82 ಹುಲಿ ಸಾವು ಬಗ್ಗೆ ಪರಿಶೀಲಿಸಿ ವರದಿ ನೀಡಿ: ಸಚಿವ ಈಶ್ವರ್‌ ಖಂಡ್ರೆ ಆದೇಶ | Minister Eshwar Khandre Demands Report On 82 Tiger Deaths Gvd

82 ಹುಲಿ ಸಾವು ಬಗ್ಗೆ ಪರಿಶೀಲಿಸಿ ವರದಿ ನೀಡಿ: ಸಚಿವ ಈಶ್ವರ್‌ ಖಂಡ್ರೆ ಆದೇಶ | Minister Eshwar Khandre Demands Report On 82 Tiger Deaths Gvd



ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಜು.02): ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ದಾಖಲೆಯಂತೆ ರಾಜ್ಯದಲ್ಲಿ ಒಟ್ಟಾರೆ 2020ರಿಂದ 2025ರ ಜೂನ್‌ 28ರವರೆಗೆ ಒಟ್ಟಾರೆ 82 ಹುಲಿಗಳು ಸಾವನ್ನಪ್ಪಿವೆ.

ಈ ಕುರಿತು ‘ಕನ್ನಡಪ್ರಭ’ದಲ್ಲಿ ಭಾನುವಾರ (ಜೂ.29)ದಂದು ‘ಐದೂವರೆ ವರ್ಷದಲ್ಲಿ ರಾಜ್ಯದಲ್ಲಿ 82 ಹುಲಿಗಳು ಬಲಿ’ ಶೀರ್ಷಿಕೆ ಅಡಿ ಸುದ್ದಿ ಪ್ರಕಟಗೊಂಡಿತ್ತು. ಅದರ ಆಧಾರದ ಮೇಲೆ ಈಶ್ವರ್‌ ಖಂಡ್ರೆ ಅವರು, ಕಳೆದ ಐದೂವರೆ ವರ್ಷಗಳಲ್ಲಿ ಹುಲಿಗಳು ಸಾವಿಗೀಡಾಗಿರುವ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಮೃತ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸಾವಿಗೀಡಾಗಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜವಾಗಿ ಮೃತಪಟ್ಟ ಹುಲಿಗಳ ಸಾವಿಗೆ ಕಾರಣವೇನು? ಹಾಗೂ ಸಾವಿನ ಬಗ್ಗೆ ಈ ಹಿಂದೆ ತನಿಖೆ ನಡೆದು ವರದಿ ಬಂದಿದೆಯೇ ಎಂಬ ಅಂಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಖಂಡ್ರೆ ಆದೇಶಿಸಿದ್ದಾರೆ.

ಹಾಗೆಯೇ, ಮೃತ ಹುಲಿಗಳ ಪೈಕಿ ಯಾವುದಾದರೂ ಹುಲಿಯ ಉಗುರು, ಹಲ್ಲು ಸೇರಿ ಇನ್ನಿತರ ಅಂಗಾಂಗ ತೆಗೆಯಲಾಗಿತ್ತೇ, ಹುಲಿಗಳ ಹತ್ಯೆ ಆಗಿದ್ದಲ್ಲಿ ಅದರಲ್ಲಿ ನಿರ್ಲಕ್ಷ್ಯವಹಿಸಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆಯೇ? ಎಷ್ಟು ಹುಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ಈವರೆಗೆ ಹುಲಿ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ, ಎಷ್ಟು ಪ್ರಕರಣ ತನಿಖಾ ಹಂತದಲ್ಲಿವೆ, ಯಾವ ಕಾರಣಕ್ಕೆ ತನಿಖೆ ವಿಳಂಬವಾಗಿದೆ ಎಂಬುದು ಸೇರಿದಂತೆ ಇನ್ನಿತರ ಅಂಶಗಳನ್ನೊಳಗೊಂಡ ವರದಿ ನೀಡುವಂತೆ ತಿಳಿಸಲಾಗಿದೆ. ಈ ಎಲ್ಲ ಅಂಶಗಳ ಮೇಲೆ ತನಿಖೆ ನಡೆಸಿ ಮುಂದಿನ 10 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಗಡುವು ನೀಡಿದ್ದಾರೆ.

ಚಿರತೆ ಹತ್ಯೆಯೂ ತನಿಖೆಗೆ: ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 5 ಹುಲಿಗಳಿಗೆ ವಿಷ ಪ್ರಾಶನ ಮಾಡಿ ಕೊಂದ ಪ್ರಕರಣದ ನಂತರ ಇದೀಗ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ಕೌದಳ್ಳಿ ವಲಯದಲ್ಲಿ ಚಿರತೆಯೊಂದನ್ನು ಹತ್ಯೆ ಮಾಡಿ, ಅದರ ಕಾಲು ಕತ್ತರಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣವನ್ನು ಈಗಾಗಲೇ ಹುಲಿ ಹತ್ಯೆ ತನಿಖೆಗೆ ರಚಿಸಲಾಗಿರುವ ಎಪಿಸಿಸಿಎಫ್‌ ನೇತೃತ್ವದ ತಂಡಕ್ಕೆ ವಹಿಸಿ ಈಶ್ವರ್‌ ಖಂಡ್ರೆ ಆದೇಶಿಸಿದ್ದಾರೆ. ಚಿರತೆ ಅಂಗಾಂಗ ಕತ್ತರಿಸಿರುವುದು ನಿಜವಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸಿನೊಂದಿಗೆ 7 ದಿನಗಳಲ್ಲಿ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.



Source link

Leave a Reply

Your email address will not be published. Required fields are marked *