ನಟ ಮತ್ತು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಸಂಸ್ಥಾಪಕ ವಿಜಯ್ (ತಲಪತಿ ವಿಜಯ್) ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಜನ ನಾಯಕನ್’ ಬಿಡುಗಡೆಗೆ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಈ ಕುರಿತು ದೂರು ದಾಖಲಾಗಿದ್ದು, ತಮಿಳುನಾಡು ಸೈಬರ್ ಕ್ರೈಂ ಅರ್ಜಿ ಸಲ್ಲಿಸಲಾಗಿದೆ. ತಾತ್ಕಾಲಿಕ ನೌಕರನೊಬ್ಬನಿಂದಾಗಿ ‘ಜನ ನಾಯಕನ್’ ಸಿನಿಮಾ ಸೋರಿಕೆಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬುಧವಾರ (ಏಪ್ರಿಲ್ 15) ಈ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ.
ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರಿನ ಚಿತ್ರದ ಬಗ್ಗೆ ತನಿಖೆ ಆರಂಭಿಸಿದ್ದರು. ಏಪ್ರಿಲ್ 9 ರಂದು ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಮತ್ತು ನಂತರ ಪೂರ್ಣ ಎಚ್ಡಿ (ಎಚ್ಡಿ) ಆವೃತ್ತಿಯು ಪೈರಸಿ ಸೈಟ್ಗಳಲ್ಲಿ ಕಾಣಿಸಿಕೊಂಡಿತು. ಇದು ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಎಡಿಟಿಂಗ್ ಸ್ಟುಡಿಯೋದಿಂದ ಸಿನಿಮಾ ಲೀಕ್ ಆಗಿದ್ದು, ಸ್ಟುಡಿಯೋದಲ್ಲಿ ಬೇರೆ ಸಿನಿಮಾಕ್ಕೆ ಕೆಲಸ ಮಾಡಲು ಬಂದಿದ್ದ ತಾತ್ಕಾಲಿಕ ನೌಕರನೊಬ್ಬ ‘ಜನ ನಾಯಕ’ ಸಿನಿಮಾವನ್ನು ಅಲ್ಲಿನ ಕಂಪ್ಯೂಟರ್ ಗಳಿಂದ ಡೌನ್ ಲೋಡ್ ಮಾಡಿಕೊಂಡು ಆ ಬಳಿಕ ಬಿಡುಗಡೆ ಮಾಡಿದ್ದಾನೆ. ಇದೀಗ ಆತನನ್ನೂ ಒಳಗೊಂಡ ಆತನಿಗೆ ಸಹಕಾರ ನೀಡಿದ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಈವರೆಗೆ 300ಕ್ಕೂ ಹೆಚ್ಚು ಪೈರಸಿ ಲಿಂಕ್ಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ. ಕ್ಲೌಡ್ ಸ್ಟೋರೇಜ್ ಮತ್ತು ಡ್ರೈವ್ ಲಿಂಕ್ ಮೂಲಕ ಚಿತ್ರವನ್ನು ಹಂಚುತ್ತಿದ್ದವರನ್ನು ಪತ್ತೆಹಚ್ಚಲು ಡಿಜಿಟಲ್ ವಿಧಿವಿಜ್ಞಾನದ ನೆರವು ಪಡೆಯಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಆಶಾ ಭೋಸ್ಲೆಗೆ ಸುಮಲತಾ-ವಿಜಯ್ ಪ್ರಕಾಶ್ ವಿಶೇಷ ಗೌರವ
‘ಜನ ನಾಯಕನ್’ ಸಿನಿಮಾ ಜನವರಿ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸೆನ್ಸಾರ್ ಪ್ರಮಾಣಪತ್ರವನ್ನು ವಿಳಂಬ ಮಾಡಿತು. ಚಿತ್ರದಲ್ಲಿನ ಕೆಲವು ರಾಜಕೀಯ ಮತ್ತು ಧಾರ್ಮಿಕ ಅಂಶಗಳು ಸಮಾಜದಲ್ಲಿ ಅಶಾಂತಿ ಮೂಡಿಸಬಹುದು ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಈ ವಿಷಯವನ್ನು ರಿವೈಸಿಂಗ್ ಕಮಿಟಿಗೆ ವರ್ಗಾಯಿಸಿತು. ಆದರೆ ಈ ವರೆಗೆ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಿಲ್ಲ.
ವಿಜಯ್ ಅವರ ರಾಜಕೀಯ ಪ್ರವೇಶದ ಜೊತೆಗೆ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ವಿಳಂಬದ ಹಿಂದೆ ರಾಜಕೀಯ ಹಸ್ತಕ್ಷೇಪವಿದೆ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಅನೇಕ ನಟರು ಪೈರಸಿ ಮತ್ತು ಸೆನ್ಸಾರ್ ವಿಳಂಬವನ್ನು ಖಂಡಿಸಿದ್ದಾರೆ. ಸಿಬಿಎಫ್ ಸಿಯಿಂದಲೇ ಸಿನಿಮಾ ಲೀಕ್ ಆಗಿದೆ ಎಂದು ಆರೋಪಿಸಿದ್ದರು. ಆದರೆ ತನಿಖೆಯಿಂದ ಇದೀಗ ಸಿಬಿಎಫ್ ಸಿಯಿಂದ ಲೀಕ್ ಆಗಿಲ್ಲ ಎಂಬುದು ಪತ್ತೆಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