ಮೇಲ್ಮನೆ ಸಭಾಪತಿ ಸ್ಥಾನದ ರೇಸಲ್ಲಿ ಹರಿಪ್ರಸಾದ್, ಬೋಸರಾಜು ಯಾರಿಗೆ ಒಲಿಯಲಿದೆ ಭಾಗ್ಯ? | Who Will Be Chosen As The Speaker Of The Upper House Hariprasad Or Bose Raju

ಮೇಲ್ಮನೆ ಸಭಾಪತಿ ಸ್ಥಾನದ ರೇಸಲ್ಲಿ ಹರಿಪ್ರಸಾದ್, ಬೋಸರಾಜು ಯಾರಿಗೆ ಒಲಿಯಲಿದೆ ಭಾಗ್ಯ? | Who Will Be Chosen As The Speaker Of The Upper House Hariprasad Or Bose Raju



ಮೇಲ್ಮನೆ ಸಭಾಪತಿ ಸ್ಥಾನದ ರೇಸಲ್ಲಿ ಹರಿಪ್ರಸಾದ್, ಬೋಸರಾಜು ಯಾರಿಗೆ ಒಲಿಯಲಿದೆ ಭಾಗ್ಯ? | Who Will Be Chosen As The Speaker Of The Upper House Hariprasad Or Bose Raju

ನಾಲ್ವರು ನಾಮನಿರ್ದೇಶಿತ ಸದಸ್ಯರ ಸೇರ್ಪಡೆಯೊಂದಿಗೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಬಹುಮತಕ್ಕೆ ಬಂದಿದೆ. ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅಥವಾ ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರಲ್ಲಿ ಒಬ್ಬರು ಸಭಾಪತಿಯಾಗುವ ಸಾಧ್ಯತೆ ಇದೆ. 

ಬೆಂಗಳೂರು (ಸೆ.8): ನಾಲ್ವರ ನಾಮನಿರ್ದೇಶನದೊಂದಿಗೆ ಮೇಲ್ಮನೆಯಲ್ಲಿ ಕಾಂಗ್ರೆಸ್‌ ಪಕ್ಷ ಪೂರ್ಣ ಬಹುಮತದ ಹೊಸ್ತಿಲಿಗೆ ಬಂದ ಬೆನ್ನಲ್ಲೇ, ಸಭಾಪತಿ ಸ್ಥಾನ ಹಿರಿಯ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌ ಅಥವಾ ಹಾಲಿ ಸಭಾನಾಯಕ ಎನ್‌.ಎಸ್‌. ಬೋಸರಾಜು ಪೈಕಿ ಒಬ್ಬರಿಗೆ ಒಲಿಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಮುಂಬರುವ ದಿನಗಳಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆ ಆಧರಿಸಿ, ಸಭಾಪತಿ ಸ್ಥಾನಕ್ಕೆ ಈ ಇಬ್ಬರ ಪೈಕಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಈ ವರ್ಷಾಂತ್ಯದ ವೇಳೆಗೆ ಸಚಿವ ಸಂಪುಟ ಪುನಾರಚನೆ ನಡೆದರೆ ಆಗ ಸಂಪುಟಕ್ಕೆ ಸೇರ್ಪಡೆಯಾಗುವ ಆಕಾಂಕ್ಷೆ ಹರಿಪ್ರಸಾದ್‌ ಅವರಿಗೆ ಇದೆ ಎನ್ನಲಾಗುತ್ತಿದೆ. ಇದನ್ನು ಕಾಂಗ್ರೆಸ್‌ ನಾಯಕತ್ವ ಪರಿಗಣಿಸಿದರೆ ಆಗ ಹಾಲಿ ಸಚಿವರಾಗಿರುವ ಬೋಸರಾಜು ಅವರು ಸಂಪುಟ ಸ್ಥಾನ ತೆರವು ಮಾಡಬೇಕಾಗಬಹುದು. ಹೀಗಾದಲ್ಲಿ ಬೋಸರಾಜು ಅವರಿಗೆ ಸಭಾಪತಿ ಹುದ್ದೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆದರೆ, ಆಪ್ತರ ಪ್ರಕಾರ ಬೋಸರಾಜು ಅವರಿಗೆ ಸಂಪುಟದಲ್ಲೇ ಮುಂದುವರೆಯುವ ಮನಸ್ಥಿತಿಯಿದೆ. ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಯಾಗಿರುವ ಬೋಸರಾಜು ಅವರು ಸಂಪುಟದಲ್ಲೇ ಉಳಿದುಕೊಳ್ಳುವ ಸ್ಥಿತಿ ಎದುರಾದರೇ ಆಗ ಹರಿಪ್ರಸಾದ್‌ ಅವರನ್ನು ಸಭಾಪತಿ ಹುದ್ದೆಗೆ ಪರಿಗಣಿಸಬಹುದು ಎನ್ನಲಾಗುತ್ತಿದೆ.

