ಇತ್ತ ಕನ್ನಡದ ಬಿಗ್ಬಾಸ್ ಹವಾ ಸೃಷ್ಟಿಸುತ್ತಿರುವ ನಡುವೆಯೇ ಇದೀಗ ಇತಿಹಾಸ ರಚನೆಗೆ ಬಿಗ್ಬಾಸ್ ಸಜ್ಜಾಗಿದೆ. ಹಬುಬು ಎನ್ನುವ ಸುಂದರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾಳೆ. ಯಾರೀಕೆ?
ಕನ್ನಡದ ಬಿಗ್ಬಾಸ್ ಹವಾ ಜೋರಾಗಿದೆ. ಬಿಗ್ಬಾಸ್ಗೆ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳುವ ಮೂಲಕ, ಅದಕ್ಕೆ ಸಾಕಷ್ಟು ಕಾರಣಗಳನ್ನು ಕೊಟ್ಟು, ನಿರೂಪಣೆ ಸಾಧ್ಯವೇ ಇಲ್ಲ ಎಂದಿದ್ದ ಸುದೀಪ್ ಅವರು ಮತ್ತೆ ಬಿಗ್ಬಾಸ್ಗೆ ಮರಳುವುದಾಗಿ ಹೇಳಿದ್ದಾರೆ. ಮುಂದಿನ ಬಿಗ್ಬಾಸ್ಗೆ ಹೋಗಲ್ಲ ಎಂದು ಹೇಳಿರುವುದು ಪ್ರಚಾರಕ್ಕಾಗಿ ಎಂದು ಈ ಹಿಂದೆ ಹೇಳಿದವರು ಕೆಲವರು ಕಿಚ್ಚನನ್ನು ಈಗ ಕಿಚಾಯಿಸುತ್ತಿದ್ದರೆ, ಸುದೀಪ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಸುದೀಪ್ ಅವರು ಇಲ್ಲದ ಬಿಗ್ಬಾಸ್ ಊಹಿಸಿಕೊಳ್ಳಲೂ ಆಗುವುದಿಲ್ಲ ಎಂದು ಇದಾಗಲೇ ಹಲವರು ಹೇಳಿದ್ದರು. ಅವರೆಲ್ಲಾ ಈಗ ಖುಷಿಯಿಂದ ತೇಲಾಡುತ್ತಿದ್ದಾರೆ. ಮತ್ತೆ ಕೆಲವರು ಬಿಗ್ಬಾಸ್ನಂತ ಅಸಂಬದ್ಧ ಷೋ ಬಿಟ್ಟು ಸುದೀಪ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ, ಈಗಲಾದರೂ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೆಲ್ಲಾ ಖುಷಿಪಟ್ಟವರಿಗೆ ಬೇಸರವೂ ಆಗಿದೆ.
ಅದೇನೇ ಇರಲಿ. ಸದ್ಯ ಕನ್ನಡದ ಬಿಗ್ಬಾಸ್ನಂತೆಯೇ ಇದೀಗ ಹಿಂದಿಯ ಬಿಗ್ಬಾಸೂ ಸಕತ್ ಸದ್ದು ಮ ಆಡುತ್ತಿದೆ. ಇದೇ ವೇಳೆ ತೆಲುಗು ಬಿಗ್ಬಾಸ್ ಕೂಡ ಶುರುವಾಗಲಿದೆ. ಆದರೆ, ಹಿಂದಿನ ಬಿಗ್ಬಾಸ್ ಮಾತ್ರ ಈ ಬಾರಿ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಅದೇನೆಂದರೆ, ಮುಂದಿನ ಬಾರಿ ವಿಶೇಷ ಅತಿಥಿ ಕಾಣಿಸಿಕೊಳ್ಳಲಿದ್ದಾಳೆ. ಅವಳು ದೊಡ್ಮನೆಗೆ ಎಂಟ್ರಿ ಕೊಡುವ ಮೂಲಕ ಇತಿಹಾಸ ಸೃಷ್ಟಿ ಮಾಡಲಿದ್ದಾಳೆ. ಇವಳನ್ನು ನೋಡಿ ಇತರ ಸ್ಪರ್ಧಿಗಳಿಗೆ ಈಗಲೇ ಟೆನ್ಷನ್ ಕೂಡ ಶುರುವಾಗಿದೆ. ಹಾಗಿದ್ದರೆ ಯಾರೀ ಸುಂದರಿ ಎಂದು ನೋಡುವುದಾದರೆ, ಇವಳು ಕೃತಕ ಬುದ್ಧಿಮತ್ತೆಯ ಸುಂದರಿ. ಅಂದರೆ ರೋಬೋಟ್. ಭಾರತೀಯ ರಿಯಾಲಿಟಿ ಟೆಲಿವಿಷನ್‌ಗೆ ಒಂದು ಹೊಸ ಹೆಜ್ಜೆಯಾಗಿ, ಬಿಗ್ ಬಾಸ್ 19 ಯುಎಇಯ ವೈರಲ್ AI ರೋಬೋಟ್ ಗೊಂಬೆ ಹಬುಬುಳನ್ನು ಮಾನವೇತರ ಸ್ಪರ್ಧಿಯಾಗಿ ಪ್ರದರ್ಶಿಸಲು ಸಜ್ಜಾಗಿದೆ ಎನ್ನುವ ಸುದ್ದಿ ಬಂದಿದೆ.
