ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇದೀಗ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ತಿರುಗೇಟು ನೀಡಿದ್ದಾರೆ. ಜನತೆಗೆ ಸುಳ್ಳು ಮಾಹಿತಿ ನೀಡುವುದು ನಿಲ್ಲಿಸಲು ಆಗ್ರಹಿಸಿದ್ದಾರೆ.
ಬೆಂಗಳೂರು (ಜು.03) ಹಾಸನದಲ್ಲಿ ಸರಣಿ ಹೃದಯಾಘಾತಗಳು ಸಂಭವಿಸುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಕೋವಿಡ್ ಲಸಿಕೆ ಈ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೇಂದ್ರ ನೀಡಿದ ಕೋವಿಡ್ ಲಸಿಕೆ ಕಾರಣ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಐಸಿಎಂಆರ್, ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೇ ಬಯೋಕಾನ್ ಸಂಸ್ಥೆ ಮುಖ್ಯಸ್ತೆ ಕಿರಣ್ ಮುಜುಮ್ದಾರ್ ಶಾ ತಿರುಗೇಟು ನೀಡಿದ್ದಾರೆ.
ಹಾಸನದ ಹೃದಯಾಘಾತ ಪ್ರಕರಣವನ್ನು ಕೇಂದ್ರದ ಹೆಗಲಿಗೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ ಸಿಎಂ ಸಿದ್ದರಾಮಯ್ಯಗೆ ಐಸಿಎಂಆರ್ ಅಂಕಿ ಅಂಶಗಳ ಮೂಲಕ ಉತ್ತರ ನೀಡಿದೆ. ಪರೀಕ್ಷೆ ಹಾಗೂ ಅಧ್ಯಯನದಲ್ಲಿ ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಟ್ವೀಟ್ ಮೂಲಕ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎಂಬ ಮಾಹಿತಿ ನೀಡಿದ್ದರು. ಆದರೆ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಮ್ದಾರ್ ಶಾ ತಿರುಗೇಟು ನೀಡಿದ್ದಾರೆ. ಕೋವಿಡ್ ಲಸಿಕಗೆ ತುರ್ತು ಅನುಮೋದನೆ ನೀಡಿದ ಕಾರಣ ಈ ಅವಾಂತರಕ್ಕೆ ಕಾರಣವಾಗಿದೆ ಎಂಬ ಸಿದ್ದರಾಮಯ್ಯ ವಾದವನ್ನು ಕಿರಣ್ ಮುಜುಮ್ದಾರ್ ತಳ್ಳಿ ಹಾಕಿದ್ದಾರೆ.
ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಅಂತಾರಾಷ್ಟ್ರೀಯ ಮಾನದಂಡ ಅನುಸರಿಸಿ ಅಭಿವೃದ್ಧಿಪಡಿಸಲಾಗಿದೆ. ಸುರಕ್ಷತೆ ಹಾಗೂ ಪರಿಣಾಮಗಳ ಕುರಿತು ಹಲವು ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ತುರ್ತು ಬಳಕೆ ಅಡಿಯಲ್ಲಿ ಕೋವಿಡ್ 19 ಲಸಿಕೆಗೆ ಅನುಮೋದನೆ ನೀಡಲಾಗಿತ್ತು. ತುರ್ತು ಕಾರಣದಿಂದ ಮಾನದಂಡಗಳನ್ನು ಗಾಳಿಗೆ ತೂರಿ ಅವಕಾಶ ನೀಡಿಲ್ಲ. ಹೀಗಾಗಿ ಲಸಿಕೆಯ ಪರಿಣಾಮಗಳ ಬಗ್ಗೆ ಯೋಚನೆ ಮಾಡದೇ ತರಾತುರಿಯಲ್ಲಿ ಅನುಮೋದನೆ ನೀಡಲಾಗಿದೆ ಅನ್ನೋದು ತಪ್ಪು. ಇದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತೆ. ಕೋವಿಡ್ ಸಂದರ್ಭದಲ್ಲಿ ಇದೇ ಲಸಿಕೆ ಲಕ್ಷಾಂತರ ಜೀವಗಳನ್ನು ಉಳಿಸಿದೆ. ಇತರ ಎಲ್ಲಾ ಲಸಿಕೆಗಳಂತೆ ಕೆಲ ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಕೋವಿಡ್ ಲಸಿಕೆಯಲ್ಲೂ ಇದೆ. ವಿಜ್ಞಾನ, ಸಂಶೋಧನೆ, ಪ್ರಯೋಗ, ಅಂಕಿ ಅಂಶಗಳ ಆಧಾರದಲ್ಲಿ ನಡೆಯುತ್ತದೆ. ಊಹೆಯಿಂದಲ್ಲ ಎಂದು ಕಿರಣ್ ಮುಜುಮ್ದಾರ್ ಹೇಳಿದ್ದಾರೆ.
Scroll to load tweet…
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ತರಾತುರಿಯಲ್ಲಿ ಕೋವಿಡ್ ಲಸಿಕೆಗೆ ಅನುಮತಿ ನೀಡಿ ಜನರಿಗೆ ವಿತರಿಸಿದ್ದು ಹೃದಯಾಧಘಾತಕ್ಕೆ ಕಾರಣವಾಗಿರಬಹುದು ಎಂದಿದ್ದರು.ಬಿಜೆಪಿ ಸದಸ್ಯರು ಆರೋಪ ಮಾಡುವಾಗ ಅವರು ಮಾಡಿರುವ ತಪ್ಪನ್ನು ಅವಲೋಕಿಸಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆರೋಪಿಸಿದ್ದರು.
ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈಗಾಗಲೇ ಐಸಿಎಂಆರ್ ಸ್ಪಷ್ಟನೆ ನೀಡಿದೆ. ಅಧ್ಯಯನದಲ್ಲಿ ಕೋವಿಡ್ ಲಸಿಕೆ ಹೃದಯಾಘಾತಕ್ಕೆ ಕಾರಣವಲ್ಲ ಅನ್ನೋದು ಸಾಬೀತಾಗಿದೆ. ಹೀಗಾಗಿ ಕೋವಡ್ ಲಸಿಕೆ ಮೇಲೆ ಆಧಾರ ರಹಿತ ಆರೋಪ ಸರಿಯಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಹಾಸನದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಸರಿಸುಮಾರು 30ಕ್ಕೇರಿಕೆಯಾಗಿದೆ. ಪ್ರತಿ ದಿನ ಹೃದಯಾಘಾತ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯ ಸರ್ಕಾರ ತಜ್ಞವೈದ್ಯರ ಸಮಿತಿ ನೇಮಕ ಮಾಡಿದೆ. ಜೊತೆಗೆ ಹಾಸನ ಹೃದಯಾಘಾತ ತನಿಖೆ ನಡೆಸುತ್ತಿದೆ.