
ಡಾ. ವಿಷ್ಣುವರ್ಧನ್ ಸಮಾಧಿ ತೆರವು ವಿಚಾರದಲ್ಲಿ ಅನಿರುದ್ಧ್ ಅವರು ಅಭಿಮಾನಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸದೆ ಹೋಗಲು ಯತ್ನಿಸಿದಾಗ ಗದ್ದಲ ಉಂಟಾಯಿತು. ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ಕುಟುಂಬದ ಮೇಲಿನ ಆರೋಪಗಳನ್ನು ಅನಿರುದ್ಧ್ ಖಂಡಿಸಿದರು.
ಬೆಂಗಳೂರು: ಕನ್ನಡ ಚಲನಚಿತ್ರರಂಗದ ಅಪ್ರತಿಮ ನಟ, “ಸಾಹಸ ಸಿಂಹ” ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಸಮಾಧಿಯನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಷ್ಣು ಕುಟುಂಬದ ಪರವಾಗಿ ನಟ ಅನಿರುದ್ಧ್ ಅವರು ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಅಭಿಮಾನಿಗಳ ಪ್ರಶ್ನೆ ವೇಳೆ ಗದ್ದಲ ನಡೆದ ಘಟನೆಯೂ ನಡೆಯಿತು. ಈ ಸಭೆಯಲ್ಲಿ ಅಭಿಮಾನಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅನಿರುದ್ಧ್ ಅವರು, ಸಮಾಧಿ ವಿಚಾರದಲ್ಲಿ ಕುಟುಂಬದ ಮೇಲೆ ಹಲವಾರು ಅಪವಾದಗಳು, ಆರೋಪಗಳು ಕೇಳಿಬರುತ್ತಿವೆ. ಎಲ್ಲವನ್ನೂ ಶಾಂತಿಯುತವಾಗಿ ಚರ್ಚಿಸಲು ನಾನು ಈ ಸಭೆಗೆ ಕರೆದಿದ್ದೇನೆ. ಪ್ರತಿಭಟನೆ ಮಾಡುವಂತ ಪರಿಸ್ಥಿತಿ ಇಲ್ಲ, ಏಕೆಂದರೆ ಕೋರ್ಟ್ ಆದೇಶವಿದೆ. ಆದ್ದರಿಂದ ಎಲ್ಲರೂ ಶಾಂತವಾಗಿರೋಣ” ಎಂದು ಮನವಿ ಮಾಡಿದರು.
ಅಭಿಮಾನಿಗಳ ಪ್ರಶ್ನೆಯಿಂದ ಗದ್ದಲ
ಸಭೆಯ ಕೊನೆಯಲ್ಲಿ ಅಭಿಮಾನಿಗಳಿಂದ ಗದ್ದಲ ಎದ್ದಿತು. ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಲು ನೀವು ಏನು ಮಾಡಿದ್ದೀರಿ?” ಎಂಬ ಅಭಿಮಾನಿಯ ಪ್ರಶ್ನೆಗೆ ಅನಿರುದ್ಧ್ ತಕ್ಷಣ ಉತ್ತರಿಸದೆ ಮನೆಯೊಳಗೆ ಹೋಗಲು ಮುಂದಾದರು. ಇದರಿಂದ ಅಸಮಾಧಾನಗೊಂಡ ಅಭಿಮಾನಿಗಳು “ಪ್ರಶ್ನೆಗಳಿಗೆ ಉತ್ತರಿಸದೆ ಹೇಗೆ ಹೋಗ್ತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ವೇದಿಕೆಗೆ ಮರಳಿದ ಅನಿರುದ್ಧ್ ಅವರು ಅಭಿಮಾನಿಗಳಿಗೆ ಶಾಂತಗೊಳಿಸುವ ಪ್ರಯತ್ನ ಮಾಡಿದರೂ, ಕೆಲವರು ವಿಷ್ಣುವರ್ಧನ್ ಜೊತೆ ಯಶ್ ಮಾತ್ರ ನಿಂತಿದ್ದಾರೆ ಎಂದು ಹೇಳಿದಾಗ ಮತ್ತಷ್ಟು ಗದ್ದಲ ಸೃಷ್ಟಿಯಾಯಿತು.
