
ಆನೆ ಕದ್ದರೂ ಕಳ್ಳ, ಇರುವೆ ಕದ್ದರೂ ಕಳ್ಳ ಎಂದು ನಾವು ಆಡುಮಾತಿನಲ್ಲಿ ಹೇಳುತ್ತೇವೆ. ಆದರೆ, ಇಲ್ಲೊಬ್ಬ ಚೀನಾದ ವ್ಯಕ್ತಿ 2,200 ಜೀವಂತ ಇರುವೆಗಳನ್ನು ಕದ್ದುಕೊಂಡು ಹೋಗಲು ಪ್ರಯತ್ನಿಸಿ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ. ಆತನಿಗೆ ಪ್ರತಿ ಇರುವೆಗೆ ₹290 ರಂತೆ 6.40 ಲಕ್ಷ ರೂ. ದಂಡ ಹಾಕಲಾಗಿದೆ.
ಕಳ್ಳಸಾಗಣೆದಾರರು ಆನೆ ದಂತ, ಚಿನ್ನ ಅಥವಾ ಅಮೂಲ್ಯ ರತ್ನಗಳನ್ನು ಸಾಗಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಜೀವಂತ ಇರುವೆಗಳನ್ನು ಲಗೇಜ್ನಲ್ಲಿ ಬಚ್ಚಿಟ್ಟು ಸಾಗಿಸಲು ಹೋಗಿ ಕೀನ್ಯಾ ಪೊಲೀಸರ ಅತಿಥಿಯಾಗಿದ್ದಾನೆ. ಬರೋಬ್ಬರಿ 2,200ಕ್ಕೂ ಅಧಿಕ ಗಾರ್ಡನ್ ಇರುವೆಗಳನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಚೀನಾ ಪ್ರಜೆಗೆ ಕೀನ್ಯಾ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
ವಿಮಾನ ನಿಲ್ದಾಣದಲ್ಲಿ ಬಯಲಾದ ಕಳ್ಳಸಾಗಣೆ:
ಕಳೆದ ತಿಂಗಳು ಕೀನ್ಯಾದ ನೈರೋಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಲಗೇಜ್ ತಪಾಸಣೆ ನಡೆಸುತ್ತಿದ್ದಾಗ ಝಾಂಗ್ ಕೆಕುನ್ ಎಂಬ ಚೀನೀ ಪ್ರಜೆಯ ಬ್ಯಾಗ್ನಲ್ಲಿ ಅನುಮಾನಾಸ್ಪದ ಡಬ್ಬಿಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ಸಣ್ಣ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಬರೋಬ್ಬರಿ 2,200 ಜೀವಂತ ಗಾರ್ಡನ್ ಇರುವೆಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ:
ಈ ಪ್ರಕರಣದ ವಿಚಾರಣೆ ನಡೆಸಿದ ಕೀನ್ಯಾ ನ್ಯಾಯಾಲಯವು ಆರೋಪಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 7,746 ಡಾಲರ್ (ಅಂದಾಜು ₹6.4 ಲಕ್ಷ) ದಂಡ ವಿಧಿಸಿ ಆದೇಶಿಸಿದೆ. ಮೊದಲು ತಾನು ನಿರಪರಾಧಿ ಎಂದು ವಾದಿಸಿದ್ದ ಝಾಂಗ್ ಕೆಕುನ್, ನಂತರ ಸಾಕ್ಷ್ಯಗಳು ಸಿಕ್ಕ ಮೇಲೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಇರುವೆಗಳನ್ನು ಪೂರೈಸಿದ್ದ ಕೀನ್ಯಾದ ಪ್ರಜೆಯೊಬ್ಬನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಚೀನಾದಲ್ಲಿ ಇರುವೆಗಳಿಗೆ ಏಕೆ ಅಷ್ಟು ಡಿಮ್ಯಾಂಡ್?
ಚೀನಾದಲ್ಲಿ ಗಾರ್ಡನ್ ಇರುವೆಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು ಈಗ ದೊಡ್ಡ ಹವ್ಯಾಸವಾಗಿ ಬೆಳೆದಿದೆ. ಅಲ್ಲಿ ‘ಫಾರ್ಮಿಕೇರಿಯಂ’ (Formicarium) ಎಂಬ ಗಾಜಿನ ಪಾತ್ರೆಗಳಲ್ಲಿ ಇರುವೆಗಳ ಕಾಲನಿಯನ್ನು ಸಾಕುವ ಹವ್ಯಾಸ ಹಲವರಿಗಿದೆ. ಈ ಇರುವೆಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇದೆ. ಇದೇ ಕಾರಣಕ್ಕೆ ಕಳ್ಳಸಾಗಣೆದಾರರು ಈಗ ಕೀನ್ಯಾದಂತಹ ದೇಶಗಳಿಂದ ಇರುವೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.
ಆನೆ ದಂತ ಬಿಟ್ಟು ಇರುವೆಗಳತ್ತ ಸಾಗಿದ ಕಳ್ಳರು!
ಹಿಂದೆ ಕೀನ್ಯಾದಿಂದ ಆನೆ ದಂತ, ಚಿರತೆ ಚರ್ಮದಂತಹ ವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿತ್ತು. ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಣ್ಗಾವಲು ಹೆಚ್ಚಾಗಿರುವುದರಿಂದ ಕಳ್ಳಸಾಗಣೆದಾರರು ಇರುವೆ, ಜೇಡ ಮತ್ತು ಸಣ್ಣಪುಟ್ಟ ಕೀಟಗಳ ಮೇಲೆ ಕಣ್ಣು ಹಾಕಿದ್ದಾರೆ. ಇವುಗಳನ್ನು ಪತ್ತೆ ಮಾಡುವುದು ಕಷ್ಟ ಎಂಬುದು ಅವರ ಆಲೋಚನೆ. ಆದರೆ, ಕೀನ್ಯಾ ನ್ಯಾಯಾಲಯವು ಈ ಪ್ರಕರಣದ ಮೂಲಕ ಅಕ್ರಮವಾಗಿ ಸಣ್ಣ ಜೀವಿಗಳನ್ನೂ ಸಾಗಿಸುವುದು ಅಪರಾಧ ಎಂಬ ಕಠಿಣ ಸಂದೇಶವನ್ನು ನೀಡಿದೆ.
ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಆದರೆ, ವನ್ಯಜೀವಿ ರಕ್ಷಣೆಯ ದೃಷ್ಟಿಯಿಂದ ಕೀನ್ಯಾ ಅಧಿಕಾರಿಗಳು ಇಂತಹ ಸಣ್ಣಪುಟ್ಟ ಜೀವಿಗಳ ಕಳ್ಳಸಾಗಣೆ ವಿರುದ್ಧವೂ ಈಗ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದಾರೆ.