
ಕಾಂತಾರ ಚಾಪ್ಟರ್ 1 ಟ್ರೇಲರ್‌ನಲ್ಲಿ (Kantara trailer release) ‘ಬೆರ್ಮೆ’ ಎಂಬ ಹೆಸರು ಕೇಳಿಬಂದಿದ್ದು, ಇದು ರಿಷಬ್ ಶೆಟ್ಟಿಯವರ ಪಾತ್ರದ ಹೆಸರಿರಬಹುದೆಂದು ಊಹಿಸಲಾಗಿದೆ. ತುಳುನಾಡಿನ ನಂಬಿಕೆಯ ಪ್ರಕಾರ, ಬೆರ್ಮೆರ್ ಎನ್ನುವುದಕ್ಕೆ ವಿಶೇಷ ಹಿನ್ನೆಲೆ ಇದೆ.
ಕಾಂತಾರಾ ಚಾಪ್ಟರ್ 1 ಟ್ರೇಲರ್ ರಿಲೀಸ್ (Kantara trailer release) ಆಗಿದೆ. ಸ್ವಲ್ಪ ಮಟ್ಟಿಗೆ ಅದು ಆ ಸಿನಿಮಾದ ಕತೆಯನ್ನೂ ಬಿಚ್ಚಿಡುವ ಹಾಗೆ ಕಾಣುತ್ತಿದೆ. ಮೊದಲ ಸಿನಿಮಾ ಶಿವ ಎಂಬ ವ್ಯಕ್ತಿಯ ಹಾಗೂ ತುಳುನಾಡಿನ ಪ್ರಭಾವಿ ಪಂಜುರ್ಲಿ ದೈವದ ಕಥೆ ಆಗಿತ್ತು. ಅದರ ಪ್ರೀಕ್ವೆಲ್ ಆಗಿ ಬಂದಿರುವ ಈ ಸಿನಿಮಾದಲ್ಲಿ, ಪಂಜುರ್ಲಿ ದೈವ ಹಾಗೂ ಆ ದೈವದ ಪೂರ್ವಕಥೆ, ತುಳುನಾಡಿನ ಕಥೆ ಇದೆ ಎಂದು ಗೊತ್ತಾಗುತ್ತದೆ. ಅದರ ಜೊತೆಗೆ ತುಳುನಾಡಿನ ಅರಸನೊಬ್ಬನ ದುಷ್ಟ ಆಡಳಿತ, ಅದರ ವಿರುದ್ಧ ಬಂಡೇಳುವ ಜನ- ಇವೆಲ್ಲವೂ ಇವ. ಇದರ ಜೊತೆಗೆ, ಟ್ರೇಲರ್‌ನಲ್ಲಿ ʼಬೆರ್ಮೆʼ ಎಂಬ ಹೆಸರು ಕೂಡ ಕೇಳಿಬರುತ್ತದೆ. ಅದು ಬಹುಶಃ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿರುವ ಪ್ರಮುಖ ಪಾತ್ರ ರಿಷಬ್ ಶೆಟ್ಟಿ ಅವರ ಪಾತ್ರದ ಹೆಸರು ಎನ್ನಬಹುದು. ಈ ʼಬೆರ್ಮೆʼ ಅಥವಾ ʼಬೆರ್ಮೆರ್ʼ ಎಂಬುದು ತುಳುನಾಡಿನ ಮಟ್ಟಿಗೆ ಬರೀ ಒಂದು ಹೆಸರಲ್ಲ, ಅದೊಂದು ಶಕ್ತಿ. ಅದರೊಂದಿಗೆ ತುಳುನಾಡಿನ ಕತೆಯೇ ಮಿಳಿತವಾಗಿದೆ. ಹಾಗಾದರೆ ಯಾರು ಈ ಬೆರ್ಮೆರ್?
