ಬೆಂಗಳೂರು ಕಾಲ್ತುಳಿತ; ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬಿಸಿಸಿಐ

ಬೆಂಗಳೂರು ಕಾಲ್ತುಳಿತ; ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬಿಸಿಸಿಐ


ಐಪಿಎಲ್ 2025 (IPL 2025) ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಪಂಜಾಬ್ ಕಿಂಗ್ಸ್ ವಿರುದ್ಧ ಜಯಗಳಿಸಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆರ್‌ಸಿಬಿ ಟ್ರೋಫಿ ಗೆದ್ದಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇಡೀ ರಾತ್ರಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗೆದಿದ್ದರು. ಇತ್ತ ಆರ್​ಸಿಬಿ ಕೂಡ ಈ ವಿಜಯವನ್ನು ಒಟ್ಟಾಗಿ ಆಚರಿಸಲು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stampede) ವಿಜಯೋತ್ಸವ ಮೆರವಣಿಗೆಯನ್ನು ನಡೆಸುವುದಾಗಿ ಘೋಷಿಸಿತ್ತು. ಸರ್ಕಾರ ಕೂಡ ಆರ್​ಸಿಬಿ ಆಟಗಾರರಿಗೆ ವಿಧಾನಸೌಧದ ಮುಂದೆ ಸನ್ಮಾನ ಮಾಡುವುದಾಗಿ ಹೇಳಿತ್ತು. ಹೀಗಾಗಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕ್ರೀಡಾಂಗಣದ ಬಳಿಗೆ ಆಗಮಿಸಿದ್ದರು. ಆದರೆ ನಿರೀಕ್ಷೆಗೂ ಮೀರಿದ ಜನರು ಕ್ರೀಡಾಂಗಣದ ಬಳಿ ಸೇರಿದ ಕಾರಣ, ಕಾಲ್ತುಳಿತ ಸಂಭವಿಸಿ 11 ಜನರು ಪ್ರಾಣ ಕಳೆದುಕೊಂಡರು. ಇದು ಮಾತ್ರವಲ್ಲದೆ, ಅನೇಕ ಜನರು ಸಹ ಗಾಯಗೊಂಡಿದ್ದರು.

ಸಮಿತಿ ರಚಿಸಿದ್ದ ಬಿಸಿಸಿಐ

ಇಂತಹ ದುರ್ಘಟನೆಯಿಂದ ವಿಶ್ವ ಕ್ರಿಕೆಟ್​ ಮುಂದೆ ಮುಜುಗರಕ್ಕೆ ಒಳಗಾಗಿದ್ದ ಬಿಸಿಸಿಐ ಈ ಬಗ್ಗೆ ನಿಯಮಗಳನ್ನು ರೂಪಿಸುವುದಾಗಿ ಈ ಹಿಂದೆ ಹೇಳಿತ್ತು. ಅಲ್ಲದೆ ಇದಕ್ಕಾಗಿ ಮೂರು ಜನರ ಸಮಿತಿಯನ್ನು ರಚಿಸಿತ್ತು. ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾಹಿತಿ ನೀಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭವಿಷ್ಯದಲ್ಲಿ ಅಭಿನಂದನಾ ಸಮಾರಂಭವು ಸುಗಮವಾಗಿ ನಡೆಯುವಂತೆ ಮತ್ತು ಯಾರಿಗೂ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು, ಬಿಸಿಸಿಐ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿ ಕೆಲವು ನಿಯಮಗಳನ್ನು ರೂಪಿಸಲಿದ್ದು, ನಿಯಮ ಜಾರಿಗೆ ಬಂದ ಬಳಿಕ ಎಲ್ಲಾ ಐಪಿಎಲ್ ತಂಡಗಳು ಅದನ್ನು ಪಾಲಿಸಬೇಕು ಎಂದಿದ್ದರು. ಅದರಂತೆ ಇದೀಗ ಈ ಸಮಿತಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಯಾವುವು ಎಂಬುದು ಇಲ್ಲಿದೆ.

ಸೆನಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ; ಶುಭ್​ಮನ್ ಗಿಲ್

ಬಿಸಿಸಿಐ ಜಾರಿಗೊಳಿಸಿರುವ ನಿಯಮಗಳಿವು

  • ವಿಶ್ರಾಂತಿ ಅವಧಿ: ಪ್ರಶಸ್ತಿ ಗೆದ್ದ 3-4 ದಿನಗಳ ಒಳಗೆ ಯಾವುದೇ ತಂಡಕ್ಕೆ ಆಚರಣೆಗಳನ್ನು ನಡೆಸಲು ಅವಕಾಶವಿರುವುದಿಲ್ಲ.
  • ಆತುರದ ಮತ್ತು ಕಳಪೆ ನಿರ್ವಹಣೆಯ ಕಾರ್ಯಕ್ರಮಗಳನ್ನು ತಪ್ಪಿಸಲು ತ್ವರಿತ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ.
  • ಕಡ್ಡಾಯ ಬಿಸಿಸಿಐ ಅನುಮತಿ: ಯಾವುದೇ ಆಚರಣೆಯನ್ನು ಆಯೋಜಿಸುವ ಮೊದಲು ತಂಡಗಳು ಬಿಸಿಸಿಐನಿಂದ ಔಪಚಾರಿಕ ಅನುಮತಿಯನ್ನು ಪಡೆಯಬೇಕು.
  • ಮಂಡಳಿಯಿಂದ ಪೂರ್ವ ಲಿಖಿತ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ.
  • ಭದ್ರತಾ ನೀಲನಕ್ಷೆ: ಕಡ್ಡಾಯ 4 ರಿಂದ 5 ಹಂತದ ಭದ್ರತಾ ಪ್ರೋಟೋಕಾಲ್‌.
  • ಎಲ್ಲಾ ಸ್ಥಳಗಳಲ್ಲಿ ಮತ್ತು ಮೆರವಣಿಗೆ ನಡೆಯುವ ಮಾರ್ಗದಲ್ಲಿ ಬಹು-ಪದರದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು.
  • ಭದ್ರತಾ ವ್ಯವಸ್ಥೆಗಳು ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೂ ಜಾರಿಯಲ್ಲಿರಬೇಕು.
  • ಕಾರ್ಯಕ್ರಮದ ವೇಳಾಪಟ್ಟಿಯ ಉದ್ದಕ್ಕೂ ಆಟಗಾರರು ಮತ್ತು ಸಿಬ್ಬಂದಿಗೆ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು.
  • ಸರ್ಕಾರದ ಅನುಮತಿಗಳು: ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯಬೇಕು.
  • ಆಚರಣೆಗಳನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ನಡೆಸಲು, ನಾಗರಿಕರು ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಹಸಿರು ನಿಶಾನೆ ಪಡೆಯುವುದು ಮುಖ್ಯ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Sun, 22 June 25



Source link

Leave a Reply

Your email address will not be published. Required fields are marked *