ಕರ್ನಾಟಕದ ಉಡುಪಿ ಸೇರಿ ದೇಶದ 4 ಊರುಗಳ ಮೂಲಕ ಈ ಕಾರ್ಯಾಚರಣೆ ನಡೆಯುತ್ತಿತ್ತು. ದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ ಒಟ್ಟು 8 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ನವದೆಹಲಿ (ಜು.03): ಬೃಹತ್ ಅಂತಾರಾಷ್ಟ್ರೀಯ ಡ್ರಗ್ಸ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ‘ಆಪರೇಷನ್ ಮೆಡ್ ಮ್ಯಾಕ್ಸ್’ ಹೆಸರಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಭಾರತ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳು ಮತ್ತು 4 ಖಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತ್ಯಾಧುನಿಕ ಡ್ರಗ್ ಸಿಂಡಿಕೇಟ್ ಅನ್ನು ಬಯಲಿಗೆಳೆದಿದೆ. ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ ಹಾಗೂ 5 ಡ್ರಗ್ಸ್ ಸರಕನ್ನು ವಶಪಡಿಸಿಕೊಳ್ಳಲಾಗಿದೆ.
ಗಮನಾರ್ಹವೆಂದರೆ ಕರ್ನಾಟಕದ ಉಡುಪಿ ಸೇರಿ ದೇಶದ 4 ಊರುಗಳ ಮೂಲಕ ಈ ಕಾರ್ಯಾಚರಣೆ ನಡೆಯುತ್ತಿತ್ತು. ದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ ಒಟ್ಟು 8 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಇದು ಡಿಜಿಟಲ್ ಡ್ರಗ್ ವ್ಯಾಪಾರ , ಕ್ರಿಪ್ಟೋ ಪಾವತಿಗಳು ಮತ್ತು ಡಾರ್ಕ್ ವೆಬ್ ಲಾಜಿಸ್ಟಿಕ್ಸ್‌ನ ಬೆಳೆಯುತ್ತಿರುವ ಸಂಬಂಧವನ್ನು ಬಹಿರಂಗಪಡಿಸಿದೆ. ಇದು ಮೋದಿ ಸರ್ಕಾರ ಡ್ರಗ್ಸ್ ನಿಗ್ರಹದ ಬಗ್ಗೆ ಹೊಂದಿರುವ ಬದ್ಧತೆ’ ಎಂದು ಶ್ಲಾಘಿಸಿದ್ದಾರೆ.
ಉಡುಪಿಯಲ್ಲಿ ಕಾಲ್ ಸೆಂಟರ್: ಮೇ 25ರಂದು ದಿಲ್ಲಿಯಲ್ಲಿ 3.7 ಕೇಜಿ ಡ್ರಗ್ಸ್ ವಶದೊಂದಿಗೆ ಇದರ ವಿರುದ್ಧ ಮೊದಲ ಬಾರಿ ಕಾರ್ಯಾಚರಣೆ ಆರಂಭವಾಯಿತು. ಅಲ್ಲಿ ಇಬ್ಬರನ್ನು ಬಂಧಿಸಿದಾಗ ಕರ್ನಾಟಕದ ಉಡುಪಿಯಲ್ಲಿನ ವ್ಯಕ್ತಿಯೊಬ್ಬರು ನೀಡಿರುವ ಸಂಪರ್ಕದ ಮೂಲಕ ಅಮೆರಿಕಕ್ಕೆ ಡ್ರಗ್ಸ್ ಸಾಗಿಸುವ ವಿಷಯ ಗೊತ್ತಾಯಿತು. ಉಡುಪಿಯಲ್ಲಿ ತನಿಖೆ ಮಾಡಿದಾಗ ಅಮೆರಿಕ, ಆಸ್ಟ್ರೇಲಿಯಾ, ಎಸ್ಟೋನಿಯಾ, ಸ್ಪೇನ್ ಹಾಗೂ ಸ್ವಿಜರ್ಲೆಂಡ್‌ಗೆ ಒಟ್ಟು 50 ಡ್ರಗ್ಸ್ ಸರಕುಗಳು ಸಾಗಣೆ ಆದ ಬಗ್ಗೆ ಗೊತ್ತಾಯಿತು. ಬಳಿಕ ಇಂಟರ್‌ಪೋಲ್‌ಗೆ ಭಾರತ ಸರ್ಕಾರ ಮಾಹಿತಿ ನೀಡಿತು.
ಆಗ ಈ ಡ್ರಗ್ಸ್ ಗ್ಯಾಂಗ್ ಉಡುಪಿಯಲ್ಲೇ ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ವಿಷಯ ಗೊತ್ತಾಯಿತು. ಕಾಲ್ ಸೆಂಟರ್‌ನಲ್ಲಿ 10 ಜನರನ್ನು ನೇಮಿಸಿಕೊಂಡು ಆರ್ಡರ್ ಪಡೆಯುವುದು ಸೇರಿ ವಿವಿಧ ವ್ಯವಹಾರಗಳನ್ನು ಗ್ಯಾಂಗ್ ನಡೆಸುತ್ತಿತ್ತು. ಸ್ವತಃ ಕಾಲ್‌ಸೆಂಟರ್ ನೌಕರರಿಗೂ ಇದು ಯಾವ ವ್ಯವಹಾರ ಎಂದು ಅರಿವು ಇರುತ್ತಿರಲಿಲ್ಲ. ಆ ರೀತಿ ವ್ಯವಹಾರ ನಡೆಯುತ್ತಿತ್ತು ಎಂದು ಗೃಹ ಸಚಿವಾಲಯ ಹೇಳಿದೆ.