
ಮಂಡ್ಯ, (ಜೂನ್ 22): ಮನೆ ಹಂಚಿಕೆಗೆ ಲಂಚ ನೀಡಬೇಕೆನ್ನುವ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ಕೊಡಿ ಅಂದ್ರೆ ಬಡವರ ಮನೆಗೆ ಕನ್ನ ಹಾಕಿದೆ . ಈ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್ ಆಗಿದೆ. ಮನಿ ಕೊಟ್ರೆ ಮನೆ ಎಂಬ ಹೊಸ ಸ್ಲೋಗನ್ ಬಿಟ್ಟಿದ್ದಾರೆ. ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿದೆ. ಬಡವರಿಗೆ ಮನೆ ನೀಡುವ ಬದಲು ಸೇಲ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.