
ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಇತ್ತೀಚೆಗೆ ಇಬ್ಬರು ಭಕ್ತರ ಸಾವಿನ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಬದಲಾಯಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ, ಇನ್ನು ಮುಂದೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಬೆಟ್ಟ ಹತ್ತಲು ನಿರ್ಬಂಧ ಹೇರಲಾಗಿದೆ.
ಕೊಪ್ಪಳ (ಏ.18): ತಾಪಮಾನ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟವನ್ನು ಮಧ್ಯಾಹ್ನ ಉರಿಬಿಸಿಲಿನಲ್ಲಿ ಏರುವುದರಿಂದ ಕೆಲವರ ಆರೋಗ್ಯ ಏರುಪೇರಾಗುತ್ತಿದೆ. ಹೀಗಾಗಿ, ಅಂಜನಾದ್ರಿ ಬೆಟ್ಟ ಏರಲು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ನಿರ್ಬಂಧ ಹೇರಲಾಗಿದೆ.
ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶ ಹೊರಡಿಸಿದ್ದಾರೆ.
ದೇವರ ದರ್ಶನಕ್ಕೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಇಬ್ಬರು ಭಕ್ತರು ದೇವಸ್ಥಾನದ ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಾರ್ಚ್‌ನಲ್ಲಿ ಗುಜರಾತ್ ಮೂಲದ ಭಕ್ತರೊಬ್ಬರು ಮೆಟ್ಟಿಲು ಏರುವಾಗ ಎದೆಯ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ಏ.1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದರ್ಶನ ಪಡೆದ ಬಳಿಕ ದಾವಣಗೆರೆ ಮೂಲದ ಭಕ್ತನೊಬ್ಬ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದ.
ಇಂದಿನ ತಾಪಮಾನ :.
ನಗರ ಗರಿಷ್ಠ(ಡಿಗ್ರಿ.ಸೆಂ.) ಕನಿಷ್ಠ(ಡಿಗ್ರಿ.ಸೆಂ.)
- ಕಲಬುರಗಿ 43.2 28.6
- ಬೀದರ್ 41.0 24.8
- ರಾಯಚೂರು 40.4 27.0
- ವಿಜಯಪುರ 40.0 24.0
- ಗದಗ 38.4 23.0
- ಧಾರವಾಡ 37.5 20.0
- ಬಾಗಲಕೋಟೆ 37.5 24.7
- ಮೈಸೂರು 37.0 21.2
- ಶಿವಮೊಗ್ಗ 37.0 22.8
- ದಾವಣಗೆರೆ 37.0 22.5
- Apr 18, 2026, 12:10:18 AM