪೂರ್ಣ ಮನರಂಜನೆ ಹಾಗೂ ಸದಭಿರುಚಿಯ ಚಿತ್ರ ನೀಡಬೇಕೆಂಬುದು ನನ್ನ ಹಲವು ವರ್ಷಗಳ ಕನಸು. ಅದು ವಾದಿರಾಜ ವಾಲಗ ಮಂಡಳಿಯ ಮೂಲಕ ನನಸಾಗುತ್ತಿದೆ. ಈ ಸಿನಿಮಾ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿನಿಮಾಗೆ ಬೇಕಾದ ಅತ್ಯುತ್ತಮ ತಂತ್ರಜ್ಞರನ್ನು ಕರೆಸಿದ್ದೇವೆ. ಚಿತ್ರದ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಅನುಮಾನವಿಲ್ಲ. ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದ್ದು ಕುಟುಂಬ ಸಮೇತ ಕುಳಿತು ನೋಡಿ ಸವಿಯಬಹುದಾದ ಒಳ್ಳೆಯ ಸಿನಿಮಾ ಇದಾಗಲಿದೆ.
– ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಿರ್ಮಾಪಕರು