
ಧರ್ಮಸ್ಥಳದಲ್ಲಿ ನಡೆದ ಅನನ್ಯಾ ಭಟ್ ಕಣ್ಮರೆ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಸೈಟ್ ನಂ.1 ರಲ್ಲಿ ನಡೆದ ಅಗೆತದ ವೇಳೆ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದ್ದು, ತನಿಖೆಗೆ ಹೊಸ ತಿರುವು ನೀಡಿದೆ.
ಅನನ್ಯಾ ಭಟ್ ಪ್ರಕರಣ ಎಂದರೆ?
ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್. ಇತ್ತೀಚೆಗೆ ತಾಯಿ ಸುಜಾತ ಭಟ್ 22 ವರ್ಷಗಳ ನಂತರ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದರು.
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಈಗ ಹೊಸ ಬೆಳವಣಿಗೆಯಾಗಿದೆ. 22 ವರ್ಷಗಳಿಂದ ಕಾಣೆಯಾಗಿರುವ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸೈಟ್ ನಂ.1ನಲ್ಲಿ ಅಗೆತದ ವೇಳೆ ಸುಮಾರು 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅನನ್ಯಾ ಭಟ್ ಪರ ವಕೀಲರಾದ ಮಂಜುನಾಥ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ತೆಯಾದ ವಸ್ತುಗಳ ಕುರಿತು ವಿವರ ನೀಡಿದ್ದಾರೆ. “ನಾವು ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಸೈಟ್ ನಂ.1ರಲ್ಲಿ ಶೋಧಕಾರ್ಯದ ವೇಳೆ 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆಯೊಂದರ ಜೊತೆಗೆ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
ಪತ್ತೆಯಾದ ಎಟಿಎಂ ಕಾರ್ಡ್‌ಗಳಲ್ಲಿ ಒಂದರಲ್ಲಿ ಪುರುಷನ ಹೆಸರು, ಇನ್ನೊಂದರಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ ಎಂದು ಉಲ್ಲೇಖಿಸಲಾಗಿದೆ. ಈ ವಸ್ತುಗಳು ತೀವ್ರ ಶಂಕೆ ಮೂಡಿಸಿದ್ದರಿಂದ ತನಿಖಾಧಿಕಾರಿ ಡಿಐಜಿ ಅನುಚೇತ್ ಸ್ಥಳಕ್ಕೆ ಭೇಟಿ ನೀಡಿದ್ದು, ಎಸ್ಐಟಿಯ ಕ್ರಮಗಳು ಶ್ಲಾಘನೀಯವಾಗಿವೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಎಸ್ಐಟಿಯ ವೃತ್ತಿಪರ ಕಾರ್ಯವೈಖರಿ ಮತ್ತು ಸಮಗ್ರ ಶೋಧನಾ ಕಾರ್ಯವನ್ನು ವಕೀಲ ಮಂಜುನಾಥ್ ಶ್ಲಾಘಿಸಿದ್ದು, 10 ಅಡಿಗಳ ಆಳವರೆಗೆ ಅಗೆದು ಪ್ರಾಮಾಣಿಕ ಪರಿಶೋಧನೆ ನಡೆಸಿದ ಎಸ್ಐಟಿ ತಂಡದ ನಿರ್ಧಾರವು ಯಾವುದೇ ಸಣ್ಣದಾದರೂ ಸಾಕ್ಷ್ಯವನ್ನೂ ಕಡೆಗಣಿಸದ ಎಚ್ಚರಿಕೆಯನ್ನು ತೋರಿಸಿದೆ ಎಂದರು.
ಈ ಶೋಧ ಕಾರ್ಯವು ಭವಿಷ್ಯದ ತನಿಖೆಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದ್ದು, ಎಸ್ಐಟಿಯ ಶ್ರಮ ಮತ್ತು ಗಂಭೀರತೆ ಹೊಸ ಆಶಾಭಾವನೆ ಉಂಟು ಮಾಡಿದೆ. ಉಳಿದ ಸ್ಥಳಗಳಲ್ಲಿ ನಡೆಸಲಿರುವ ಪರಿಶೀಲನೆಯು ಸಮಗ್ರ ತನಿಖೆಗೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ವಕೀಲರು ಹೇಳಿದ್ದಾರೆ.