ಹಳೇ ವಾಹನಕ್ಕೆ ಇಂಧನ ನಿಷೇಧ, ಹಳೇ ವಾಹನ ಗುಜುರಿಗೆ ಎಂದು ಜುಲೈ 1 ರಿಂದ ಜಾರಿಗೆ ತಂದಿದ್ದ ನೀತಿಯಲ್ಲಿ ಮತ್ತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಜನರ ಭಾರಿ ವಿರೋಧ, ಆಕ್ರೋಶಗಳ ಬೆನ್ನಲ್ಲೇ ಸರ್ಕಾರ ಇದೀಗ ಮಾಡಿದ ಬದಲಾವಣೆ ಏನು?
ನವದೆಹಲಿ (ಜು.03) ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜುಲೈ 1 ರಿಂದ ಹಳೇ ವಾಹನಗಳಿಗೆ ಇಂಧನವಿಲ್ಲ ಅನ್ನೋ ನೀತಿ ಜಾರಿಗೊಳಿಸಿತ್ತು. 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಹಾಗೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಕ್ಕೆ ಇಂಧನವಿಲ್ಲ. ಈ ವಾಹನ ದೆಹಲಿ ವ್ಯಾಪ್ತಿಯಲ್ಲಿ ರಸ್ತೆಗೆ ಇಳಿಯುವಂತಿಲ್ಲ ಅನ್ನೋ ನಿಯಮ ಭಾರಿ ಕೋಲಾಹಲ ಸೃಷ್ಟಿಸಿತ್ತು. ಉತ್ತಮ ಕಂಡೀಷನ್, ಉತ್ತಮ ನಿರ್ವಹಣೆ ಮಾಡಿದ್ದ ದುಬಾರಿ ಬೆಲೆಯ ಕಾರುಗಳನ್ನು ಮಾಲೀಕರು ಅನಿವಾರ್ಯವಾಗಿ 1 ಲಕ್ಷ ರೂಪಾಯಿ, 2 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಕೈಸುಟ್ಟುಕೊಂಡಿದ್ದರು. ಈ ನೀತಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಉಲ್ಟಾ ಹೊಡೆದಿದೆ. ಇದೀಗ ಈ ನೀತಿಯಲ್ಲಿ ದೆಹಲಿ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.
ಬದಲಾವಣೆ ಏನು?
ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದ ಕಾರಣ ಇದೀಗ ಈ ನೀತಿಯನ್ನು ಹಿಂಪಡೆಯಲಾಗಿದೆ. ಹಳೇ ವಾಹನಕ್ಕೆ ಇಂಧನವಿಲ್ಲ ಅನ್ನೋ ನೀತಿಯನ್ನು ಈ ತಕ್ಷಣದಿಂದಲೇ ಹಿಂಪಡೆಯಲಾಗಿದೆ. ದೆಹಲಿಯಲ್ಲಿ ಇದೀಗ 10 ರಿಂದ 15 ವರ್ಷ ಹಳೇ ವಾಹನ ಓಡಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ನಿಷೇಧ ಜಾರಿಗೊಳಿಸುವುದು ಕಷ್ಟ ಎಂದು ಸಚಿವ
ದೆಹಲಿ ಪರಿಸರ ಸಚಿವ ಮಂಜಿಂದರ್ ಸಿರ್ಸಾ ಈ ಕುರಿತು ಮಾತನಾಡಿದ್ದಾರೆ. 10 ವರ್ಷ ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟ ವಾಹನ ಪತ್ತೆ ಹಚ್ಚುವುದು ಸವಾಲು. ಇಷ್ಟೇ ಅಲ್ಲ ಪೆಟ್ರೋಲ್ ಅಥವಾ ಡೀಸೆಲ್ ಬೇರೆ ಮಾರ್ಗದ ಮೂಲಕ ತುಂಬಿಸಿಕೊಂಡು ವಾಹನ ನಗರದಲ್ಲಿ ಓಡಾಡುತ್ತಿದೆ. ತಾಂತ್ರಿಕವಾಗಿ ಹಲವು ಅಡಚಣೆಗಳಿರುವ ಕಾರಣ ಈ ನಿಯಮ ವಾಪಸ್ ಪಡೆಯುತ್ತಿದ್ದೇವೆ ಎಂದು ಸಿರ್ಸಾ ಹೇಳಿದ್ದಾರೆ. ಜುಲೈ 1 ರಿಂದ ಜಾರಿಗೊಳಿಸಿದ ಹಳೇ ವಾಹನಕ್ಕೆ ಇಂಧನವಿಲ್ಲ ನೀತಿ ಹಿಂಪಡೆಯಲಾಗಿದೆ ಎಂದು ಸಿರ್ಸಾ ಸ್ಪಷ್ಟಪಡಿಸಿದ್ದಾರೆ.
