Elumale Movie: ಕರ್ನಾಟಕ, ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆ ಹೇಳಲು ರೆಡಿಯಾದ ತರುಣ್‌ ಸುಧೀರ್, ರಾಣಾ! | Tharun Sudhir Raana Priyanka Elu Male Kannada Movie Second Song Release

Elumale Movie: ಕರ್ನಾಟಕ, ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆ ಹೇಳಲು ರೆಡಿಯಾದ ತರುಣ್‌ ಸುಧೀರ್, ರಾಣಾ! | Tharun Sudhir Raana Priyanka Elu Male Kannada Movie Second Song Release



Elumale Movie: ಕರ್ನಾಟಕ, ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆ ಹೇಳಲು ರೆಡಿಯಾದ ತರುಣ್‌ ಸುಧೀರ್, ರಾಣಾ! | Tharun Sudhir Raana Priyanka Elu Male Kannada Movie Second Song Release

Actor Raana And Priyanka Movie: ನಿರ್ದೇಶನ ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ಹಿಟ್‌ ಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಅವರು ʼಏಳುಮಲೆʼ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಟ ರಾಣಾ, ಪ್ರಿಯಾಂಕಾ ಅವರು ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.  

ಕಂಟೆಂಟ್ ಮೂಲಕ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ಸದ್ದು ಮಾಡುತ್ತಿದೆ. ಈಗಾಗಲೇ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರೋ ಈ ಚಿತ್ರದಿಂದ ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ.

ʼಏಳುಮಲೆʼ ಸಿನಿಮಾದ ʼಕಾಪಾಡೋ ದ್ಯಾವ್ರೇʼ ಎಂಬ ಗೀತೆ ರಿಲೀಸ್‌ ಆಗಿದೆ. ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ತಾರಾ ಅನುರಾಧ ಅವರು ಈ ಹಾಡನ್ನು ರಿಲೀಸ್‌ ಮಾಡಿದರು. ಈ ಸಂದರ್ಭದಲ್ಲಿ ನಿರ್ಮಾಪಕ ತರುಣ್ ಸುಧೀರ್, ನಿರ್ದೇಶಕ ಪುನೀತ್ ರಂಗಸ್ವಾಮಿ, ನಾಯಕ ರಾಣಾ, ನಾಯಕಿ ಪ್ರಿಯಾಂಕಾ, ಸಂಗೀತ ನಿರ್ದೇಶಕ ಡಿ‌ ಇಮ್ಮಾನ್, ಗಾಯಕಿ‌ ಮಂಗ್ಲಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಟಿ ತಾರಾ ಏನಂದ್ರು?

ತಾರಾ ಮಾತನಾಡಿ, “ಈ ಹಾಡು ನೋಡಿ ತುಂಬ ಖುಷಿಯಾಯ್ತು. ಇಲ್ಲಿ ಪ್ರೇಮಿಗಳು ಬಹಳ ಕಷ್ಟಪಡುವುದು ತೋರಿಸುತ್ತಾರೆ. ಇದು ಸಣ್ಣದಾಗಿ ದುಃಖ ಆಯ್ತು. ಇದು ಸತ್ಯಕಥೆ ಅಂದಾಗ ಅದನ್ನು ಹಾಗೇಯೇ ತೋರಿಸಬೇಕು. ರಾಣಾ, ಪ್ರಿಯಾಂಕಾ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ತರುಣ್ ಸುಧೀರ್ ಏನ್ ಮಾಡಿದ್ರೂ ಫಸ್ಟ್ ಕ್ಲಾಸ್ ಆಗಿದೆ ಅನ್ನೋದು ಸಾಬೀತಾಗಿದೆ. ಹಾಡು ಚೆನ್ನಾಗಿದೆ. ಸಿನಿಮಾ ಹಿಟ್ ಆಗಲಿ” ಎಂದು ಹಾರೈಸಿದರು.

ನಟಿ ಶ್ರುತಿ ಏನು ಹೇಳಿದರು?

