ಕಾಲು ಮುರಿದ ಮಾಣಿಕಿ ಆನೆಯನ್ನು 36 ಕಿ.ಮೀ. ದೂರ ನಡೆಸಿಕೊಂಡು ಹೋದಂತಹ ಆಘಾತಕಾರಿ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗ್ತಿದ್ದಂತೆ ಆನೆ ಮಾಲೀಕನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ನಾಳೆ ವಿಶ್ವ ಆನೆಗಳ ದಿನ. ಆದರೆ ಇಲ್ಲೊಂದು ಕಡೆ ಆನೆಯನ್ನು ಬಹಳ ಅಮಾನುಷವಾಗಿ ನಡೆಸಿಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೊಂದು ಸಾಕಾನೆ ಆಗಿದ್ದು, ಕಾಲಿಗೆ ಸಂಕೋಲೆ ಹಾಕಲಾಗಿದೆ. 48 ವರ್ಷದ ಮಣಿಕಿ ಹೆಸರಿನ ಈ ಆನೆಯ ತುದಿಗಾಲು ಉಳುಕಿದಂತೆ ಕಾಣುತಿದ್ದು, ಅದು ನಡೆಯಲಾಗದೇ ಕುಂಟುತ್ತಾ ಸಾಗುತ್ತಿರುವ ವೀಡಿಯೋ ಪ್ರಾಣಿ ಪ್ರಿಯರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಕೂಡಲೇ ಅರಣ್ಯ ಇಲಾಖೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹ ಕೇಳಿ ಬಂದಿದೆ.
ಕಾಲು ಮುರಿದ ಆನೆಯನ್ನು 36 ಕಿ.ಮೀ ನಡೆಸಿದರು:
ಈ ಕಾಲು ಮುರಿದ ಆನೆಯನ್ನು ಒಂದಲ್ಲ ಎರಡಲ್ಲ, ಸುಮಾರು 36 ಕಿಲೋ ಮೀಟರ್ ದೂರದವರೆಗೆ ಒತ್ತಾಯಪೂರ್ವಕವಾಗಿ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಕಕೊಪಥರ್‌ನಿಂದ ದಿಬ್ರುಗಢಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 95 ಕಿಲೋ ಮೀಟರ್ ದೂರ ನಡೆಸಿದ್ದಾರೆ. ಗಾಯಾಳು ಆನೆಯನ್ನು ವಾಹನದಲ್ಲಿ ಟ್ರಾನ್ಸ್‌ಫೋರ್ಟ್ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ ನಂತರವೂ ಆನೆಯನ್ನು ನಡೆಸಿಕೊಂಡು ಕರೆದೊಯ್ದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆದ ವೀಡಿಯೋದಲ್ಲಿ ಮಾಣಿಕಿ ಆನೆಯ ಎಡಕಾಲಿನ ಮುಂಭಾಗ ಬಲಬಾಗಕ್ಕೆ ತಿರುಗಿದ್ದು, ಆನೆ ಕುಂಟುತ್ತಾ ಕಷ್ಟಪಟ್ಟು ಹೆಜ್ಜೆ ಹಾಕುತ್ತಿದ್ದೆ. ಹೀಗಿದ್ದರೂ ಆನೆ ಮಾವುತ ಅದರ ಬೆನ್ನಮೇಲೆ ಕುಳಿತು ಸವಾರಿ ಮಾಡುತ್ತಿದ್ದಾನೆ. ಇದರ ಜೊತೆಗೆ ಆನೆಯ ಮಾಲೀಕನಾದ ಜೋರ್ಹತ್‌ನ ರುಚಿ ಚೆಟಿಯಾ ಕೂಡ ಗಾಯಗೊಂಡ ಪ್ರಾಣಿಗಳ ಕಲ್ಯಾಣಕ್ಕಾಗಿ ಕಡ್ಡಾಯಗೊಳಿಸಿದ ಅರಣ್ಯ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾನೆ.
36 ಕಿಲೋ ಮೀಟರ್ ಕುಂಟುತ್ತಾ ಸಾಗಿದ ಮಾಣಿಕಿ:
ಮಾವುತ ಪ್ರದೀಪ್ ಮೋರನ್ ಹೇಳುವ ಪ್ರಕಾರ, ಆನೆ ಮಾಕುಮ್ ತಲುಪುವ ಆರು ದಿನಗಳ ಮೊದಲು ಈ ಕಠಿಣ ಪ್ರಯಾಣ ಆರಂಭವಾಗಿದೆ. ಉದ್ದೇಶಿತ 95 ಕಿ.ಮೀ ಮಾರ್ಗದಲ್ಲಿ 36 ಕಿ.ಮೀ. ದೂರವನ್ನು ಆನೆ ಕುಂಟುತ್ತಾ ಸಾಗಿತ್ತು. ಆಗಸ್ಟ್ 6 ರಂದು ಸ್ಥಳೀಯ ನಿವಾಸಿ ಕೃಷ್ಣ ಮಾಝಿ ಎಂಬುವವರು ಮಾಕುಮ್‌ನಲ್ಲಿರುವ ತನ್ನ ನಿವಾಸದಲ್ಲಿ ಆನೆ ಹಾಗೂ ಮಾವುತರಿಗೆ ಆಶ್ರಯ ನೀಡಿದ ನಂತರ ಆ ಪ್ರಾಣಿಯ ನೋವು ಸ್ವಲ್ಪ ಕಡಿಮೆ ಆಗಿದೆ.