ಕೆಲ ಸಿದ್ಧತೆಗಳೊಂದಿಗೆ ಮತ್ತೆ ಬರಲಿದೆ ನಿಯಮ
ಎಪ್ರಿಲ್ 23ರಂದು ಈ ನೀತಿ ಕುರಿತು ಆದೇಶ ಹೊರಡಿಸಲಾಗಿತ್ತು. ಜುಲೈ 1 ರಿಂದ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಯಾಗಿತ್ತು. ಆದರೆ ಕೆಲ ಸಮಸ್ಯೆಗಳು, ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆಗಳು ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಡಚಣೆಯಾಗಿ ಪರಿಣಿಸುತ್ತಿದೆ. ಹೀಗಾಗಿ ಈ ನೀತಿ ಹಿಂಪಡೆಯಲಾಗುತ್ತಿದೆ. ಈ ನೀತಿಯಲ್ಲಿ ಎದುರಾಗಿರುವ ಸವಾಲು ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಬಳಿಕ ಸಂಪೂರ್ಣವಾಗಿ ಜಾರಿಗೊಳಿಸಲಾಗುತ್ತದೆ ಎಂದು ಸಿರ್ಸಾ ಹೇಳಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ
ಸರ್ಕಾರ ತಂದ ಈ ನೀತಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ದೆಹಲಿ ಸರ್ಕಾರದ ನೀತಿ ಟ್ರೋಲ್ ಆಗಿತ್ತು. ಇದು ಆಟೋಮೊಬೈಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆ. ಈ ನೀತಿಯಿಂದ ಮಾಲಿನ್ಯ ನಿಯಂತ್ರಣ ಸಾಧ್ಯವಿಲ್ಲ ಎಂದು ಹಲವರು ಆರೋಪಿಸಿದ್ದರು. ಭಾರತ ಈಗಲೂ 40 ವರ್ಷ ಹಳೇ ವಿಮಾನ ಸೇರಿದಂತೆ ಹಲವು ಸಾರಿಗೆ ವಾಹನಗಳನ್ನು ಬಳಸುತ್ತಿದೆ.ಆದರೆ ಮಧ್ಯಮ ವರ್ಗದ ಜನರರ 10 ರಿಂದ 15 ವರ್ಷದ ವಾಹನ ಮಾತ್ರ ನಿಷೇಧ ಎಂದು ನಿವೃತ್ತ ಐಎಎಸ್ ಅಧಿಕಾರಿ ಆಕ್ರೋಶ ಹೊರಹಾಕಿದ್ದರು.
60 ಲಕ್ಷ ವಾಹನಗಳ ಮೇಲೆ ಹೊಡೆತ
ದೆಹಲಿಯಲ್ಲಿ ಜುಲೈ 1 ರಿಂದ ಜಾರಿಗೆ ತಂದಿದ್ದ ಹಳೇ ವಾಹನ ನೀತಿಯಿಂದ ಬರೋಬ್ಬರಿ 60 ಲಕ್ಷ ವಾಹನಗಳಿಗೆ ತೀವ್ರ ಹೊಡೆತ ಬಿದ್ದಿತ್ತು. ಕಾರು, ಬೈಕ್, ಟ್ರಕ್ ಸೇರಿದಂತೆ 60 ಲಕ್ಷ ಹಳೇ ವಾಹನಗಳು ಸ್ಥಿತಿ ಅತಂತ್ರವಾಗಿತ್ತು. ಹಲವರು ತಮ್ಮ ಕಾರುಗಳನ್ನು ಅನಿವಾರ್ಯವಾಗಿ ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಇದೀಗ ದೆಹಲಿ ಸರ್ಕಾರ ಮತ್ತೆ ನಿಯಮ ಹಿಂಪಡೆದ ಕಾರಣ ಹಲವರು ಕೆಂಡಾಮಂಡಲವಾಗಿದ್ದಾರೆ. ನೀತಿಯಿಂದ ಕಾರು ಮಾರಾಟ ಮಾಡಿದ್ದೆ. ಇದೀಗ ನೀತಿ ಹಿಂಪಡೆದಿದ್ದಾರೆ. ಒಂದೆರೆಡು ದಿನದಲ್ಲಿ ಸರಿಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹಲವು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.