ಬೆಳಗಾವಿ ಅಧಿವೇಶನದ ವೇಳೆಗೆ ತೀರ್ಮಾನ!

ಹೊಸ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಪ್ರಕ್ರಿಯೆ ಅಧಿವೇಶನ ಸಂದರ್ಭದಲ್ಲಿ ನಡೆಯಬೇಕಾಗುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದವರೆಗೆ ಈ ಎರಡು ಹುದ್ದೆಗಳ ಬದಲಾವಣೆ ಸಾಧ್ಯತೆ ಕಡಿಮೆ.

ರಾಜೀನಾಮೆಗೆ ಒಲವು:

ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಹಿಂದೆಯೇ ಹಲವಾರು ಬಾರಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಣ್ಣ ಸುಳಿವು ದೊರೆತರೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾನ್ಯವಾಗಿ ಅವಿಶ್ವಾಸ ನಿರ್ಣಯದ ಮೂಲಕ ಸಭಾಪತಿ ಅಥವಾ ಉಪಸಭಾಪತಿಗಳನ್ನು ಹುದ್ದೆಯಿಂದ ಕೆಳಗಿಳಿಸಿದ ಪ್ರಸಂಗ ನಡೆದಿಲ್ಲ. ಈ ಹಿಂದೆ ಡಿ.ಎಚ್‌. ಶಂಕರಮೂರ್ತಿ ಅವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದ್ದರೂ ಅದಕ್ಕೆ ಸೋಲಾಗಿತ್ತು. ಹೀಗಾಗಿ ಸದನದ ಅತ್ಯಂತ ಹಿರಿಯ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇಲ್ಲ. ಬದಲಾಗಿ ರಾಜೀನಾಮೆ ಪಡೆದು ಹೊಸ ಸಭಾಪತಿ ಆಯ್ಕೆ ಮಾಡುವುದೊಂದೇ ದಾರಿ ಉಳಿದಿದೆ.

ನಿರ್ಣಾಯಕ ಲಖನ್‌ ಜಾರಕಿಹೊಳಿ:

75 ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಕಾಂಗ್ರೆಸ್‌ 37, ಬಿಜೆಪಿ 29, ಜೆಡಿಎಸ್‌ 7 ಸದಸ್ಯರ ಬಲ ಹೊಂದಿದೆ. ತಲಾ ಒಬ್ಬರು ಪಕ್ಷೇತರ ಹಾಗೂ ಸಭಾಪತಿ ಇದ್ದಾರೆ. ಬಹುಮತಕ್ಕೆ 38 ಸದಸ್ಯರ ಅವಶ್ಯಕತೆ ಇದೆ. ಬಿಜೆಪಿ-ಜೆಡಿಎಸ್‌ನ 36 ಸದಸ್ಯರು ಹಾಗೂ ಸಭಾಪತಿ ಹೊರಟ್ಟಿ ಅವರನ್ನು ಪರಿಗಣಿಸಿದರೆ ಒಟ್ಟು ಸಂಖ್ಯೆ 37 ಆಗುತ್ತದೆ. ಬಹುಮತ ಪಡೆಯಲು ಒಬ್ಬ ಸದಸ್ಯರ ಕೊರತೆಯಾಗುತ್ತದೆ. ಹೀಗಾಗಿ ಪಕ್ಷೇತರ ಸದಸ್ಯರಾಗಿರುವ ಲಖನ್‌ ಜಾರಕಿಹೊಳಿ ಅವರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅಂತಹ ಪಕ್ಷ ಪೂರ್ಣ ಬಹುಮತ ಪಡೆಯುತ್ತದೆ. ಆದರೆ ಲಖನ್‌ ಜಾರಕಿಹೊಳಿ ಅವರು ಆಡಳಿತ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿರುವುದರಿಂದ ಕಾಂಗ್ರೆಸ್‌ ಪೂರ್ಣ ಬಹುಮತ ಪಡೆಯುವುದು ಖಚಿತ ಎಂದೇ ಹೇಳಬಹುದು.



Source link

Leave a Reply

Your email address will not be published. Required fields are marked *