ದೆಹಲಿಯ ಲಜಪತ್ ನಗರದಲ್ಲಿ ಗೃಹಿಣಿ ಮತ್ತು ಆಕೆಯ 14 ವರ್ಷದ ಮಗನನ್ನು ಮನೆಗೆಲಸದವನು ಕೊಲೆಗೈದಿದ್ದಾನೆ. ಬೈದಿದ್ದಕ್ಕೆ ಕೋಪಗೊಂಡು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ: ಕೆಲಸದವನ ಮೇಲೆ ಕೂಗಾಡಿದ್ದಕ್ಕೆ ಆತ ತಾನು ಕೆಲಸ ಮಾಡುತ್ತಿದ್ದ ಮನೆಯ ಗೃಹಿಣಿ ಹಾಗೂ ಆಕೆಯ 14 ವರ್ಷದ ಮಗನ ಕತೆ ಮುಗಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಮನೆಯ ಮಹಿಳೆ ರುಚಿಕಾ ಸೆವಾನಿ ಬೈದಳೆಂದು ಆರೋಪಿ ಆಕೆಯ ಹಾಗೂ ಆಕೆಯ ಮಗನನ್ನು ಕತ್ತು ಸೀಳಿ ಕೊಂದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ದೆಹಲಿಯ ಲಜಪತ್ ನಗರದಲ್ಲಿ ಘಟನೆ ನಡೆದಿದೆ. ಬುಧವಾರ ಸಂಜೆ ಘಟನೆ ನಡೆದಿದ್ದು, ರಾತ್ರಿ 9.30ರ ಸುಮಾರಿಗೆ ರುಚಿಕಾ ಪತಿ ಕುಲ್ದೀಪ್ ಸೆವಾನಿ ಮನೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಕುಲ್ದೀಪ್ ಸೆವಾನಿ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಹಾಕಿರುವುದನ್ನು ನೋಡಿ ಪತಿ, ಪತ್ನಿ ರುಚಿಕಾ ಹಾಗೂ ಮಗ ಕ್ರಿಶ್‌ನನ್ನು ಹೊರಗಿನಿಂದಲೇ ಜೋರಾಗಿ ಕೂಗಿ ಕರೆದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಇಬ್ಬರಿಂದಲೂ ಬಂದಿಲ್ಲ, ಈ ಮಧ್ಯೆ ಕುಲ್ದೀಪ್ ಸೆವಾನಿ ಅವರಿಗೆ ತಮ್ಮ ಮನೆಯ ಗೇಟ್‌ನಲ್ಲಿ ರಕ್ತದ ಕಲೆಗಳು ಕೂಡ ಕಂಡು ಬಂದಿದ್ದು, ಅವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾರೆ. ತಮ್ಮ ಪತ್ನಿ ಹಾಗೂ ಮಗ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದಾದ ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಮನೆ ಒಳಗೆ ಪ್ರವೇಶಿಸಿದ್ದು, ಅಲ್ಲಿ ಆಘಾತಕಾರಿ ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಅಲ್ಲಿ 42ರ ಪ್ರಾಯದ ರುಚಿಕಾ ಬೆಡ್ ಕೆಳಗೆ ನೆಲದ ಮೇಲೆ ಬಿದ್ದಿದ್ದರು. ಆಕೆ ಧರಿಸಿದ ಶರ್ಟ್ ರಕ್ತದಿಂದ ತೇವಗೊಂಡಿತ್ತು. ಆಕೆಯ ತಲೆಯಿಂದ ರಕ್ತದ ಹೊಳೆ ಹರಿದಿತ್ತು. ಹಾಗೆಯೇ ಮುಂದೆ ಹೋದಾಗ 10ನೇ ಕ್ಲಾಸ್ ಓದುತ್ತಿದ್ದ ಮಗನೂ ಬಾತ್‌ರೂಮ್‌ನಲ್ಲಿ ನಿರ್ಜೀವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ರುಚಿಕಾ ಸೆವಾನಿ ಅವರು ಲಜಪತ್ ನಗರದ ಮಾರ್ಕೆಟ್‌ನಲ್ಲಿ ತಮ್ಮ ಪತಿ ಜೊತೆ ಬಟ್ಟೆ ಶಾಪೊಂದನ್ನು ನಡೆಸುತ್ತಿದ್ದರು. ಘಟನೆಯ ಬಳಿಕ ಪರಾರಿಯಾಗಿದ್ದ ಮನೆ ಕೆಲಸದವ ಮುಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರ. ಈತ ಕುಲ್ದೀಪ್ ಮನೆಯಲ್ಲಿ ಕಾರು ಚಾಲಕನಾಗಿದ್ದು, ಹಾಗೂ ಮನೆ ಕೆಲಸದ ಜೊತೆ ಇವರ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.
ರುಚಿಕಾ ಬೈದಿದ್ದಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈತ ಕೊಲೆಯ ಬಳಿಕ ನಗರದಿಂದ ಓಡಿ ಹೋಗಲು ಯತ್ನಿಸಿದ್ದ. ಆದರೆ ಕಡೆಗೂ ಆತನನ್ನು ಪೊಲೀಸರು ಹಿಡಿದಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆರೋಪಿ 24 ವರ್ಷ ಮುಕೇಶ್ ಬಿಹಾರ ಮೂಲದವನಾಗಿದ್ದು, ದೆಹಲಿಯ ಅಮರ್ ಕಾಲೋನಿಯಲ್ಲಿ ಕೆಲಸ ವಾಸವಿದ್ದ. ಈ ಪ್ರದೇಶ ಕುಲ್ದೀಪ್ ಮನೆಗೂ ಸಮೀಪದಲ್ಲಿತ್ತು.
ಘಟನೆಯ ಬಳಿಕ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಘಟನಾ ಸ್ಥಳದಲ್ಲಿ ಸಾಕ್ಷಿ ಕಲೆ ಹಾಕಿದೆ. ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಸಿಸಿಟಿವಿಯನ್ನು ಕೂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.