ಅಭಿಮಾನಿಗಳ ಪ್ರತಿಭಟನೆ
ವಿಷ್ಣವರ್ಧನ್ ಸಮಾಧಿ ಸಂಬಂಧ ಅಭಿಮಾನಿಗಳ ಜೊತೆ ಸಭೆಯಲ್ಲಿ ಹೈಡ್ರಾಮ ನಡೆಯಿತು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸದೆ ಮನೆಯೊಳಗೆ ಹೋಗಲು ತೆರಳಲು ಅನಿರುದ್ಧ್ ಮುಂದಾದರು. ಈ ವೇಳೆ ಅಭಿಮಾನಿಗಳಿಂದ ಗದ್ದಲ ಆರಂಭವಾಯ್ತು. ಪ್ರಶ್ನೆಗಳಿಗೆ ಉತ್ತರಿಸದೆ ಹೇಗೆ ಹೋಗ್ತೀರಿ ಅಂತ ಪ್ರಶ್ನೆ ಎತ್ತಿದರು. ಬಳಿಕ ಅನಿರುದ್ಧ್ ವೇದಿಕೆಗೆ ಮರಳಿದರು. ಅಭಿಮಾನಿಗಳು ಮಾತನಾಡಬೇಕಾದರೆ ಎಡವಟ್ಟಾಗಿದೆ. ವಿಷ್ಣುವರ್ಧನ್ ಜೊತೆ ಯಶ್ ಮಾತ್ರ ನಿಂತಿದ್ದು ಎಂದು ಅಭಿಮಾನಿಯೊಬ್ಬರು ಹೇಳಿದಾಗ ಅಲ್ಲಿಂದ ಗದ್ದಲ ಶುರುವಾಯ್ತು. ಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳಲು ನೀವು ಏನು ಮಾಡಿದ್ದೀರಿ ಎಂದು ಅಭಿಮಾನಿ ಅನಿರುದ್ಧ್ ಗೆ ಕೇಳಿದರು. ವಿಷ್ಣುವರ್ಧನ್ ಸಮಾಧಿ ಮಾಡೋದಾದ್ರೆ ಯಾರು ಬೇಕಾದರೂ ಮಾಡಿ. ನಮ್ಮ ಅಭ್ಯಂತರ ಇಲ್ಲ, ಆದ್ರೆ ನಾವು ಸಪೋರ್ಟ್ ಮಾಡಲ್ಲ. ಸಮಾಧಿ ಒಂದೇ ಸ್ಥಳದಲ್ಲಿ ಇರಬೇಕು ಎಂದು ಅನಿರುದ್ಧ್ ಹೇಳಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದರು. ಮಳೆಯ ನಡುವೆಯೇ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ವಿಷ್ಣುವರ್ಧನ್ ನಿವಾಸದ ಮುಂದೆ ಪ್ರತಿಭಟನೆ ನಡೆಯಿತು.
