65 ಲಕ್ಷದ ರೈತರ ಕೃಷಿ ಪರಿಕರ ವಿತರಣೆ ಮಾಡಿದ ಹಾಲು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ

ಪಾವಗಡ: ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಾಲ್ಲೂಕು ಉಪಕಚೇರಿ ಆವರಣದಲ್ಲಿ ರೈತರಿಗೆ ಕೃಷಿ ಪರಿಕರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಕ್ಕೂಟದ ಜಿಲ್ಲಾ ನಿರ್ದೇಶಕರು ಬೆಳ್ಳಿಬಟ್ಲು ಚಂದ್ರಶೇಖರ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಒಟ್ಟು 65 ಲಕ್ಷ ರೂ. ಮೌಲ್ಯದ ವಿವಿಧ ಉಪಕರಣಗಳನ್ನು ರೈತ ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಪೈಕಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಅನೇಕ ಸಹಾಯಧನಗಳನ್ನು ಒಳಗೊಂಡಿದ್ದು, 24 ಮಂದಿ ರೈತರಿಗೆ ರೈತ ಮರಣ ಪರಿಹಾರ, 100 ರಾಸುಗಳ ಮರಣ ಪರಿಹಾರ, 32 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ನೀಡಲಾಯಿತು. ರೈತರ ಉಪಯೋಗಕ್ಕಾಗಿ ಶೇ.50 ರಿಯಾಯಿತಿಯ ದರದಲ್ಲಿ 15 ಲಕ್ಷ ಮೌಲ್ಯದ ಹುಲ್ಲು ಕಟಾವು ಯಂತ್ರ ಮತ್ತು ಹಾಲು ಕರಿಯುವ ಯಂತ್ರಗಳನ್ನು ಒಟ್ಟು 90 ರೈತರಿಗೆ ವಿತರಣೆ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಮೂವರು ರೈತರಿಗೆ ಆರೋಗ್ಯ ವೆಚ್ಚ ಪರಿಹಾರದ ಚೆಕ್ ವಿತರಿಸಲಾಯಿತು. ಕಾರನಾಗನಹಟ್ಟಿ ಸೇರಿದಂತೆ ಹಲವು ಕಡೆಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಹುಲ್ಕು ಬಣವೆ ಹಾನಿಗೊಳಗಾದ ರೈತರಿಗೆ ಸಹಾನುಭೂತಿಯಿಂದ ಪರಿಹಾರ ಚೆಕ್‌ಗಳನ್ನು ನೀಡಲಾಯಿತು. ರೈತರು ಕೃಷಿಯಲ್ಲಿ ಮುನ್ನಡೆಸಲು, ಅವರಿಗೆ ಅಗತ್ಯ ನೆರವು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನೆರವಾಯಿತೆಂಬುದು ಸ್ಪಷ್ಟವಾಯಿತು.
ತಾಲ್ಲೂಕಿನ 12 ಬಿಎಂಸಿ‌ಗಳಿಗೆ ತಲಾ ಒಂದರಂತೆ ಹಸು ಲಿಪ್ಟಿಂಗ್ ಯಂತ್ರ, ಮ್ಯಾಟ್ ಹಾಗೂ ಜೋಳವನ್ನು 50% ರಿಯಾಯಿತಿಯಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಹಾಲು ಉತ್ಪಾದಕರ ಸಹಕಾರಕ್ಕೆ ಒಕ್ಕೂಟ ಬದ್ಧವಾಗಿದೆ. ಕಳೆದ ಜನವರಿಯಲ್ಲಿ ಪಾವಗಡದಲ್ಲಿ ಹಾಲು ಉತ್ಪಾದನೆ 33 ಸಾವಿರ ಲೀಟರ್ ಗಳಷ್ಟು ಇತ್ತು, ಇದೀಗ ಅದು 44 ಸಾವಿರ ಲೀಟರ್‌ಗೆ ಹೆಚ್ಚಳವಾಗಿದೆ. ತಾಲ್ಲೂಕಿನಲ್ಲಿ ಈವರೆಗೆ 68 ಡೈರಿಗಳು ಸ್ಥಾಪಿತವಾಗಿದ್ದು, ಹೊಸ ಡೈರಿಗಳನ್ನು ಆರಂಭಿಸುವ ಪ್ರಕ್ರಿಯೆ ಸಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದರೆ, 15 ಸಾವಿರ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯನ್ನು ನಿರ್ಮಿಸಲು ನೆರವು ದೊರಕಬಹುದು ಎಂದು ನಿರೀಕ್ಷೆಯಿದೆ. ರೈತ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲುವ ಈ ಯೋಜನೆಗಳು ಮುಂದಿನ ಐದು ವರ್ಷಗಳ ಕಾಲ ಸಹಕಾರ ಬೆಳೆಸಲಿ ಎಂಬ ಆಶಯವನ್ನು ನಿರ್ದೇಶಕರು ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ಉಪಕಚೇರಿಯ ಮುಖ್ಯಸ್ಥರು ಸುನೀತ ಅವರು ಫಲಾನುಭವಿಗಳಿಗೆ ಲಭಿಸುವ ಸವಲತ್ತುಗಳ ಕುರಿತು ವಿವರ ನೀಡಿದರು. ಈ ಸಂದರ್ಭ ಮಾಜಿ ನಿರ್ದೇಶಕರು ವೇಣುಗೋಪಾಲ್ ರೆಡ್ಡಿ, ಸೂಪರ್ ವೈಸರ್ ಗಳಾದ ನಂದೀಶ್ ,ದಯಾನಂದ್, ವರ್ಷಿಣಿ,ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *