ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಕಾರ್ಮಿಕರನ್ನು ಅಪಹರಿಸಲಾಗಿದೆ. ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಭಾರತ ಸರ್ಕಾರ ಕಾರ್ಮಿಕರ ಬಿಡುಗಡೆಗೆ ಪ್ರಯತ್ನಿಸುತ್ತಿದೆ.
ನವದೆಹಲಿ: ಮಾಲಿಯ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಕಾರ್ಮಿಕರನ್ನು ಅಪಹರಿಸಲಾಗಿದೆ. ಉಗ್ರ ಸಂಘಟನೆಯಾಗಿರುವ ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಮೂವರು ಭಾರತೀಯರನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಮೂವರು ಭಾರತೀಯರು ಅಪಹರಣವಾಗಿರೋದನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಆಫ್ರಿಕಾದ ಮಾಲಿಯ ಹಲವು ಭಾಗಗಳಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆದಿವೆ. ಭಾರತೀಯರ ಅಪಹರಕಣಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಮೂವರು ಕಾರ್ಮಿಕರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವಂತೆ ಮಾಲಿ ಸರ್ಕಾರವನ್ನು ಕೇಳಿದೆ.
ಭಾರತದ ಮೂವರು ಕಾರ್ಮಿಕರು ಸುರಕ್ಷತೆ ಬಗ್ಗೆ ಖಚಿತ ಮಾಹಿತಿಯನ್ನು ನೀಡುವಂತೆ ಭಾರತ ಸರ್ಕಾರ ಸಂದೇಶವನ್ನು ರವಾನಿಸಿದೆ. ಅಪಹರಣಕ್ಕೊಳಗಾದ ಮೂವರು ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರ ಬಿಡುಗಡೆ ಬಗ್ಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ವಿದೇಶಾಂಗ ಸಚಿವಾಲಯ (MEA) ಕೇಳಿದೆ.
ಜುಲೈ 1 ರಂದು ಅಪಹರಣ
ಜುಲೈ 1 ರಂದು ಶಸ್ತ್ರಸಜ್ಜಿತ ದಾಳಿಕೋರರ ಗುಂಪೊಂದು ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆ ಆವರಣದ ಮೇಲೆ ಸಂಘಟಿತ ದಾಳಿ ನಡೆಸಿತ್ತು. ಈ ವೇಳೆ ಮೂವರು ಭಾರತೀಯ ನಾಗರಿಕರನ್ನು ಬಲವಂತವಾಗಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈವರೆಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಮೂವರು ಕಾರ್ಮಿಕರ ಅಪಹರಣಗಳ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಲ್-ಖೈದಾಗೆ ಸಂಬಂಧಿಸಿದ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮೀನ್ (ಜೆಎನ್‌ಐಎಂ) ಮಂಗಳವಾರ ನಡೆದ ದಾಳಿಗಳ ಹೊಣೆಯನ್ನು ಹೊತ್ತುಕೊಂಡಿದೆ. ಹಾಗಾಗಿ ಈ ಅಪಹರಣವನ್ನು ಇವರೇ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.