ನಮ್ಮ ಸಿಂಹಗಳು.. ಸಿಂಹಿಣಿಯರು
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅನಿರುದ್ಧ್, “ಇಷ್ಟು ಮಂದಿ ಬಂದು ಅಪ್ಪಾವ್ರಿಗೆ ಗೌರವ ಸಲ್ಲಿಸಿರುವುದು ನನಗೆ ಸಂತೋಷ. ನೀವೆಲ್ಲಾ ನಮ್ಮ ಸಿಂಹಗಳು, ಸಿಂಹಿಣಿಯರು. ಅಭಿಮಾನ ಸ್ಟುಡಿಯೋದಲ್ಲಿ ನಡೆದ ಘಟನೆ ನಮಗೆಲ್ಲರಿಗೂ ನೋವುಂಟುಮಾಡಿದೆ. ಆದರೆ ಈ ವಿವಾದದ ಹಿಂದೆ ಅನೇಕ ಕಾರಣಗಳಿವೆ. ಅವುಗಳನ್ನು ನಿಮಗೆ ಸ್ಪಷ್ಟಪಡಿಸಬೇಕಾಗಿದೆ ಎಂದರು. ಅವರು ಅಭಿಮಾನಿಗಳಿಗೆ ಹಳೆಯ ಸಭೆಗಳ ಎರಡು ವಿಡಿಯೋಗಳನ್ನು ತೋರಿಸಲು ಮುಂದಾಗಿದ್ದರು. ಮೈಸೂರಿನಲ್ಲಿ ಸ್ಮಾರಕ ಉದ್ಘಾಟನೆಯ ಮೊದಲು ಹಾಗೂ ತಮ್ಮ ಹಳೆಯ ಮನೆಯಲ್ಲಿ ನಡೆದ ಸಭೆಯ ದೃಶ್ಯಾವಳಿಗಳನ್ನು ತೋರಿಸಿ, “ಇದು ನಾನು ಫಸ್ಟ್ ಟೈಂ ಸಭೆ ಕರೆದಿಲ್ಲ. ಇತ್ತೀಚೆಗೆ ಮಾತ್ರವಲ್ಲ, ಹಲವು ಬಾರಿ ಸಭೆ ಮಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ” ಎಂದರು.
ಸಮಾಧಿ ಇರುವ ಜಾಗದಲ್ಲಿ ಅಸ್ಥಿ ಇಲ್ಲ
ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರದ ದಿನ ನಡೆದ ಘಟನೆಗಳ ಬಗ್ಗೆ ವಿವರಿಸುತ್ತಾ ಅನಿರುದ್ಧ್ , ಹಿಂದೆ ಸಮಾಧಿ ಇದ್ದ ಜಾಗದಲ್ಲಿ ಅಸ್ಥಿ ಇರಲಿಲ್ಲ. ಅಲ್ಲಿ ಒಂದು ಚೆಂಬು ಇಟ್ಟಿದ್ದೇವೆ ಅಂತ ಹೇಳಲಾಗಿತ್ತು. ಆದರೆ ನಿಜದಲ್ಲಿ ಅಲ್ಲಿ ಏನೂ ಇರಲಿಲ್ಲ. ನನ್ನ ಅಮ್ಮ ಅವರು ಆಸ್ತಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದರು. ಕೊನೆಗೆ ಒಂದು ಚೊಂಬಲ್ಲಿ ಉಳಿಸಿಕೊಂಡು, ಉಳಿದುದನ್ನು ನದಿಗೆ ಬಿಡಲಾಯಿತು. ಇಂದಿಗೆ ಆ ಅಸ್ಥಿ ಮೈಸೂರಿನ ಸ್ಮಾರಕದಲ್ಲಿರುವ ಪುತ್ಥಳಿಯ ಕೆಳಗೆ ಇದೆ.
ಕುಟುಂಬಕ್ಕೆ ಯಾವುದೇ ಲಾಭ ಇಲ್ಲ
ಅಪವಾದಗಳನ್ನು ಖಂಡಿಸಿದ ಅನಿರುದ್ಧ್ ಅವರು, “ಅಭಿಮಾನ ಸ್ಟುಡಿಯೋ ಜಾಗ ಸರ್ಕಾರಿ ಭೂಮಿ. ನಮಗೆ ಅದರಿಂದ ಒಂದು ರೂಪಾಯಿಯೂ ಲಾಭವಾಗುವುದಿಲ್ಲ. ವ್ಯಾಪಾರೀಕರಣ ಅಂತ ಹೇಳುವವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರವೇ ಹಣ ನೀಡಿದೆ. ನಮ್ಮ ಕುಟುಂಬಕ್ಕೆ ಹತ್ತು ಲಕ್ಷ ಬರುತ್ತದೆ ಅಂತ ಕೆಲವರು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು” ಎಂದು ಸ್ಪಷ್ಟಪಡಿಸಿದರು.
