
ಗ್ರೇಟರ್ ಬೆಂಗಳೂರು ಆಡಳಿತ ಇಂದು ಕಾರ್ಯಾರಂಭ ಮಾಡಿದ್ದು, ಬಿಬಿಎಂಪಿ ಇತಿಹಾಸದ ಪುಟ ಸೇರಿದೆ. ಐದು ನಗರಪಾಲಿಕೆಗಳಾಗಿ ವಿಭಜನೆಗೊಂಡ ಬೆಂಗಳೂರಿನ ಆಡಳಿತದಲ್ಲಿ ಸದಸ್ಯತ್ವ ಹಂಚಿಕೆ ವಿವಾದ ಭುಗಿಲೆದ್ದಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಸದಸ್ಯತ್ವ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು: ಇಂದಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡು, ಹೊಸ ರೂಪದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಾರ್ಯಾರಂಭಗೊಂಡಿದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಅಧಿಸೂಚನೆಯಂತೆ, ಬೆಂಗಳೂರು ನಗರವನ್ನು ಐದು ವಿಭಿನ್ನ ನಗರಪಾಲಿಕೆಗಳಾಗಿ ವಿಭಜಿಸಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆದರೆ, ಪ್ರಾಧಿಕಾರದ ಸದಸ್ಯತ್ವ ಹಂಚಿಕೆ ಕುರಿತು ಇದೀಗ ವಿವಾದ ಉಂಟಾಗಿದೆ. ವಿಶೇಷವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸದಸ್ಯತ್ವ ನೀಡಿರುವ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸದಸ್ಯತ್ವ ಹಂಚಿಕೆ ವಿವಾದ
ಸರ್ಕಾರದ ಆದೇಶದಂತೆ, ಬೆಂಗಳೂರಿನ ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರಿಗೆ GBA ಸದಸ್ಯತ್ವ ನೀಡಲಾಗಿದೆ. ಆದರೆ, ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ಇಲ್ಲದ ಹೊರ ಜಿಲ್ಲೆಯ ನಾಯಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸದಸ್ಯತ್ವ ನೀಡಿರುವುದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಯಾವ ಮಾನದಂಡದ ಮೇಲೆ ಸಿಎಂ ಪುತ್ರರಿಗೆ ಸದಸ್ಯತ್ವ ನೀಡಲಾಗಿದೆ ಎಂಬುದರ ಕುರಿತು ಮುಖ್ಯಮಂತ್ರಿ ಸ್ವತಃ ವಿವರಣೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ. ಮಾಜಿ ಕಾರ್ಪೊರೇಟರ್‌ಗಳೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, “ಬೇರೆ ಜಿಲ್ಲೆಯಿಂದ ಬಂದವರಿಗೆ ಅವಕಾಶ ನೀಡಿರುವಾಗ, ಬೆಂಗಳೂರಿನ ಜನಪ್ರತಿನಿಧಿಗಳನ್ನು ಕೈಬಿಟ್ಟಿರುವುದು ನ್ಯಾಯೋಚಿತವಲ್ಲ” ಎಂದು ಪ್ರಶ್ನಿಸಿದ್ದಾರೆ.
ಯಲಹಂಕ ಕ್ಷೇತ್ರದ ತಾರತಮ್ಯ?
ಗಮನಾರ್ಹ ಸಂಗತಿಯೇನೆಂದರೆ, ಜಿಬಿಎ ವ್ಯಾಪ್ತಿಗೆ ಬರುವ ಯಲಹಂಕದ ಎಲ್ಲ ವಾರ್ಡ್‌ಗಳು ಸೇರಿಕೊಂಡಿದ್ದರೂ, ಅಲ್ಲಿನ ಲೋಕಸಭಾ ಸದಸ್ಯರಾದ ಸುಧಾಕರ್ ಅವರಿಗೆ ಸದಸ್ಯತ್ವ ನೀಡಲಾಗಿಲ್ಲ. ಇದರಿಂದ ಸದಸ್ಯತ್ವ ಹಂಚಿಕೆಯಲ್ಲಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ, ಜಿಬಿಎ ಆ್ಯಕ್ಟ್‌ನಲ್ಲಿ ಉಲ್ಲೇಖವಿಲ್ಲದವರಿಗೂ ಸರ್ಕಾರದ ಆದೇಶದ ಮೂಲಕ ಸದಸ್ಯತ್ವ ನೀಡಲಾಗಿರುವುದು ದೊಡ್ಡ ಪ್ರಶ್ನೆ ಎಬ್ಬಿಸಿದೆ. ಇತ್ತ, ಆ್ಯಕ್ಟ್‌ನಲ್ಲಿ ಸ್ಥಾನ ಪಡೆಯಬೇಕಾದ ಕೆಲವರನ್ನು ಕಡೆಗಣಿಸಿರುವುದೂ ವಿವಾದದ ಕೇಂದ್ರವಾಗಿದೆ.
5 ನಗರಪಾಲಿಕೆಗಳಿಗೆ ಆಯುಕ್ತರ ನೇಮಕ
ಇದೇ ವೇಳೆ, ಸರ್ಕಾರವು ಹೊಸದಾಗಿ ರಚಿಸಲ್ಪಟ್ಟ ಐದು ನಗರಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಿದೆ.
ಕೇಂದ್ರ ನಗರ ಪಾಲಿಕೆ – ಆಯುಕ್ತ: ರಾಜೇಂದ್ರ ಚೋಳನ್
ಪೂರ್ವ ನಗರ ಪಾಲಿಕೆ – ಆಯುಕ್ತ: ರಮೇಶ್ ಜಿ.ಎಸ್ ; ಅಪರ ಆಯುಕ್ತೆ: ಸ್ನೇಹಲ್ ಸುಧಾಕರ್
ಉತ್ತರ ನಗರ ಪಾಲಿಕೆ – ಆಯುಕ್ತ: ಪೊಮ್ಮಳ ಸುನಿಲ್ ಕುಮಾರ್
ದಕ್ಷಿಣ ನಗರ ಪಾಲಿಕೆ – ಆಯುಕ್ತ: ರಮೇಶ್ ಕೆ.ಎನ್ ; ಅಪರ ಆಯುಕ್ತ: ಪಾಂಡುರಾಹುಲ್ ತುಕರಾಮ್
ಪಶ್ಚಿಮ ನಗರ ಪಾಲಿಕೆ – ಆಯುಕ್ತ: ರಾಜೇಂದ್ರ ಕೆ.ವಿ
ಏಕೀಕೃತ ಬಿಬಿಎಂಪಿಗೆ ಅಂತ್ಯ
ಇದರಿಂದ, 2010ರಿಂದ 2025ರವರೆಗೆ ಕಾರ್ಯನಿರ್ವಹಿಸಿದ್ದ ಬಿಬಿಎಂಪಿ ಆಡಳಿತಕ್ಕೆ ಅಧಿಕೃತ ಅಂತ್ಯವಾಗಿದ್ದು, ಬೆಂಗಳೂರಿನಲ್ಲಿ ಇದೀಗ ವಿಭಜಿತ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ನಗರಪಾಲಿಕೆಗಳು ಕಾರ್ಯನಿರ್ವಹಿಸಲಿವೆ. ಆದರೆ, ಸದಸ್ಯತ್ವ ಹಂಚಿಕೆ ವಿವಾದದಿಂದಲೇ ಹೊಸ ಆಡಳಿತ ವ್ಯವಸ್ಥೆಯ ಆರಂಭ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.