ರಕ್ಷಾಬಂಧನದಂದು ಖಾನ್ ಸರ್‌ಗೆ 15,000ಕ್ಕೂ ಹೆಚ್ಚು ರಕ್ಷೆಗಳು ಬಂದಿವೆ. ವಿದ್ಯಾರ್ಥಿಗಳ ಪ್ರೀತಿಗೆ ಭಾವುಕರಾದ ಅವರು, ಈ ಪ್ರೀತಿ ಕುಟುಂಬವನ್ನು ಮೀರಿದೆ ಎಂದರು.
ಪಾಟ್ನಾ: ಕಳೆದ ಶನಿವಾರ ಅಂದರೆ ಆಗಸ್ಟ್ 6ರಂದು ಅಣ್ಣ ತಂಗಿಯರ ಪ್ರೀತಿಯ ಸಂಕೇತವಾದ ರಕ್ಷಾಬಂಧನ ಹಬ್ಬ ಅಥವಾ ರಾಖಿ ಹಬ್ಬ ಕಳೆದುಹೋಯ್ತು, ದೇಶದೆಲ್ಲೆಡೆ ಕೋಟ್ಯಾಂತರ ಹೆಣ್ಣು ಮಕ್ಕಳು ತಮ್ಮ ಸೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದರು. ಅನೇಕರು ತಮ್ಮ ದೂರ ದೂರದಲ್ಲಿರುವ ಸೋದರ ಸೋದರಿಯರಿಗೆ ರಾಖಿ ಕಳುಹಿಸಿ ಸಂಭ್ರಮಿಸಿದರು. ರಾಖಿ ಕಟ್ಟುವ ಸೋದರ ಒಡಹುಟ್ಟಿದವನೇ ಆಗಬೇಕಾಗಿಲ್ಲ, ಜೊತೆಗೆ ಹುಟ್ಟದೇ ಹೋದರೂ ಅಣ್ಣನಂತೆ ಹೆಗಲು ಕೊಟ್ಟು ನಿಂತ ಅನೇಕ ಸೋದರರಿಗೆ ಸೋದರಿಯರಿ ರಾಖಿ ಕಟ್ಟಿದರು. ಅದೇ ರೀತಿ ಪ್ರಖ್ಯಾತ ಆನ್‌ಲೈನ್ ಬೋಧಕರಾಗಿರುವ ದೇಶದೆಲ್ಲೆಡೆ ಖಾನ್ ಸರ್ ಎಂದೇ ಖ್ಯಾತಿ ಪಡೆದಿರುವ ಪಾಟ್ನಾ ಮೂಲದ ಖಾನ್ ಸರ್‌ಗೆ ಈ ಬಾರಿ ರಕ್ಷೆಯ ಸುರಿಮಳೆಯೇ ಹರಿದು ಬಂದಿದ್ದು, 15 ಸಾವಿರಕ್ಕೂ ಹೆಚ್ಚು ರಕ್ಷೆಗಳು ಬಂದಿದ್ದಾಗಿ ಅವರು ಇನ್ಸ್ಟಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪ್ರೀತಿಗೆ ಭಾವುಕರಾದ ಖಾನ್ ಸರ್
ವೀಡಿಯೋದಲ್ಲಿ ಅವರು ತಮ್ಮ ಕೈಗೆ ವಿದ್ಯಾರ್ಥಿಗಳು ಕಟ್ಟಿದ ರಾಖಿಯ ರಾಶಿಯನ್ನು ತೋರಿಸಿದ್ದು ಕೈ ತುಂಬಾ ತಮ್ಮ ವಿದ್ಯಾರ್ಥಿಗಳು ಕಟ್ಟಿದ ರಾಖಿಯಿಂದ ಅವರ ಕೈ ತುಂಬಿ ಹೋಗಿದೆ. ತನ್ನ ಪ್ರತಿ ವಿದ್ಯಾರ್ಥಿಯನ್ನು ಸಹೋದರಿಯಾಗಿ ಪರಿಗಣಿಸುವುದಾಗಿ ಹೇಳಿದ ಖಾನ್ ಸರ್ ವಿದ್ಯಾರ್ಥಿನಿಯರು ತೋರಿಸಿದ ಪ್ರೀತಿಗೆ ಭಾವುಕರಾಗಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿ ಕುಟುಂಬವನ್ನು ಮೀರಿದ ಮಾರ್ಗದರ್ಶನ ಮತ್ತು ಸೌಹಾರ್ದತೆಯ ನಿಜವಾದ ಸಾರವನ್ನು ಸೆರೆಹಿಡಿದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ವೀಡಿಯೋದಲ್ಲಿ ಅವರು ಖುಷಿ ಹಂಚಿಕೊಂಡಿದ್ದು ಹೀಗೆ ಹೇಳಿದ್ದಾರೆ. ಇಂದು, ನನ್ನ ಮಣಿಕಟ್ಟಿಗೆ ಕಟ್ಟಲಾದ ರಾಖಿಗಳ ಸಂಖ್ಯೆ 15,000 ಕ್ಕೂ ಹೆಚ್ಚು. ಈ ರಾಖಿಗಳು ತುಂಬಾ ಭಾರವಾಗಿದ್ದು, ನಾನು ನನ್ನ ಕೈ ಎತ್ತಲು ಸಹ ಸಾಧ್ಯವಾಗುತ್ತಿಲ್ಲ. ಇಸ್ ಕಲಿಯುಗ್ ಮೇ ಹಮ್ ಇತ್ನೇ ಸೌಭಾಗ್ಯಶಾಲಿ ಹೈ (ಇಂದಿನ ದಿನ ಮತ್ತು ಯುಗದಲ್ಲಿ ಅಂತಹ ಅನುಭವವನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿ). ನಾನು ಹೇಗೆ ಎದ್ದೇಳಲಿ? ಇದು ತುಂಬಾ ಭಾರವಾಗಿದೆ ಎಂದು ಅವರು ಹಿಂದಿಯಲ್ಲಿ ಹೇಳಿದ್ದಾರೆ. ಈ ವೀಡಿಯೋವನ್ನು ಕೆಲವೇ ನಿಮಿಷಗಳಲ್ಲಿ 8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಜಾತಿ ಧರ್ಮಗಳ ಬೇಧವಿಲ್ಲದೇ ತಮ್ಮ ಶೈಕ್ಷಣಿಕ ಪ್ರಯಾಣದ ಮೂಲಕ ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಶಿಕ್ಷಕ ಮತ್ತು ಸಹೋದರ ವ್ಯಕ್ತಿಯಾಗಿ ತಮ್ಮನ್ನು ಗೌರವಿಸಿದ್ದಕ್ಕಾಗಿ ಖಾನ್ ಸರ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಹುಡುಗಿಯರು ಜಾತಿ, ಧರ್ಮ, ರಾಜ್ಯ ಮತ್ತು ಇತರ ವ್ಯತ್ಯಾಸಗಳನ್ನು ಬದಿಗಿಟ್ಟು ನನ್ನ ಮಣಿಕಟ್ಟಿನ ಮೇಲೆ ರಾಖಿಗಳನ್ನು ಕಟ್ಟುತ್ತಾರೆ. ಇದು ಮಾನವೀಯತೆಯ ನಿಜವಾದ ಪ್ರತಿಬಿಂಬ. ಇದಕ್ಕಿಂತ ದೊಡ್ಡ ಹಬ್ಬ (ರಕ್ಷಾ ಬಂಧನ) ಇನ್ನೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಖಾನ್ ಎಂದೇ ಪ್ರಸಿದ್ಧಿ ಪಡೆದಿರುವ ಈ ಆನ್‌ಲೈನ್ ಶಿಕ್ಷಕನ ಹೆಸರು ಫೈಜಲ್ ಖಾನ್, ಮೂಲತಃ ಬಿಹಾರದವರಾದ ಇವರು ಯೂಟ್ಯೂಬ್ ಚಾನೆಲ್ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಲಕ್ಷಾಂತರ ಜನ ವಿದ್ಯಾರ್ಥಿಗಳನ್ನು ತಲುಪುತ್ತಿದ್ದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆನ್‌ಲೈನ್ ಗುರು ಎನಿಸಿದ್ದಾರೆ. ಬಿಹಾರದ ಡಿಯೋರಿಯಾದಲ್ಲಿ 1993ರಲ್ಲಿ ಜನಿಸಿರುವ ಖಾನ್ ಸರ್ ಮಗಧ ಹಾಗೂ ಅಲಾಹಾಬಾದ್ ವಿವಿಯಲ್ಲಿ ಶಿಕ್ಷಣ ಪಡೆದಿದ್ದು, ಖಾನ್ ಜಿಎಸ್ ರಿಸರ್ಚ್ ಸೆಂಟರ್, ಖಾನ್ ಗ್ಲೋಬಲ್ ಸ್ಟಡೀಸ್ ಎಂಬ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸಿಕೊಡುತ್ತಿದ್ದಾರೆ. 26.8 ಮಿಲಿಯನ್ ಸಬ್ ಸ್ಕ್ರೈಬರ್‌ಗಳನ್ನು ಇವರು ಹೊಂದಿದ್ದಾರೆ.