ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಬರೋಬ್ಬರಿ 46 ವರ್ಷಗಳಿಂದ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.
ಎಡ್ಜ್‌ಬಾಸ್ಟನ್ (ಜು.03) ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಆರಂಭ ಪಡೆದಿದ್ದು ಮಾತ್ರವಲ್ಲ, ದಾಖಲೆ ಬರೆದಿದೆ. ನಾಯಕ ಶುಭ್‌ಮನ್ ಗಿಲ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಗಿಲ್ 222 ರನ್ ಸಿಡಿಸುತ್ತಿದ್ದಂತೆ ಗಿಲ್ ಬರೋಬ್ಬರಿ 46 ವರ್ಷದ ಹಳೇ ದಾಖಲೆಯನ್ನು ಮುರಿದಿದ್ದಾರೆ. ಇಷ್ಟೇ ಅಲ್ಲ ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟರ್ ಸಿಡಿಸಿದ ಗರಿಷ್ಠ ಮೊತ್ತ ದಾಖಲೆ ಅನ್ನೋ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ.
46 ವರ್ಷದ ಹಳೇ ದಾಖಲೆ ಮುರಿದ ಗಿಲ್
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ 222 ರನ್ ಗಡಿ ದಾಟುತ್ತಿದ್ದಂತೆ ಹೊಸ ದಾಖಲೆ ನಿರ್ಮಾಣವಾಗಿದೆ. ಗಿಲ್ ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ರನ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ. 1979 ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಸುನಿಲ್ ಗವಾಸ್ಕರ್ ಓವರ್ ಕ್ರೀಡಾಂಗಣದಲ್ಲಿ 221 ರನ್ ಸಿಡಿಸಿದ್ದರು. ಇದುವರೆಗೂ ಇದೇ ಭಾರತೀಯ ಬ್ಯಾಟ್ಸ್‌ಮನ್ ಇಂಗ್ಲೆಂಡ್ ನೆಲೆದಲ್ಲಿ ಸಿಡಿಸಿದ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಗಿಲ್ ಈ ದಾಖಲೆ ಮುರಿದಿದ್ದಾರೆ. 46 ವರ್ಷಗಳ ಬಳಿಕ ಗಿಲ್ ಈ ದಾಖಲೆ ಮುರಿದು ಮುನ್ನುಗ್ಗಿದ್ದಾರೆ. ಇಷ್ಟೇ ಅಲ್ಲ ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.
ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ಸ್ಕೋರ್ ಸಾಧಕರು
ಶುಭಮನ್ ಗಿಲ್ : 260 *
ಸುನಿಲ್ ಗವಾಸ್ಕರ್:221
ರಾಹುಲ್ ದ್ರಾವಿಡ್:217
ಸಚಿನ್ ತೆಂಡೂಲ್ಕರ್: 193
ರವಿ ಶಾಸ್ತ್ರಿ: 187
ಇಂಗ್ಲೆಂಡ್‌ನಲ್ಲಿ ನಾಯಕ ಸಿಡಿಸಿದ ಗರಿಷ್ಠ ಸ್ಕೋರ್
ಇಂಗ್ಲೆಂಡ್ ನೆಲದಲ್ಲಿ ಭಾರತೀಯ ನಾಯಕ ಸಿಡಿಸಿದ ಅತೀ ಗರಿಷ್ಠ ಸ್ಕೋರ್ ಅನ್ನೋ ದಾಖಲೆಗೆ ಗಿಲ್ ಪಾತ್ರರಾಗಿದ್ದಾರೆ. 1990ರ ಒಲ್ಡ್ ಟ್ರಾಫೋರ್ಡ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ 179 ರನ್ ಸಿಡಿಸಿದ್ದರು. ಇದು ಭಾರತೀಯ ನಾಯಕ ಸಿಡಿಸಿದ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಗಿಲ್ ಅಜೇಯ 260 ರನ್ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.
ದ್ವೀತಿಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ ಅಬ್ಬರದಿಂದ ಟೀಂ ಇಂಡಿಯಾ 550 ರನ್ ಸಿಡಿಸಿ ಮುನ್ನುಗ್ಗುತ್ತಿದೆ. ಸದ್ಯ 7 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ ಮತ್ತಷ್ಟ ರನ್ ಕಲೆಹಾಕುವತ್ತ ಸಾಗಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಸಜ್ಜಾಗಿದೆ.
ಭಾರತದ ಮೊದಲ ಇನ್ನಿಂಗ್ಸ್
ಯಶಸ್ವಿ ಜೈಸ್ವಾಲ್ 87 ರನ್ ಸಿಡಿಸಿ ಉತ್ತಮ ಆರಂಭ ನೀಡಿದ್ದರು. ಆದರೆ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ನಿರೀಕ್ಷತ ಪ್ರದರ್ಶನ ನೀಡಲಿಲ್ಲ. ರಾಹುಲ್ 2 ರನ್ ಸಿಡಿಸಿದರೆ, ಕರುಣ್ 31 ರನ್ ಸಿಡಿಸಿ ಔಟಾಗಿದ್ದರು. ಇತ್ತ ರಿಷಬ್ ಪಂತ್ 65 ರನ್ ಕಾಣಿಕೆ ನೀಡಿದ್ದರು. ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಸಿಡಿಸಿ ಔಟಾಗಿದ್ದರು. ರವೀಂದ್ರ ಜಡೇಜಾ ಹಾಗೂ ಗಿಲ್ ಜೊತೆಯಾಟ ಟೀಂ ಇಂಡಿಯಾಗೆ ನೆರವಾಗಿತ್ತು. ಜಡೇಜಾ 89 ರನ್ ಕಾಣಿಕೆ ನೀಡಿದ್ದರು. ಇತ್ತ ವಾಶಿಂಗ್ಟನ್ ಸುಂದರ್ 42 ರನ್ ಕಾಣಿಕೆ ನೀಡಿದ್ದರು.