ವೈದ್ಯ ಲೋಕದಲ್ಲೇ ಅಚ್ಚರಿ ಇದು. ಕಾರಣ ಸಂಶೋಧಕರು ಇದೀಗ ಕೃತಕ ರಕ್ತ ಸೃಷ್ಟಿಸಿದ್ದಾರೆ. ಇದು ಜನರ ಜೀವ ಉಳಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೇ ಅಲ್ಲ ಒಮ್ಮೆ ಸೃಷ್ಟಿಸಿದ ಈ ಕೃತಕ ರಕ್ತದ ಆಯಸ್ಸು 2 ವರ್ಷ.
ಟೊಕಿಯೋ (ಜು.03) ವೈದ್ಯ ಕ್ಷೇತ್ರದಲ್ಲಿ ಸಂಶೋಧನೆಗಳು, ಆವಿಷ್ಕಾರಗಳು, ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಈ ಪೈಕಿ ಕೆಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಬದುಕಿನ ದಿಕ್ಕೇ ಬದಲಿಸುವ ಹಾಗೂ ಜನರನ ಜೀವ ಉಳಿಸುವ ಸಂಶೋಧನೆಯೊಂದು ಯಶಸ್ವಿಯಾಗಿದೆ. ಸಂಶೋಧಕರ ಅವಿರತ ಪ್ರಯತ್ನದಿಂದ ಇದೀಗ ಕೃತಕ ರಕ್ತ ಸೃಷ್ಟಿಸಲಾಗಿದೆ. ಇದು ಎಲ್ಲಾ ಬ್ಲಡ್ ಗ್ರೂಪ್‌ಗೆ ಹೊಂದಿಕೊಳ್ಳಲಿದೆ. ತುರ್ತು ಸಂದರ್ಭದಲ್ಲಿ ಈ ರಕ್ತವನ್ನು ಬಳಕೆ ಮಾಡಬಹುದು. ಇದರಿಂದ ಲಕ್ಷಾಂತರ ಮಂದಿಯ ಜೀವ ಉಳಿಸಲು ಸಾಧ್ಯ. ವಿಶೇಷ ಅಂದರೆ ಒಮ್ಮೆ ಸೃಷ್ಟಿಸಿದ ಈ ಕೃತಕ ರಕ್ತ ಬಳಕೆಗೆ ಗರಿಷ್ಠ 2 ವರ್ಷವಿದೆ. ವೈದ್ಯಲೋಕದ ಈ ಸಂಶೋಧನೆ ಭಾರಿ ಸಂಚಲನ ಸೃಷ್ಟಿಸಿದೆ.
ಕೃತಕ ರಕ್ತ ಆವಿಷ್ಕರಿಸಿದ್ದು ಹೇಗೆ?
ಜಪಾನ್ ವೈದ್ಯ ಸಂಶೋಧಕರ ತಂಡ ಈ ಆವಿಷ್ಕಾರ ಮಾಡಿದೆ. ಅವಧಿ ಮೀರಿದ ರಕ್ತದಿಂದ ಹೊತೆಗೆದ ಹಿಮೋಗ್ಲೋಬಿನ್ , ಅವಧಿ ಮುಗಿದ ರಕ್ತದಲ್ಲಿರುವ ಆಕ್ಸಿಜನ್ ಪ್ರೊಟಿನ್ ಸಂಯುಕ್ತದಲ್ಲಿ ಈ ಕೃತಕ ರಕ್ತ ಅವಿಷ್ಕಾರ ಮಾಡಲಾಗಿದೆ. ಈ ರಕ್ತ ಕಣಗಳನ್ನು ವೈರಸ್ ಮುಕ್ತ ಕೆಂಪು ರಕ್ತ ಕಣಗಳಾಗಿ ಆವಿಷ್ಕರಿಸಲಾಗಿದೆ. ಹೀಗೆ ಸೃಷ್ಟಿಸಿದ ಕೃತಕ ರಕ್ತದ ಪ್ರಯೋಗ ಸದ್ಯ ನಡೆಯುತ್ತಿದೆ. ಮುಂದಿನ ಕೆಲ ವರ್ಷಗಳ ಕಾಲ ಈ ಕೃತಕ ರಕ್ತದ ಪರೀಕ್ಷೆ, ಪ್ರಯೋಗ ನಡೆಯಲಿದೆ. ಬಳಿಕ 2030ರ ವೇಳೆಗೆ ಈ ಕೃತಕ ರಕ್ತ ಬಳಕೆಯಾಗಲಿದೆ ಎಂದು ಜಪಾನ್ ಸಂಶೋಧಕರು ಹೇಳಿದ್ದಾರೆ.