ಸಮಾಧಿ ಅಭಿಮಾನ ಸ್ಟುಡಿಯೋದಲ್ಲಿ ಬೇಡ ಎಂಬ ಸಲಹೆ
ಆರಂಭದಲ್ಲಿ ನಾವು ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಪ್ಲಾನ್ ಮಾಡಿದ್ದೆವು. ಆದರೆ ಅಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅಂಬರೀಶ್ ಅಂಕಲ್ ಅವರು ವಿಷ್ಣುಸರ್ಗೆ ಹೆಚ್ಚಿನ ಗೌರವ ಸಿಗಲೆಂದು ಅಭಿಮಾನ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಲು ಸಲಹೆ ನೀಡಿದರು. ಬಳಿಕ ಗೀತಾ ಬಾಲಿ ಅವರು ಜಾಗದ ಮೇಲೆ ಕೇಸು ಹಾಕಿದ್ದರಿಂದ ಕಾನೂನು ಸಮಸ್ಯೆ ಎದುರಾಯಿತು. ಹಲವಾರು ಬಾರಿ ಸರ್ಕಾರವನ್ನು ಸಂಪರ್ಕಿಸಿದ್ದೇವೆ, ಆದರೆ ಸಮಸ್ಯೆ ಬಗೆಹರಿಯಲಿಲ್ಲ ಎಂದು ಅವರು ವಿವರಿಸಿದರು.
ಮೈಸೂರಿನಲ್ಲಿ ಸ್ಮಾರಕ ಶಾಶ್ವತ
ಅನಿರುದ್ಧ್ ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿಸಿ “ಮೈಸೂರಿನಲ್ಲಿ ನಿರ್ಮಿಸಿರುವ ಸ್ಮಾರಕವೇ ಶಾಶ್ವತ. ಅಲ್ಲಿ ಮಾತ್ರ ವಿಷ್ಣುಸರ್ ಅವರ ಅಸ್ಥಿ ಇದೆ. ಮತ್ತೊಬ್ಬರಿಗೆ ಎರಡು ಜಾಗ ಬೇಡ. ಸ್ಮಾರಕದ ಹೆಸರಲ್ಲಿ ಬೇರೆಡೆ ಸಮಾಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿ ನನಗೂ ಬಂದಿದೆ. ಆದರೆ ಅದು ಸರಿ ಅಲ್ಲ. ನಿಜವಾದ ಅಭಿಮಾನಿಗಳು ಈ ತರಹದ ಕೆಲಸ ಮಾಡುವುದಿಲ್ಲ” ಎಂದರು.
ಇನ್ಮುಂದೆ ಆರೋಪ ಬಂದರೆ ಕಾನೂನು ಕ್ರಮ
ಅಂತಿಮವಾಗಿ ಅನಿರುದ್ಧ್ ಎಚ್ಚರಿಕೆ ನೀಡಿದರು. ಇನ್ನು ಮುಂದೆ ನಮ್ಮ ಕುಟುಂಬದ ಮೇಲೆ ಯಾವುದೇ ರೀತಿಯ ಅಪವಾದ ಅಥವಾ ಆರೋಪ ಮಾಡಿದರೆ, ಅದು ಮಾಧ್ಯಮದಲ್ಲಾಗಲಿ, ಇನ್ನೆಲ್ಲಿ ಆಗಲಿ, ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವುದು ನಿಲ್ಲಿಸಬೇಕು” ಎಂದು ಸ್ಪಷ್ಟ ಸಂದೇಶ ನೀಡಿದರು. ಈ ಸಂಪೂರ್ಣ ಸಭೆಯಲ್ಲಿ ಅನಿರುದ್ಧ್ ಅಭಿಮಾನಿಗಳ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ರೂ, ಕೊನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಡಾ. ವಿಷ್ಣುವರ್ಧನ್ ಅವರ ಸಮಾಧಿ ವಿವಾದಕ್ಕೆ ಇನ್ನೂ ಶಾಶ್ವತ ಪರಿಹಾರ ಸಿಗದಿರುವುದು ಅಭಿಮಾನಿಗಳಿಗೆ ಅಸಮಾಧಾನ ಮೂಡಿಸಿದೆ.