ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup) ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಅದರಂತೆ ಶನಿವಾರ ನಡೆದ ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಮಣಿಸಿದ ಕೆನಡಾ (Canada) ತಂಡ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಕೆನಡಾ, 20 ತಂಡಗಳ ನಡುವೆ ನಡೆಯಲ್ಲಿರುವ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 13 ನೇ ತಂಡ ಎನಿಸಿಕೊಂಡಿದೆ.
ಈ 13 ತಂಡಗಳು ಅರ್ಹತೆ ಪಡೆದಿವೆ
ಕೆನಡಾವನ್ನು ಹೊರತುಪಡಿಸಿ, ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಯುಎಸ್ಎ, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಕೂಡ ಈ 20 ತಂಡಗಳ ಟೂರ್ನಮೆಂಟ್‌ನಲ್ಲಿ ಆಡಲಿವೆ. ಇದೀಗ 13 ತಂಡಗಳು ಈ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ ಏಳು ತಂಡಗಳಲ್ಲಿ ಎರಡು ಯುರೋಪಿಯನ್ ಕ್ವಾಲಿಫೈಯರ್‌ನಿಂದ (ಜುಲೈ 5 ರಿಂದ 11 ರವರೆಗೆ), ಎರಡು ಆಫ್ರಿಕನ್ ಕ್ವಾಲಿಫೈಯರ್‌ನಿಂದ (ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ) ಮತ್ತು ಮೂರು ಏಷ್ಯಾ ಇಎಪಿ ಕ್ವಾಲಿಫೈಯರ್‌ನಿಂದ (ಅಕ್ಟೋಬರ್ 1 ರಿಂದ 17 ರವರೆಗೆ) ಆಯ್ಕೆಯಾಗಲಿವೆ
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಹಾಮಾಸ್ ತಂಡವು 57 ರನ್‌ಗಳಿಗೆ ಆಲೌಟ್ ಆಯಿತು. ಬಹಾಮಾಸ್ ತಂಡದ ಇಬ್ಬರು ಆಟಗಾರರು ಮಾತ್ರ 10 ರನ್‌ಗಳ ಗಡಿ ದಾಟಿದರು. ಜೊನಾಥನ್ ಬೆರ್ರಿ 10 ರನ್ ಗಳಿಸಿದರೆ, ಜ್ಯುವೆಲ್ ಗ್ಯಾಲಿಮೋರ್ 14* ರನ್‌ಗಳ ಕೊಡುಗೆ ನೀಡಿದರು. ಕೆನಡಾ ಪರ, ಅತ್ಯುತ್ತಮ ವೇಗದ ಬೌಲರ್ ಕಲೀಮ್ ಸನಾ ನಾಲ್ಕು ಓವರ್‌ಗಳಲ್ಲಿ ಆರು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ 2 ಮೇಡನ್ ಓವರ್‌ಗಳನ್ನು ಸಹ ಎಸೆದರು. ಉಳಿದಂತೆ ಅಂಶ್ ಪಟೇಲ್ ನಾಲ್ಕು ಓವರ್‌ಗಳಲ್ಲಿ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರೆ, ಶಿವಂ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆದರು.
T20 World Cup 2025: ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ನಯಾ ಪೈಸಾ ಬಹುಮಾನ ನೀಡದ ಐಸಿಸಿ
ಇದಕ್ಕೆ ಉತ್ತರವಾಗಿ, ಕೆನಡಾ ತಂಡವು 6 ಓವರ್‌ಗಳಲ್ಲಿ 61 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ದಿಲ್‌ಪ್ರೀತ್ ಬಾಜ್ವಾ ತಂಡದ ಪರ 36* ರನ್‌ಗಳ ಇನ್ನಿಂಗ್ಸ್ ಆಡಿದರೆ, ಹರ್ಷ್ ಥಾಕರ್ 14 ರನ್ ಗಳಿಸಿದರು. ಓಪನರ್ ಯುವರಾಜ್ ಸಮ್ರಾ 5 ರನ್ ಗಳಿಸಿದರೆ, ನಾಯಕ ನಿಕೋಲಸ್ ಕರ್ಟನ್ ಕೇವಲ ಎರಡು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬಹಾಮಾಸ್ ಪರ, ಕೆವೆರಾನ್ ಹಿಂಡ್ಸ್ ಮೂರು ಓವರ್‌ಗಳಲ್ಲಿ 33 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಕೆನಡಾ ಎರಡನೇ ಬಾರಿಗೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಇದಕ್ಕೂ ಮೊದಲು ತಂಡವು 2024 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಆಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