ಪ್ರೊ. ಕೊಣ್ಣೂರಗೆ ಜೀವಮಾನ ಸಾಧನೆ ಪ್ರಶಸ್ತಿ: ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಗೆ ಗೌರವ | Prof Konnur Honored Lifetime Achievement Award For Library Information Science

ಪ್ರೊ. ಕೊಣ್ಣೂರಗೆ ಜೀವಮಾನ ಸಾಧನೆ ಪ್ರಶಸ್ತಿ: ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಗೆ ಗೌರವ | Prof Konnur Honored Lifetime Achievement Award For Library Information Science


ಚೆನ್ನೈನ SALIS ಸಂಸ್ಥೆಯು ಪ್ರೊ.ಪಿ.ವಿ.ಕೊಣ್ಣೂರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿರುವ ಅವರು LIS ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.

ಬೆಳಗಾವಿ (ಜು.2): ಚೆನ್ನೈ ಆಧಾರಿತ ರಾಷ್ಟ್ರೀಯಮಟ್ಟದ ಪ್ರತಿಷ್ಠಿತ ವೃತ್ತಿಪರ ಸಂಸ್ಥೆ ಲೈಬ್ರರಿ ಆ್ಯಂಡ್‌ ಇನ್‌ಫಾರ್ಮೇಶನ್ ಸೈನ್ಸ್ ಅಭಿವೃದ್ಧಿ ಸಂಘಟನೆ (SALIS) ಪ್ರೊ.ಪಿ.ವಿ.ಕೊಣ್ಣೂರ ಅವರಿಗೆ ಜೀವನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಗಾಗಿ ಈ ಪ್ರಶಸ್ತಿಗೆ ಪಾತ್ರರಾದರು.

ಪ್ರೊ.ಕೊಣ್ಣೂರ ಅವರು ಹಲವಾರು ದಶಕಗಳ ಸೇವಾ ಅನುಭವ ಹೊಂದಿರುವ ಹಿರಿಯ ಗ್ರಂಥಾಲಯ ವಿಜ್ಞಾನಿ. ಗೋವಾ ಮತ್ತು ಬೆಂಗಳೂರು ವಿವಿಗಳಲ್ಲಿ ಗ್ರಂಥಾಲಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಂತರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ)ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ಅಮೆರಿಕದ ಪ್ರತಿಷ್ಠಿತ ಫುಲ್‌ಬ್ರೈಟ್‌ ಫೆಲೋಶಿಪ್‌ (ಫುಲ್‌ಬ್ರೈಟ್‌ ಫೆಲೋಶಿಪ್‌ ಇನ್‌ ರೆಸಿಡೆನ್ಸ್‌) ಗೌರವ ಪಡೆದು 2002–2003ರಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ್ ಇಲಿನಾಯ್ಸ್ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಶಾಲೆಯಲ್ಲಿ ಸೇವೆಸಲ್ಲಿಸಿದ್ದಾರೆ.

ನಿರ್ವಹಿಸಿದ ಹುದ್ದೆಗಳು: ಪ್ರೊ.ಪಿ.ವಿ.ಕೊಣ್ಣೂರ ಅವರು ನಾನಾ ವಿಶ್ವವಿದ್ಯಾಲಯಗಳಲ್ಲಿ ಗ್ರಂಥ ಪಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಗೋವಾ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಗ್ರಂಥಪಾಲಕರಾಗಿ (1999–2005), ಬೆಂಗಳೂರು ವಿವಿಯಲ್ಲಿ ಗ್ರಂಥಪಾಲಕರಾಗಿ (2005–2011), ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ 13 ವರ್ಷಗಳ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿಯಲ್ಲಿ ಪ್ರಸಾರಾಂಗದ ನಿರ್ದೇಶಕರಾಗಿ ಮತ್ತು ಇ-ರಿಸೋರ್ಸ್‌ ಕನ್ಸೋರ್ಟಿಯಮ್‌ನ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅನುಭವ ಅವರದ್ದು.

ಪ್ರಸ್ತುತ ಅವರು LIS ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯು ದೇಶಾದ್ಯಂತ ಗ್ರಂಥಪಾಲಕರ ಮತ್ತು ಗ್ರಂಥಾಲಯಗಳ ಸೇವೆಯನ್ನು ಮುಂದುವರಿಸುತ್ತಿದೆ. ಇತ್ತೀಚಿನ ನಾಲ್ಕು ವರ್ಷಗಳಲ್ಲಿ 900ಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಈ ಅಕಾಡೆಮಿ, ಭವಿಷ್ಯದಲ್ಲಿ 10,000 ಸದಸ್ಯರ ಗುರಿಯನ್ನು ಹೊಂದಿದೆ.

ಪ್ರೊ.ಕೊಣ್ಣೂರಗೆ ಲಭಿಸಿರುವ ಪ್ರಶಸ್ತಿಗಳು:

ಪ್ರೊ.ಪಿ.ವಿ.ಕೊಣ್ಣೂರ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. 2006ರಲ್ಲಿ ಸುಶೀಲಾ ಚಂದ್ರ ಹರಿಶ್ಚಂದ್ರ ಉತ್ತಮ ಗ್ರಂಥಪಾಲಕ ಪ್ರಶಸ್ತಿ, 2007ರಲ್ಲಿ ಕರ್ನಾಟಕ ರಾಜ್ಯ ಉತ್ತಮ ಗ್ರಂಥಪಾಲಕ ಪ್ರಶಸ್ತಿ, 2011ರಲ್ಲಿ IASLIC ಉತ್ತಮ ಗ್ರಂಥಪಾಲಕ ಪ್ರಶಸ್ತಿ ಸಂದಿವೆ. ಅದರ ಮುಂದುವರಿದ ಭಾಗವಾಗಿ ಈಗ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಣ, ಸಂಶೋಧನೆ ಮತ್ತು ವೃತ್ತಿಪರ ಅಭಿವೃದ್ಧಿಗೆ ನೀಡಿದ ಅವರ ಅಮೂಲ್ಯ ಕೊಡುಗೆಗಾಗಿ SALIS ಸಂಸ್ಥೆ ಈ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಜತೆಗೆ ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣನ್ಯೂಸ್‌ ಕೂಡ ಗ್ರಂಥಾಲಯ ವಿಭಾಗದಲ್ಲಿನ ಅವರ ಅನುಪಮ ಸೇವೆಯನ್ನು ಪರಿಗಣಿಸಿ ಸುವರ್ಣ ಕನ್ನಡಿಗ-2024ರ ಕಾರ್ಯಕ್ರಮದಲ್ಲಿ ವಿಶೇಷ ಗೌರವ ನೀಡುವ ಮೂಲಕ ಸನ್ಮಾನಿಸಿದೆ.



Source link

Leave a Reply

Your email address will not be published. Required fields are marked *