ಯಾದಗಿರಿಯ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧದ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಾಜುಗೌಡ ವರ್ಗಾವಣೆ ತಡೆಯಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ವಿರುದ್ಧ ಕ್ರಮ ಕೈಗೊಂಡಿದ್ದ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಏಳೇ ತಿಂಗಳಿಗೆ ಸರ್ಕಾರ ವರ್ಗಾವಣೆಗೆ ಮುಂದಾಗಿದೆ ಎಂಬ ಸುದ್ದಿ ಯಾದಗಿರಿ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಮೂಲದ ಈ ಖಡಕ್ ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ್, ಯಾದಗಿರಿಯ ಎಸ್ಪಿಯಾಗಿ ನೇಮಕಗೊಂಡು ಕೇವಲ 7 ತಿಂಗಳಲ್ಲಿ ಇಸ್ಪೀಟ್, ಮಟ್ಕಾ, ಅಕ್ರಮ ಮರಳುಗಾರಿಕೆ ಹಾಗೂ ಕೋಳಿ ಅಂಕಣಗಳ ಮೇಲೆ ನಿಷೇಧ ಹೇರಿದ್ದರು. ಅಧಿಕಾರ ಸ್ವೀಕರಿಸಿದ ದಿನದಿಂದಲೇ ಅಕ್ರಮಗಳ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದ ಅವರು, ದಂಧೆಕೋರರಿಗೆ ಭೀತಿ ಮೂಡಿಸಿದ್ದರು.
ಇದರ ಪರಿಣಾಮವಾಗಿ, ಪ್ರಭಾವಿ ಶಾಸಕರೊಬ್ಬರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಪಿಯವರ ವರ್ಗಾವಣೆಗೆ ಮುಂದಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಖಡಕ್ ಕ್ರಮಗಳನ್ನು ಕೈಗೊಂಡಿದ್ದ ಶಂಕರ್ ಅವರನ್ನು ಮರಳು ಯತ್ನಿಸಿದ ಅಕ್ರಮ ದಂಧೆಕೋರರು ಅದರಲ್ಲಿ ವಿಫಲರಾಗಿದ್ದರು. ಹೀಗಾಗಿ ಇನ್ನೆರಡು ದಿನಗಳಲ್ಲಿ ಶಂಕರ್ ವರ್ಗಾವಣೆ ಆದೇಶ ಬರಲಿದೆ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ರಾಜುಗೌಡ ಅವರು ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಆದೇಶವನ್ನು ತಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಕ್ರಮ ದಂಧೆಗೆ ಕಡಿವಾಣ ಹಾಕಿದ ಶಂಕರ್ ಅವರ ಸೇವೆ ಜಿಲ್ಲೆಗೆ ಅಗತ್ಯವಾಗಿದೆ. ಈ ರೀತಿ ಪ್ರಾಮಾಣಿಕ ಅಧಿಕಾರಿಗೆ ಕೆಲಸ ಮಾಡಲು ಅವಕಾಶ ಇಲ್ಲದಿರುವುದು ಬೇಸರ ತರಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲೇ ಎಸ್ಪಿ ಶಂಕರ್ ಅವರು ಮುಂದುವರೆಯಬೇಕೆಂದು ಸಾರ್ವಜನಿಕರಿಂದಲೂ ಒತ್ತಾಯವಾಗುತ್ತಿದೆ. ಅವರ ಕಾರ್ಯಪ್ರವೃತ್ತಿ ಮತ್ತು ಧೈರ್ಯ ಇಂದು ನಿಜವಾದ ಜನಪರ ಆಡಳಿತದ ಉದಾಹರಣೆಯಾಗಿದ್ದು, ಈ ತೀರ್ಮಾನ ಪುನರ್‌ಪರಿಶೀಲನೆಯ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.