ತುಳುನಾಡಿನ ಎಲ್ಲಾ ದೈವಗಳಿಗೂ ಮೂಲಪುರುಷನ, ಅಧಿನಾಯಕನ ಸ್ಥಾನದಲ್ಲಿರುವವರು ಬೆರ್ಮೆರ್. ಅಂದರೆ ಪುರಾಣಗಳಲ್ಲಿ ಎಲ್ಲ ದೇವರಿಗೂ ಆದಿಮಾಯೆಯೇ ಮೂಲದಲ್ಲಿರುವ ಹಾಗೆ, ತುಳುನಾಡಿನ ಎಲ್ಲ ದೈವಗಳಿಗೆ ಮೂಲಶಕ್ತಿ ಬೆರ್ಮೆರ್. ತುಳುನಾಡಿನ ಉದ್ದಗಲಕ್ಕೆ ಯಾವ ಊರಿಗೆ ಹೋದರೂ ಬೆರ್ಮೆರೆ ಬಾಕ್ಯಾರ್, ಬೆರ್ಮೆರೆ ಗುಂಡಿ, ಬೆರ್ಮೆರೆ ಸಾನ, ಬೆರ್ಮೆರೆ ಪಾಡಿ, ಬೆರ್ಮೆರೆ ಬೊಟ್ಟು ಎನ್ನುವ ಹೆಸರಿನ ಒಂದಲ್ಲ ಒಂದು ಸ್ಥಳ, ಉಲ್ಲೇಖಗಳು ಕಾಣಲು ಸಿಗುತ್ತವೆ. ತುಳುನಾಡಿನ ಜನ ಅನಾದಿ ಕಾಲದಿಂದ ಬೆರ್ಮೆರ್ ಎಂಬ ಶಕ್ತಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ತುಳುವಿನ ಕಾವ್ಯಗಳಾದ ಸಂಧಿ ಪಾಡ್ದನಗಳಲ್ಲಿ ಈ ಬೆರ್ಮೆರ್ ಉಲ್ಲೇಖವಿದೆ.
ಬ್ರಹ್ಮ ಎಂಬುದು ಒಂದು ಮಹಾ ಶಕ್ತಿ. ಪಾಡ್ದನಗಳಲ್ಲಿ ಬರುವ ಪ್ರಕಾರ ಅದು ಎಲ್ಲ ದೈವಗಳಿಗೂ, ದೇವರಿಗೂ ಮೊದಲಿನ ಶಕ್ತಿ. ದೈವಗಳು ಹುಟ್ಟಿಕೊಳ್ಳುವುದು ಹೇಗೆ? ಸಾಮಾನ್ಯ ಮನುಷ್ಯನ ಜೀವನದಲ್ಲಿ ಯಾವುದೋ ವಿಶಿಷ್ಟ ಘಟನೆ ನಡೆಯುತ್ತದೆ. ಆತ ಅಥವಾ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾರೆ. ಹೀಗೆ ಹೋರಾಟದಲ್ಲಿ ಅವರು ಹತರಾಗುತ್ತಾರೆ ಇಲ್ಲವೇ ವಿಜಯಿಯಾಗಿ ಮುಂದೆ ದೈವವಾಗುತ್ತಾರೆ. ಇವರು ಯಾವುದೋ ಒಂದು ರೀತಿಯಲ್ಲಿ ಮುಂದೆ ಸಜ್ಜನರನ್ನು ರಕ್ಷಿಸುವ ಹೊಣೆ ಹೊರುತ್ತಾರೆ. ಇಂಥ ದೈವಗಳ ಹುಟ್ಟಿಗೆ ಕಾರಣವಾಗುವವರೇ ಬೆರ್ಮೆರ್.
ಪುರಾಣಗಳಲ್ಲಿ ಹಾಗೂ ವೇದವೇದಾಂತಗಳಲ್ಲಿ ಪ್ರಸ್ತಾಪವಾಗಿರುವ ʼಬ್ರಹ್ಮʼ ಎಂಬ ಕಲ್ಪನೆಗೂ ಈ ಬೆರ್ಮೆ ಎಂಬ ವ್ಯಕ್ತಿತ್ವದ ಕಲ್ಪನೆ ಸಾಮ್ಯತೆ ಇದೆ. ಬ್ರಹ್ಮ ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಚತುರ್ಮುಖ ಬ್ರಹ್ಮನೂ ಆಗಬಹುದು. ಅಥವಾ ಆಕಾರವೇ ಇಲ್ಲದ, ನಿರಾಕಾರವಾದ ಪರಬ್ರಹ್ಮ ಎಂಬ ಮಹಾಶಕ್ತಿಯೂ ಆಗಿರಬಹುದು. ಚತುರ್ಮುಖ ಬ್ರಹ್ಮನಾದರೆ ಆದರೆ ಪ್ರಪಂಚದ ಸೃಷ್ಟಿಗೆ ಕಾರಣಕರ್ತ. ಪರಬ್ರಹ್ಮನಾದರೆ ಅದು ಎಲ್ಲ ಆಕಾರ, ವ್ಯಕ್ತಿ, ಪ್ರಕೃತಿಯ ಮೂಲವೇ ಆಗಿರುತ್ತದೆ. ಈ ಎರಡೂ ಅರ್ಥದಲ್ಲೂ ಬೆರ್ಮೆರ್ ಎಂಬುದನ್ನು ಭಾವಿಸಬಹುದು. ಪ್ರಕೃತಿಯಲ್ಲಿರುವ ನಿಗೂಢ ಮಹಾಶಕ್ತಿಯಲ್ಲಿ ಪೂಜ್ಯರಾದ ತಮ್ಮ ಹಿರಿಯರೆಲ್ಲ ಮೃತರಾದ ನಂತರ ಸೇರಿಕೊಂಡು ನಮ್ಮನ್ನು ಆಶೀರ್ವದಿಸಿ ಪೊರೆಯುತ್ತಾರೆ ಎಂದು ತುಳುನಾಡಿನವರು ನಂಬುತ್ತಾರೆ.
ಬೆರ್ಮೆರ್ ಎಂಬ ಮಹಾಶಕ್ತಿಗೆ ಯಾವುದೇ ಆಕಾರ ಇಲ್ಲದಿರುವುದರಿಂದ ಮೊದಲು ಯಾವುದೇ ವಿಗ್ರಹ ಆರಾಧನೆ ಇರಲಿಲ್ಲ. ರೂಪಾತೀತನಾಗಿ ಆರಾಧಿಸಲ್ಪಡುತ್ತಿದ್ದರು. ನಂತರ ಆರಾಧನೆಗಾಗಿ ಕಲ್ಲಿನಲ್ಲಿ ಆ ದೈವವನ್ನು ಕಾಣಲಾರಂಭಿಸಿದರು. ನಂತರ ಇತರ ದೈವಗಳ ಆರಾಧನೆ ಸಂದರ್ಭದಲ್ಲಿ ಬೆರ್ಮೆರ್‌ಗೂ ಆರಾಧನೆ ಅಗತ್ಯವಾಗಿ, ರೂಪವೂ ಬಂತು. ಕೆಲವೆಡೆ ಬೆರ್ಮೆರನ್ನು ಬ್ರಹ್ಮಲಿಂಗೇಶ್ವರ ಎಂದು ಆರಾಧಿಸುತ್ತಾರೆ. ಹೀಗಾಗಿಯೇ ಕೆಲವು ಕಡೆ ಬೆರ್ಮೆರ್‌ಗೆ ಕೋಲನೇಮ ನೀಡಿ ದೈವಗಳಂತೆ ಆರಾಧನೆ ನೀಡಿದರೆ, ಇನ್ನು ಕೆಲವು ಕಡೆ ಬ್ರಹ್ಮಲಿಂಗೇಶ್ವರ ಎಂದು ದೇವರಂತೆ ಪೂಜಿಸುತ್ತಾತ್ತಾರೆ.