ಹೊಟ್ಟೆಯ ಸುತ್ತಲೂ ಬೊಜ್ಜು ಸಮಸ್ಯೆ ಬಹುತೇಕ ಮಂದಿಯನ್ನು ಕಾಡುತ್ತಿದೆ. ಆದರೆ ಇದನ್ನು ಸುಲಭದ ವಿಧಾನದಲ್ಲಿ ಕರಗಿಸಬಹುದಾಗಿದೆ. ಈ ಕುರಿತು ಖ್ಯಾತ ಡಯಟಿಷಿಯನ್ ಹೇಳಿದ್ದೇನು ಕೇಳಿ…
ಹೊಟ್ಟೆಯ ಸುತ್ತಲೂ ಬೊಜ್ಜು ಸಮಸ್ಯೆ ಬಹುತೇಕ ಮಂದಿಯನ್ನು ಕಾಡುತ್ತಿದೆ. ಹೊಟ್ಟೆ ಬೊಜ್ಜು ಕರಗಿಸುವುದು ಸವಾಲಿನ ಕೆಲಸ. ಏನೂ ಮಾಡಿದರೂ ಅನೇಕರಿಗೆ ಹೊಟ್ಟೆ ಬೊಜ್ಜನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಇದನ್ನು ಕೇಂದ್ರ ಸ್ಥೂಲಕಾಯತೆ ಮತ್ತು ಟ್ರಂಕಲ್ ಬೊಜ್ಜು ಎಂದೂ ಕರೆಯುತ್ತಾರೆ. ಹೊಟ್ಟೆ ಮತ್ತು ಹೊಟ್ಟೆಯ ಸುತ್ತಲೂ ಒಳಾಂಗಗಳ ಕೊಬ್ಬಿನ ಅತಿಯಾದ ಸಾಂದ್ರತೆಯ ಸ್ಥಿತಿ ಇದಾಗಿದೆ. ಇದಕ್ಕೆ ಕಾರಣಗಳು ನೂರೆಂಟು ಇರಬಹುದು. ಅದರಲ್ಲಿಯೂ ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುವವರು, ಮೈಗೆ ವ್ಯಾಯಾಮ ಇಲ್ಲದೇ ಒಂದೇ ಕಡೆ ಇರುವವರು ಸೇರಿದಂತೆ ಬಹುತೇಕ ಎಲ್ಲರಿಗೂ ಹೊಟ್ಟೆ ಬೊಜ್ಜು ಇದ್ದೇ ಇರುತ್ತದೆ. ಪ್ರತಿನಿತ್ಯ ಜಿಮ್, ವರ್ಕ್ಔಟ್ ಮಾಡಲು ಟೈಮೇ ಇಲ್ಲ ಎನ್ನುವ ಬಹುತೇಕ ಮಂದಿ ಇದ್ದಾರೆ.
ಅಷ್ಟಕ್ಕೂ ಬೊಜ್ಜು ಎಂದರೆ ಏನು ಎಂದು ನೋಡುವುದಾದರೆ, ದೇಹವು ಆರೋಗ್ಯಕರ ತೂಕ ಹೊಂದಿರುವುದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ ಅದನ್ನು ಬೊಜ್ಜು ಎನ್ನಬಹುದು. ಈ ಬೊಜ್ಜಿನ ಪ್ರಮಾಣ ಬಹಳ ಹೆಚ್ಚಾದರೆ ಅದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮಾಡುವುದು. ಅದನ್ನು ಅಸ್ವಸ್ಥ ಸ್ಥೂಲಕಾಯತೆ ಎಂದೂ ಹೇಳಲಾಗುತ್ತದೆ. ಒಮ್ಮೆ ಇದು ಬಂದುಬಿಟ್ಟರೆ ಅದನ್ನು ಹೋಗಲಾಡಿಸುವುದು ಬಲು ಕಷ್ಟ. ಬೊಜ್ಜು ಸುಲಭದಲ್ಲಿ ಕರಗಬೇಕು ಎನ್ನುವವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಡಯಟೀಷಿಯನ್ ಕುಸುಮಾ ಶೆಟ್ಟಿ. ಮೂರೇ ಮೂರು ಪದಾರ್ಥಗಳಿಂದ ಹೊಟ್ಟೆ ಬೊಜ್ಜನ್ನು ತಿಂಗಳ ಒಳಗೆ ಹೇಗೆ ಬೊಜ್ಜು ಕರಗಿಸಬಹುದು ಎನ್ನುವ ಟಿಪ್ಸ್ ಹೇಳಿಕೊಟ್ಟಿದ್ದಾರೆ.