ಪರೀಕ್ಷೆ ಹೇಗೆ?
ಟೋಕಿಯೋದ ನಾರಾ ಮೆಡಿಕಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹಿರೋಮಿ ಸಕಾಯಿ ಹಾಗೂ ಸಂಶೋಧಕರ ತಂಡ ಇದರ ಬಳಕೆ ಕುರಿತು ಪ್ರಯೋಗ ನಡೆಸುತ್ತಿದೆ. ಸತತ ಪ್ರಯೋಗ ಹಾಗೂ ಪರೀಕ್ಷೆ ನಡೆಯುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಜಪಾನ್ ವಿಶ್ವದಲ್ಲೇ ಮೊದಲು ಕೃತಕ ರಕ್ತ ತಯಾರಿಸಿದಹಾಗೂ ಯಶಸ್ವಿಯಾಗಿ ಬಳಸಿದ ದೇಶವಾಗಿ ಹೊರಹೊಮ್ಮಲಿದೆ.
ರಕ್ತದಲ್ಲಿರುವ ಎಲ್ಲಾ ಅಂಶಗಳು ಈ ಕೃತಕ ರಕ್ತದಲ್ಲಿ ಇರಲಿದೆ. ಪ್ರಮುಖವಾಗಿ ತುರ್ತು ಸಂದರ್ಭದಲ್ಲಿ, ಗಾಯಗೊಂಡವರ ಚಿಕಿತ್ಸೆ ವೇಳೆ ರಕ್ತದ ಅವಶ್ಯತೆ ಬರಲಿದೆ. ಈ ವೇಳೆ ಈ ಕೃತಕ ರಕ್ತ ಬಳಕೆಗೆ ಹಾಗೂ ಜನರ ಜೀವ ಉಳಿಸಲು ನೆರವಾಗುವಂತೆ ಈ ಸಂಶೋಧನೆ ನಡೆದಿದೆ. ಕೃತಕ ರಕ್ತದ ಕೆಲ ಆವೃತ್ತಿ ಪ್ಲೇಟ್‌ಲೆಟ್ ಒಳಗೊಂಡಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಗಾಯಾಳುಗಳಿಗೆ ಅಥವಾ ತುರ್ತು ರಕ್ತದ ಅವಶ್ಯಕತೆ ಇರುವವರ ಜೀವ ಉಳಿಸಲು ಇದು ನರೆವಾಗಲಿದೆ ಎಂದು ಸಂಶೋಧರು ಹೇಳಿದ್ದಾರೆ.
100 ಮಿಲಿ ನೀಡಬಹುದು
ಸದ್ಯ ನಡೆಸಿರುವ ಸಂಶೋಧನೆ ಹಾಗೂ ಪರೀಕ್ಷೆಗಳ ಆಧಾರದಲ್ಲಿ ಕೃತಕ ರಕ್ತ ಅಶ್ಯಕತೆ ಇದ್ದವರಿಗೆ ಸದ್ಯ 100 ಮಿಲಿ ನೀಡಬಹುದು. ಈಗಾಗಲೇ ನಡೆಸಿದ ಪ್ರಯೋಗದಲ್ಲಿ ಇದು ಸಾಬೀತಾಗಿದೆ. 100 ಮಿಲಿ ಕೃತಕ ರಕ್ತ ನೀಡಿದರೆ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ ಎಂದು ಪ್ರಾಥಮಿಕ ಪ್ರಯೋಗ ಹಾಗೂ ಪರೀಕ್ಷಾ ವರದಿಗಳು ಹೇಳುತ್ತಿದೆ. 2030ರ ವರೆಗೆ ಈ ಪ್ರಯೋಗ ಹಾಗೂ ಪರೀಕ್ಷೆ ನಡೆಯಲಿದೆ ಎಂದು ಸಂಶೋಧಕರು ಹೇಳಿದ್ದಾರೆ.