ಶ್ರುತಿ ಮಾತನಾಡಿ, “ಏಳುಮಲೆ ಸಿನಿಮಾ ನೋಡಿ ಪ್ರೇಕ್ಷಕರು ಹೊರಗೆ ಬಂದಾಗ ರಾಣಾ ಸಖತ್ ಆಗಿ ಆಕ್ಟ್ ಮಾಡಿದ್ದಾರೆ ಎಂದು ಹೇಳ್ತಾರೆ. ಒಬ್ಬ ಕಲಾವಿದನಾಗಿ ಹೆಸರು ಮಾಡುವ ಅವಕಾಶ ಈ ಸಿನಿಮಾದಲ್ಲಿ ರಾಣಾಗೆ ಸಿಕ್ಕಿದೆ. ಪ್ರಿಯಾಂಕಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇದು ನನ್ನ ಕುಟುಂಬದ ಸಿನಿಮಾ. ನಾವು ಬೆಂಗಳೂರಿಗೆ ಬರಲು ಕಾರಣ ಸುಧೀರ್ ಸರ್. ಹೊಸಬರಿಗೆ ಯಾರು ಅವಕಾಶ ಕೊಡ್ತಾರೆ ಎಂಬ ಭಯ ಹೋಗಲಾಡಿಸಲು ಚಿತ್ರರಂಗದಲ್ಲಿ ತರುಣ್ ತರಹದ ಡೈರೆಕ್ಟರ್ ಇದ್ದಾರೆ. ಹೊಸಬರಿಗೆ ಅವಕಾಶ ಕೊಡುವುದು ಚಿಕ್ಕ ವಿಷಯವಲ್ಲ. ಅದನ್ನು ತರುಣ್ ಮಾಡುತ್ತಿದ್ದಾನೆ. ಇಡೀ ತಂಡಕ್ಕೆ ಒಳ್ಳೆದಾಗಲಿ” ಎಂದರು.

ನಟಿ ಸುಧಾರಾಣಿ ಏನಂದ್ರು?

ನಟಿ ಸುಧಾರಾಣಿ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಮತ್ತೆ ಅದೇ ಹೊಳಪು, ಮೆರಗು ಏಳುಮಲೆ ಸಿನಿಮಾದ ಟೀಸರ್ ಹಾಡು ನೋಡಿದಾಗ ಸಿಗುತ್ತಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ. ಇಡೀ ತಂಡದ ಡೆಡಿಕೇಷನ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಕಲಾ ಸರಸ್ವತಿ ಎಲ್ಲರನ್ನೂ ಕೈಬೀಸಿ ಕರೆಯಲ್ಲ. ಕರೆದಾಗ ಅದನ್ನು ಭಕ್ತಿ, ‌ನಿಷ್ಠೆಯಿಂದ ಮುಂದುವರೆಸಬೇಕು. ಆ ಅವಕಾಶ ರಾಣಾ, ಪ್ರಿಯಾಂಕಾಗೆ ಸಿಕ್ಕಿದೆ. ಇದನ್ನು ನೀವು ಸದುಪಯೋಗಪಡಿಸಿಕೊಂಡಿದ್ದಾರೆ. ತರುಣ್ ಅವರು ತಂದೆ ಹೆಸರನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಟನೆ, ನಿರ್ದೇಶನ ಎರಡರಲ್ಲಿಯೂ ಹೆಸರು ಮಾಡಿದ್ದಾರೆ. ಈಗ ನಿರ್ಮಾಪಕರಾಗಿ ಒಳ್ಳೊಳ್ಳೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಪಾಡೋ ದ್ಯಾವ್ರೇ ಹಾಡು ಮೂರು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಮೆಲೋಡಿ ಗೀತೆಗೆ ಮಂಗ್ಲಿ ಧ್ವನಿಯಾಗಿದ್ದು, ಡಿ ಇಮ್ಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರೀತಿಗಾಗಿ ಪರಿತಪ್ಪಿಸುವ ಪ್ರೇಮಿಗಳ‌ ನಡುವಿನ ಮಧುರ ಗೀತೆ ಇದಾಗಿದ್ದು, ರಾಣಾ ಹಾಗೂ ಪ್ರಿಯಾಂಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಕಥೆ ಏನು?

ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ `ಏಳುಮಲೆ’ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡುಗ ಹರೀಶ್ ಆಗಿ ನಟಿಸುತ್ತಿದ್ದಾರೆ. ಮಹಾನಟಿ ಶೋ ಖ್ಯಾತಿ ಮೈಸೂರಿನ ಹುಡುಗಿ ಪ್ರಿಯಾಂಕಾ ಅವರು ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ.

ಸಹ ನಿರ್ದೇಶಕರಾಗಿ, ಗೀತ ಸಾಹಿತಿಯಾಗಿ `ಕಾಟೇರ’, `ಗುರುಶಿಷ್ಯರು’ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿರುವ ಪುನೀತ್ ರಂಗಸ್ವಾಮಿ ಈಗ `ಏಳುಮಲೆ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಶೂಟಿಂಗ್‌ ಮಾಡಲಾಗಿದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮನ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.

 



Source link

Leave a Reply

Your email address will not be published. Required fields are marked *