ಕಳೆದ ಸೀಸನ್‌ನಲ್ಲಿ ಗಧರಾಜ್ ಎಂಬ ಕತ್ತೆಯನ್ನು ಪರಿಚಯಿಸಿದ ಬಳಿಕ, ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಐ ಸ್ಪರ್ಧಿಯನ್ನು ಪರಿಚಯಿಸಲಾಗುತ್ತಿದೆ. ಈ ಗೊಂಬೆ 17 ಸ್ಪರ್ಧಿಗಳಲ್ಲಿ ಒಬ್ಬಳಾಗಿರಲಿದ್ದಾಳೆ ಎಂಬ ಗಾಸಿಪ್‌ಗಳು ಕೇಳಿ ಬಂದಿವೆ. ಅಷ್ಟಕ್ಕೂ ಈಕೆ ಸಾಮಾಜಿಕವಾಗಿ ಸಂವಹನ ನಡೆಸಬಲ್ಲಳು. ಅಡುಗೆಯಿಂದ ಹಿಡಿದು ಹಾಡುವವರೆಗೆ ಎಲ್ಲದರಲ್ಲಿಯೂ ಎಕ್ಸ್ಪರ್ಟ್. ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಳು. ಮನೆಯಲ್ಲಿ ಈಕೆಯ ಉಪಸ್ಥಿತಿಯು ಆಟಕ್ಕೆ ಸಂಪೂರ್ಣ ಹೊಸ ಚಲನಶೀಲತೆಯನ್ನು ತರಲಿದೆ ಎನ್ನಲಾಗಿದೆ.
ಅಂದಹಾಗೆ, ಭಾರತದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಚರ್ಚಿಸಲ್ಪಟ್ಟ ರಿಯಾಲಿಟಿ ಶೋಗಳಲ್ಲಿ ಒಂದಾದ ಹಿಂದಿಯ ಬಿಗ್ ಬಾಸ್ 19 ಆಗಸ್ಟ್ನಲ್ಲಿ ಶುರುವಾಗುವ ನಿರೀಕ್ಷೆಯಿದೆ. ಸಂಭಾವ್ಯ ಸೆಲೆಬ್ರಿಟಿ ಭಾಗವಹಿಸುವವರು ಮತ್ತು ಋತುವಿನ ಥೀಮ್ ಬಗ್ಗೆ ಅಭಿಮಾನಿಗಳು ಇದಾಗಲೇ ಗುಸುಗುಸು ಶುರುವಾಗಿದೆ. ಅದರ ನಡುವೆ ಈಗ ಹಬುಬು ಕುರಿತು ಚರ್ಚೆ ಶುರುವಾಗಿದೆ. ಒಬ್ಬ AI ಸ್ಪರ್ಧಿ ಮೈತ್ರಿ ಮಾಡಿಕೊಳ್ಳಬಹುದೇ? ಆಕೆಗೆ ಟಾಸ್ಕ್‌ಗಳನ್ನು ನೀಡಲಾಗುತ್ತದೆಯೇ ಎಂದೆಲ್ಲಾ ಚರ್ಚಿಸಲಾಗುತ್ತಿದೆ.