ಹಲವರನ್ನು ಕಾಡುವ ಸಮಸ್ಯೆಗಳಿಗೆ ಡಯಟೀಷಿಯನ್ ಕುಸುಮಾ ಶೆಟ್ಟಿ ಅವರು ಟಿಪ್ಸ್ ಹೇಳಿಕೊಟ್ಟಿದ್ದಾರೆ. ಎಲ್ಲಾ ಭಾಗದ ಬೊಜ್ಜು ಕರಗಿದರೂ ಹೊಟ್ಟೆಯ ಬೊಜ್ಜು ಕರಗುವುದು ಕಷ್ಟ. ವ್ಯಾಯಾಮದ ಜೊತೆ 20-25 ದಿನ ಈ ಪೇಯ ಮಾಡಿ ಕುಡಿದರೆ ಸುಲಭದಲ್ಲಿ ಬೊಜ್ಜು ಕರಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಬೇಕಿರುವುದು ಎರಡು ನಿಂಬೆ ಕಾಯಿ, ಏಳೆಂಟು ಬೆಳ್ಳುಳ್ಳಿ ಹಾಗೂ ಸ್ವಲ್ಪ ಜೇನುತುಪ್ಪ. ಎರಡು ನಿಂಬೆ ಕಾಯಿಯನ್ನು ಹೋಳು ಮಾಡಿ ರಾತ್ರಿಯಿಡೀ ನೆನೆಸಿ ಇಡಬೇಕು. ಬೆಳ್ಳುಳ್ಳಿ ಎಸಳುಗಳು ಕೂಡ ರಾತ್ರಿಯಿಡೀ ನೆನೆಸಿಡಬೇಕು. ಬೆಳಗಿನ ವೇಳೆ, ಬೀಜ ತೆಗೆದು ನಿಂಬೆ ಕಾಯಿಯನ್ನು ಸಿಪ್ಪೆ ಸಹಿತ ಮಿಕ್ಸಿಜಾರ್ಗೆ ಹಾಕಬೇಕು. ಅದರ ಜೊತೆ ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಇಷ್ಟು ಮಾಡಿದರೆ ಮುಗಿಯಿತು. ಒಂದು ಲೋಟ ನೀರಿಗೆ ಪೇಸ್ಟ್ ಬೆರೆಸಬೇಕು. ಬೆಳ್ಳುಳ್ಳಿಯ ಘಾಟು ಹೆಚ್ಚಾಗಿ ಇರುವುದರಿಂದ ಆರಂಭದಲ್ಲಿ ಪೂರ್ಣವಾಗಿ ಕುಡಿಯಲು ಕಷ್ಟವಾಗಬಹುದು. ಇದೇ ಕಾರಣಕ್ಕೆ ದಿನವೂ ಸ್ವಲ್ಪ ಸ್ವಲ್ಪ ಪೇಸ್ಟ್ ಹಾಕಿಕೊಂಡು ರೂಢಿ ಮಾಡಬೇಕು. ಉಗುರು ಬೆಚ್ಚಗಿನ ನೀರಿಗೆ ಈ ಪೇಸ್ಟ್ ಹಾಕಿಕೊಳ್ಳಬೇಕು. ಅದು ಕುಡಿಯಲು ಕಷ್ಟವಾಗುವ ಕಾರಣ, ಸಿಹಿಗಾಗಿ ಒಂದರಿಂದ ಒಂದೂವರೆ ಚಮಚ ಜೇನುತುಪ್ಪ ಹಾಕಿಕೊಳ್ಳಬೇಕು. ಆರಂಭದಲ್ಲಿ ಬೇಕಿದ್ದರೆ ತುಸು ಜಾಸ್ತಿ ಹಾಕಿಕೊಳ್ಳಬಹುದು. ಇದನ್ನು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತಿಂಗಳ ಒಳಗೆ ಹೊಟ್ಟೆಯ ಬೊಜ್ಜು ಕರಗುವುದು ಎನ್ನುವುದು ಕುಸುಮಾ ಶೆಟ್ಟಿ ಟಿಪ್ಸ್.