ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್ ಮೇಲೆ ಅಮೆರಿಕ ನಡೆಸಿದ ಹಠಾತ್ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ.
ವಾಷಿಂಗ್ಟನ್: ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್ ಮೇಲೆ ಅಮೆರಿಕ ನಡೆಸಿದ ಹಠಾತ್ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ.
ಶನಿವಾರ ರಾತ್ರಿ 10.30ರ ಸುಮಾರಿಗೆ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಹತ್ತಿರದ ಪಿಜ್ಜಾ ಕೇಂದ್ರಗಳಲ್ಲಿ ಬೇಡಿಕೆ ದಿಢೀರನೆ ಏರಿಕೆಯಾಗಿತ್ತು. ಇದಾದ ಕೆಲ ಗಂಟೆಗಳ ಬಳಿಕ, ಅಮೆರಿಕ ಇರಾನ್‌ನ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಸುದ್ದಿ ಹೊರಬಂತು. ಹೀಗಾಗುತ್ತಿರುವುದು ಇದೇ ಮೊದಲಲ್ಲ. ಜೂ.13ರಂದು ಇಸ್ರೇಲ್ ಇರಾನ್ ಮೇಲೆ ಮುಗಿಬಿದ್ದಿದ್ದ ಹಿಂದಿನ ರಾತ್ರಿಯೂ ಪೆಂಟಗನ್ ಸುತ್ತ ಇರುವ ಪಿಜ್ಜಾ ಜಾಯಿಂಟ್‌ಗಳಲ್ಲಿ ಬೇಡಿಕೆ ಮುಗಿಲುಮುಟ್ಟಿತ್ತು.
ಏನಿದು ಪಿಜ್ಜಾ ಸೂಚ್ಯಂಕ?:
ಸಾಮಾನ್ಯವಾಗಿ ದಾಳಿಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಅಧಿಕಾರಿಗಳು ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಪೆಂಟಗನ್‌ನಲ್ಲೇ ಇರುವ ಕಾರಣ, ಆಗಾಗ ಪಿಜ್ಜಾ ತರಿಸಿಕೊಳ್ಳುತ್ತಿರುತ್ತಾರೆ. ಗೂಗಲ್‌ನಲ್ಲಿ ಇದರ ದಟ್ಟಣೆಯನ್ನು ಕಾಣಬಹುದಾಗಿದ್ದು, ಹಿಂದಿನ ದಾಳಿಗಳ ಉದಾಹರಣೆಗಳಿಂದ ಆಗಬಹುದಾದ ದಾಳಿಯನ್ನು ಊಹಿಸಲಾಗುತ್ತದೆ. ಈವರೆಗೆ ಒಟ್ಟ 21 ಬಾರಿ ಪಿಜ್ಜಾ ಇಂಡೆಕ್ಸ್ ಬಿಕ್ಕಟ್ಟುಗಳ ಮುನ್ಸೂಚನೆಯನ್ನು ನೀಡಿವೆ.
ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ:
ಇರಾನ್ ಈ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ವಿರುದ್ಧ ಪ್ರತೀಕಾರದ ಎಚ್ಚರಿಕೆ ನೀಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಮೆರಿಕ ಅಧ್ಯಕ್ಷರಿಗೆ ನೇರ ಸಂದೇಶವನ್ನು ಕಳುಹಿಸಿದ್ದಾರೆ. ಇರಾನ್‌ನ ರಾಜ್ಯ ದೂರದರ್ಶನ ವರದಿಯ ಪ್ರಕಾರ, ಅಮೆರಿಕದ ದಾಳಿಯ ನಂತರ ಪ್ರತಿಯೊಬ್ಬ ಅಮೇರಿಕನ್ ನಾಗರಿಕ ಮತ್ತು ಸೈನಿಕ ಇರಾನ್‌ನ ಗುರಿಯಾಗಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಇರಾನ್ ಸುದ್ದಿ ನಿರೂಪಕ ಅಮೆರಿಕಕ್ಕೆ ನೇರ ಎಚ್ಚರಿಕೆ:
ಇರಾನ್‌ನ ಸುದ್ದಿ ನಿರೂಪಕರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಆರಂಭಿಸಿರುವ ಸಂಘರ್ಷವನ್ನು ಇರಾನ್ ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಇರಾನ್ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಅಪರಾಧ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅವರಿಗೆ ಸ್ಥಾನವಿಲ್ಲ. ನೀವು, ಅಮೆರಿಕ ಅಧ್ಯಕ್ಷರು ಪ್ರಾರಂಭಿಸಿದ ಸಂಘರ್ಷವನ್ನು ನಾವು ಮುಗಿಸುತ್ತೇವೆ ಎಂದು ಇರಾನ್ ಎಂದು ಎಚ್ಚರಿಸಿದ್ದಾರೆ.
ಮಿಸ್ಟರ್ ಟ್ರಂಪ್ ಯುದ್ಧ ಇದೀಗ ಪ್ರಾರಂಭವಾಗಿದೆ!
ಮಿಸ್ಟರ್ ಟ್ರಂಪ್ ಯುದ್ಧ ಮುಗಿದಿಲ್ಲ ಇದೀಗ ಪ್ರಾರಂಭವಾಗಿದೆ ಎಂದು ಎಚ್ಚರಿಕೆ ನೀಡಿರುವ ನಿರೂಪಕ, ನೀವು ಶಾಂತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಈ ದಾಳಿಯ ಪರಿಣಾಮಗಳು ಏನಾಗಬಹುದು ಎಂಬುದನ್ನು ನಾವು ನಿಮಗೆ ಅರ್ಥ ಮಾಡಿಸಲಿದ್ದೇನೆ. ಆ ರೀತಿ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಸಹ ಹೇಳಿದ್ದಾರೆ.
ಇರಾನ್ ಒಂದರ ನಂತರ ಒಂದರಂತೆ ಎಚ್ಚರಿಕೆಗಳನ್ನು ನೀಡುತ್ತಿದ್ದರೆ, ಅಧ್ಯಕ್ಷ ಟ್ರಂಪ್ ಪ್ರತಿಕ್ರಿಯೆಯಾಗಿ, ಇರಾನ್ ಶಾಂತಿಯ ಹಾದಿಗೆ ಬರದಿದ್ದರೆ, ಅದು ಇನ್ನಷ್ಟು ತೀವ್ರ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಘಟನೆಯಿಂದ ಜಾಗತಿಕ ರಾಜಕೀಯ ವಾತಾವರಣದಲ್ಲಿ ಗಂಭೀರ ಬಿಕ್ಕಟ್ಟು ಉಂಟಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಇರಾನ್‌ನ ಪ್ರತಿಕ್ರಿಯೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಧೋರಣೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