ಮರದ ದಿಮ್ಮಿ ಬಿದ್ದು ಮುರಿದ ಮುಂಗಾಲು
ಈ ಮಣಿಕಿ ಆನೆಯ ಕಾಲು ನೋವಿಗೆ ಕಾರಣ ಆಕೆ ಅಲ್ಲ, ಆಕೆಯನ್ನು ನಡೆಸಿಕೊಂಡ ಮನುಷ್ಯರು. ಎರಡು ವರ್ಷಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಭಾರವಾದ ಮರದ ದಿಮ್ಮಿಯೊಂದು ಆಕೆಯ ಎಡ ಮುಂಗಾಲಿನ ಮೇಲೆ ಬಿದ್ದ ನಂತರ ಮಣಿಕಿಗೆ ಈ ಕಾಲುನೋವಿನ ಸಂಕಷ್ಟ ಶುರುವಾಗಿದೆ. ಆ ಸಮಯದಲ್ಲಿ ಚಿಕಿತ್ಸೆ ನೀಡಿದರೂ, ಮಣಿಕಿಯ ಮುರಿದ ಕಾಲು ಮತ್ತೆ ಸರಿಯಾಗಿರಲಿಲ್ಲ, ಇದರಿಂದಾಗಿ ಆನೆ ಶಾಶ್ವತವಾಗಿ ಅಂಗ ಊನ ಅನುಭವಿಸುವಂತಾಗಿದೆ. ಜೊತೆಗೆ ಅದರ ಕಾಲಿನಲ್ಲಿ ಇನ್ನೂ ನೋವು ಇದ್ದು, ಕುಂಟುತ್ತಾ ಸಾಗುತ್ತಿದೆ.
ಮೇಘಾಲಯದ ಘಟನೆಯ ನಂತರ ಮಣಿಕಿಯನ್ನು ಕಾಕೋಪಥರ್‌ಗೆ ತರಲಾಯಿತು ಆದರೆ ಅಲ್ಲಿ ಅದರ ಸ್ಥಿತಿ ಮತ್ತಷ್ಟು ಹದಗೆಟ್ಟಿತು, ಅದಕ್ಕೆ ಬೇಕಾದ ವಿಶೇಷ ವೈದ್ಯಕೀಯ ಆರೈಕೆಯನ್ನು ಮಾಡಲಿಲ್ಲ. ಆದರೆ ಈಗ ಆನೆ ಕುಂಟುತ್ತಾ ಸಾಗುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯಕೀಯ ತಜ್ಞರು ಮತ್ತು ಪರಿಸರ ಕಾರ್ಯಕರ್ತರನ್ನು ಒಳಗೊಂಡ ಜಂಟಿ ತಂಡವು ಮಾಣಿಕಿ ವಿಶ್ರಾಂತಿ ಪಡೆಯುತ್ತಿದ್ದ ಕೃಷ್ಣ ಮಾಝಿ ಅವರ ನಿವಾಸವನ್ನು ತಲುಪಿತ್ತು. ನಂತರ ವೈದ್ಯಕೀಯ ತಂಡವು ತಕ್ಷಣವೇ ಔಷಧಿಗಳನ್ನು ನೀಡಿ ಆನೆಯ ಸ್ಥಿತಿಯನ್ನು ನಿರ್ಣಯಿಸಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಾ ಅಧಿಕಾರಿಗಳು:
ಮೌಲ್ಯಮಾಪನದ ನಂತರ, ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತವು ಮಾಣಿಕಿಗೆ ಮೂರು ದಿನಗಳ ವಿಶ್ರಾಂತಿಯನ್ನು ಆದೇಶಿಸಿದೆ. ಮಾಲೀಕರು ಆನೆಯ ಚಿಕಿತ್ಸಾ ಸೌಲಭ್ಯಕ್ಕೆ ಟ್ರಕ್ ಮೂಲಕ ಸಾಗಿಸಲು ವ್ಯವಸ್ಥೆ ಮಾಡಬೇಕೆಂದು ಮತ್ತು ಮಾರ್ಗಮಧ್ಯೆ ಸರಿಯಾದ ವೈದ್ಯಕೀಯ ಆರೈಕೆಯನ್ನು ಒದಗಿಸಬೇಕೆಂದು ಅವರು ಆದೇಶಿಸಿದ್ದಾರೆ. ಅಲ್ಲದೇ ದಿಬ್ರುಗಢ ಬದಲಿಗೆ ಆನೆಯನ್ನು ಈಗ ಉನ್ನತ ಚಿಕಿತ್ಸೆಗಾಗಿ ಕಾಜಿರಂಗ ಅಥವಾ ಗುವಾಹಟಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಪ್ರಾಣಿ ಕಲ್ಯಾಣ ನಿಯಮಗಳು ಮತ್ತು ವನ್ಯಜೀವಿ ಸಂರಕ್ಷಣಾ ಮಾರ್ಗಸೂಚಿಗಳ ಉಲ್ಲಂಘನೆ ಆಗುತ್ತಿರುವ ಬಗ್ಗೆ ಕಳವಳ ಉಂಟು ಮಾಡಿದ್ದು, ಆನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.